76ಕ್ಕೆ ಕಾಲಿಟ್ಟ ಬಿಗ್ ಬಿ

Update: 2017-10-11 09:29 GMT

ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಇಂದು ಜೀವನದ ಸಾರ್ಥಕ 75ವರ್ಷಗಳನ್ನು ಪೂರೈಸಿ 76ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಂದ ಹಾಗೆ ಈ ಮೇರುನಟನ ಪೂರ್ಣ ಹೆಸರು ಅಮಿತಾಬ್ ಹರಿವಂಶ ರಾಯ್ ಶ್ರೀವಾಸ್ತವ ಬಚ್ಚನ್. ಅವರ ತಂದೆ ತನ್ನ ಕಾವ್ಯನಾಮವಾಗಿ ಆಯ್ಕೆಮಾಡಿಕೊಂಡಿದ್ದ ‘ಬಚ್ಚನ್’ ಇಂದು ಭಾರತೀಯ ಚಲನಚಿತ್ರ ರಂಗದೊಂದಿಗೆ ಹಾಸುಹೊಕ್ಕಾಗಿದೆ.

‘ಬಾಲಿವುಡ್‌ನ ಶಹನ್‌ಶಾ’ ಎಂದೇ ಹೆಸರಾಗಿರುವ ಬಿಗ್ ಬಿ ‘ಸಹಸ್ರಮಾನದ ತಾರೆ’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಮಿತಾಬ್ ಬಚ್ಚನ್ 75 ವರ್ಷಗಳನ್ನು ಪೂರೈಸಿರುವ ಈ ಸಂದರ್ಭ ಅವರ ಅಭಿಮಾನಿಗಳಿಗೆ ಗೊತ್ತಿರಲೇಬೇಕಾದ ಅವರ ಕುರಿತ ಕೆಲವು ಆಸಕ್ತಿಪೂರ್ಣ ವಿಷಯಗಳಿಲ್ಲಿವೆ.

► ಅಮಿತಾಬ್ ಇರ್ಕ್ಕೈ ಕುಶಲರಾಗಿದ್ದಾರೆ. ಹೌದು, ಅವರು ಎರಡೂ ಕೈಗಳಿಂದ ಅಷ್ಟೇ ಚೆನ್ನಾಗಿ ಬರೆಯಬಲ್ಲರು.

► ಅವರ ತಾರಾಪಟ್ಟ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಬಿಸಿ ನ್ಯೂಸ್ ನಡೆಸಿದ್ದ ಜನಾಭಿಪ್ರಾಯ ಸಂಗ್ರಹದಲ್ಲಿ ಅವರು ಹಾಲಿವುಡ್ ದಿಗ್ಗಜರಾದ ಚಾರ್ಲಿ ಚಾಪ್ಲಿನ್, ಸರ್ ಲಾರೆನ್ಸ್ ಆಲಿವರ್ ಮತ್ತು ಮರ್ಲನ್ ಬ್ರಾಂಡೊ ಅವರನ್ನು ಹಿಂದಿಕ್ಕಿ ‘ಸಹಸ್ರಮಾನದ ನಟ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

► ಬೆಳ್ಳಿತೆರೆಗೆ ಲಗ್ಗೆಯಿಡುವ ಮುನ್ನ ಅವರು ರಂಗನಟ, ರೇಡಿಯೊ ಉದ್ಘೋಷಕ ಮತ್ತು ಕೋಲ್ಕತಾದ ಸರಕು ಸಾಗಣೆ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದರು.

► ತಾನೋರ್ವ ನಟನಾಗಬೇಕೆಂದು ಅಮಿತಾಬ್ ಕನಸು ಕಂಡವರಲ್ಲ. ಅವರು ಭಾರತೀಯ ವಾಯುಪಡೆಗೆ ಸೇರಲು ಬಯಸಿದ್ದರು. ಇಂಜಿನಿಯರ್ ಆಗಬೇಕೆಂಬ ಕನಸೂ ಅವರಲ್ಲಿ ಮೊಳೆತಿತ್ತು.

► 1969ರಲ್ಲಿ ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ ‘ಭುವನ ಶೋಮೆ’ ಚಿತ್ರದಲ್ಲಿ ಹಿನ್ನೆಲೆ ಧ್ವನಿ ನೀಡುವ ಮೂಲಕ ಅಮಿತಾಬ್ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ದೇಶವು ಕಂಡ ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರೂ 1977 ರಲ್ಲಿ ತನ್ನ ‘ಶತರಂಜ್ ಕೆ ಖಿಲಾಡಿ’ ಚಿತ್ರಕ್ಕಾಗಿ ಅವರ ಧ್ವನಿಯನ್ನು ಬಳಸಿಕೊಂಡಿದ್ದರು. ಅಮಿತಾಬ್ ಇಂದು ತನ್ನ ಮಧ್ಯಮ ಶಾರೀರಕ್ಕಾಗಿ ಹೆಸರಾಗಿದ್ದಾರಾದರೂ ಒಂದು ಕಾಲದಲ್ಲಿ ಆಕಾಶವಾಣಿಯು ಅವರನ್ನು ತಿರಸ್ಕರಿಸಿತ್ತು!

► ಬಾಲಿವುಡ್ ಪ್ರವೇಶದ ಅವರ ಆರಂಭದ ಕಷ್ಟದ ದಿನಗಳಲ್ಲಿ ಖ್ಯಾತ ಹಾಸ್ಯನಟ ಮಹಮೂದ್ ಅವರು ತನ್ನ ಮನೆಯಲ್ಲಿ ಆಶ್ರಯ ನೀಡಿದ್ದರು.

