×
Ad

ಸ್ವಚ್ಛತೆ ಮತ್ತು ತಂತ್ರಜ್ಞಾನ ಅಧ್ಯಯನಕ್ಕೆ ಸಹಕಾರ: ಮುಖ್ಯಮಂತ್ರಿ

Update: 2017-10-11 21:47 IST

ಬೆಂಗಳೂರು, ಅ.11: ಸ್ವಚ್ಛತೆ ಮತ್ತು ಅದರ ಕುರಿತಾದ ತಂತ್ರಜ್ಞಾನದ ಹೆಚ್ಚಿನ ಅಧ್ಯಯನಕ್ಕಾಗಿ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿರುವುದು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಘನತ್ಯಾಜ್ಯ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಅ.24ರಂದು ನಾಲ್ಕು ದಿನಗಳ ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಬಿಬಿಎಂಪಿಯ 39 ಪೌರ ಕಾರ್ಮಿಕರು ಹಾಗೂ ಮೂವರು ಅಧಿಕಾರಿಗಳು ಸೇರಿ ಒಟ್ಟು 42 ಜನರ ತಂಡವನ್ನು ಬೀಳ್ಕೊಟ್ಟು ಅವರು ಮಾತನಾಡಿದರು.

ವಿದೇಶಗಳ ಅಭಿವೃದ್ಧಿ ಹಾಗೂ ಇತರೆ ವಿಷಯಗಳ ಕುರಿತು ಈವರೆಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಉನ್ನತ ಹುದ್ದೆಯಲ್ಲಿದ್ದವರು ಮಾತ್ರ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದರು. ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿರುವುದು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯದಲ್ಲಿ ಯಾಂತ್ರಿಕರಣ ಬಳಕೆಯಿಂದ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಹಾಗೂ ಇದರಿಂದ ಮಾನವ ಶ್ರಮ ಕಡಿಮೆಯಾಗುತ್ತದೆ. ಸಿಂಗಾಪುರ ಪ್ರವಾಸಿಗರ ಆಕರ್ಷಣಿಯ ದೇಶವಾಗಿದ್ದು, ಅಲ್ಲಿನ ಜನರಿಗೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವಿದೆ. ಅಲ್ಲಿ ತಮಿಳು ಜನರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಭಾರತೀಯ ಊಟ, ಉಪಾಹಾರ ದೊರೆಯುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ನಾನೂ 20 ವರ್ಷದ ಹಿಂದೆ ಒಂದು ಬಾರಿ ಸಿಂಗಾಪುರಕ್ಕೆ ಹೋಗಿದ್ದು, ಅದು ಇತ್ತೀಚೆಗೆ ಅಭಿವೃದ್ಧಿಯಾದ ಪುಟ್ಟ ದೇಶ. ಪ್ರವಾಸೋದ್ಯಮವನ್ನೆ ಅವಲಂಬಿಸಿದೆ ಎಂದ ಅವರು, ಪೌರ ಕಾರ್ಮಿಕರು ಸ್ವಾಭಿಮಾನದಿಂದ ಬಾಳಬೇಕು. ನಿಮ್ಮ ಮಕ್ಕಳೂ ವಿದ್ಯಾವಂತರಾಗಬೇಕು. ಇದಕ್ಕಾಗಿ ವೇತನವನ್ನು ಹೆಚ್ಚಿಸಲಾಗಿದ್ದು, ಜೊತೆಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಕಾರ್ಯಕ್ರಮ, ಮನೆ ಕಟ್ಟಿಕೊಳ್ಳಲು 7 ಲಕ್ಷ ರೂ. ನೀಡಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಅರಣ್ಯ ಸಚಿವ ರಮಾನಾಥ ರೈ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಬೆಂಗಳೂರು ಮೇಯರ್ ಸಂಪತ್‌ರಾಜ್, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News