► ಬಾಲಿವುಡ್ ಅವರಿಗೆ ಸುಖಾಸುಮ್ಮನೆ ಸೂಪರ್ ಸ್ಟಾರ್ ಬಿರುದು ನೀಡಿಲ್ಲ. 2001ರಲ್ಲಿ ಬಿಡುಗಡೆಯಾಗಿದ್ದ ‘ಅಕ್ಸ್’ ಚಿತ್ರದ ಶೂಟಿಂಗ್‌ಗಾಗಿ ಅವರು ತನ್ನ 58ರ ವಯಸ್ಸಿನಲ್ಲಿ ಸಹನಟ ಮನೋಜ ಬಾಜಪೈ ಅವರೊಂದಿಗೆ 30 ಅಡಿ ಎತ್ತರದಿಂದ ಧುಮುಕಿದ್ದರು.

► 2006,ಅ.31ರಂದು ‘ಶೂಟೌಟ್ ಅಟ್ ಲೋಖಂಡವಾಲಾ’ ಚಿತ್ರಕ್ಕಾಗಿ ಐದು ಗಂಟೆಗಳ ಕಾಲ 23 ದೃಶ್ಯಗಳಲ್ಲಿ ನಟಿಸಿದ್ದರು.

► ಅಮಿತಾಬ್ ಭಾರತೀಯ ಚಿತ್ರರಂಗದಲ್ಲಿ ಚಿತ್ರವೊಂದಕ್ಕೆ ಒಂದು ಕೋ.ರೂ.ಗೂ ಅಧಿಕ ಸಂಭಾವನೆ ಗಳಿಸಿದ ಮೊದಲ ನಟರಾಗಿದ್ದಾರೆ. ಅವರು 1990ರ ದಶಕದವರೆಗೂ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದ ಏಕಮಾತ್ರ ನಟರಾಗಿದ್ದರು.

► 1969ರಲ್ಲಿ ಅವರು ಬ್ರಿಟಿಷ್ ಏರ್‌ವೇಸ್‌ನಲ್ಲಿ ಗಗನ ಸಖಿಯಾಗಿದ್ದ ಮಾಯಾ ಎಂಬ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೆನ್ನಲಾಗಿದೆ. ಆದರೆ ಬಾಲಿವುಡ್ ನಟಿಯಾಗಿ ಹೆಸರು ಮಾಡಿದ್ದ ಜಯಾ ಬಾಧುರಿ ಅವರ ಜೀವನ ಸಂಗಾತಿಯೆಂದು ದೇವರು ಮೊದಲೇ ನಿರ್ಧರಿಸಿದ್ದ.

► ಹರಿವಂಶ ರಾಯ್ ಬಚ್ಚನ್ ಅವರು ಮಗನಿಗೆ ಅಮಿತಾಬ್ ಎಂಂದು ನಾಮಕರಣ ಮಾಡಲು ನಿರ್ಧರಿಸುವ ಮುನ್ನ ಇಂಕಿಲಾಬ್ ಎಂದು ಹೆಸರಿಡಲು ಬಯಸಿದ್ದರು.

► ಅಮಿತಾಬ್ ಇತರ ಯಾವುದೇ ನಟರಿಗಿಂತ ಹೆಚ್ಚು ಸಿನಿಮಾಗಳಲ್ಲಿ ದ್ವಿಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಮಹಾನ್’ ಚಿತ್ರದಲ್ಲಿ ಅವರು ಮೂರು ಪಾತ್ರಗಳಲ್ಲಿ ನಟಿಸಿದ್ದರು. 19 ಸಿನಿಮಾಗಳಲ್ಲಿ ಅವರ ಪಾತ್ರದ ಹೆಸರು ‘ವಿಜಯ್’ ಆಗಿತ್ತು.

► ಅಮಿತಾಬ್ ಸಾಧಾರಣ ವ್ಯಕ್ತಿಯಲ್ಲ. 2002,ಜೂನ್‌ನಲ್ಲಿ ಲಂಡನ್‌ನ ಮೇಡಂ ಟಸ್ಸಾಡ್ಸ್‌ನಲ್ಲಿ ಅವರ ಮೇಣದ ಮಾದರಿಯು ಪ್ರದರ್ಶಿಸಲ್ಪಟ್ಟಿದ್ದಾಗ ಅವರು ಆ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಜೀವಂತ ಏಷ್ಯನ್ ವ್ಯಕ್ತಿಯಾಗಿದ್ದರು. ಬಳಿಕ 2009ರಲ್ಲಿ ಅವರ ಇನ್ನೊಂದು ಮೇಣದ ಪ್ರತಿಮೆ ನ್ಯೂಯಾರ್ಕ್‌ನಲ್ಲಿ ಪ್ರದರ್ಶಿತಗೊಂಡಿತ್ತು. 2011ರಲ್ಲಿ ಹಾಂಗ್‌ಕಾಂಗ್ ಮತ್ತು ಬ್ಯಾಂಕಾಕ್, 2012ರಲ್ಲಿ ವಾಷಿಂಗ್ಟನ್ ಮತ್ತು 2017ರಲ್ಲಿ ದಿಲ್ಲಿಯಲ್ಲಿಯೂ ಅವರ ಮೇಣದ ಪ್ರತಿಮೆಗಳು ರೂಪುಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News