×
Ad

ಜೆಡಿಎಸ್ ಕಾರ್ಯಕ್ರಮಗಳ ಪ್ರಚಾರಕ್ಕೆ ದೇವೇಗೌಡ ಸೂಚನೆ

Update: 2017-10-11 21:53 IST

ಬೆಂಗಳೂರು, ಅ.11: ‘ಮನೆ ಮನೆಗೆ ಕುಮಾರಣ್ಣ’, ‘ಈ ಬಾರಿ ಜೆಡಿಎಸ್ ಸರಕಾರ’ ಮತ್ತು ‘ಜೆಡಿಎಸ್ ನಡಿಗೆ ರಾಜ್ಯದ ಅಭಿವೃದ್ಧಿ ಕಡೆಗೆ’ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಒಂದು ತಿಂಗಳ ಕಾಲ ಗ್ರಾಮಗಳತ್ತ ಟಿಕೆಟ್ ಆಕಾಂಕ್ಷಿಗಳು ಮುಖ ಮಾಡಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೂಚನೆ ನೀಡಿದ್ದಾರೆ.

ಬುಧವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆಪಿ ಭವನ)ಯಲ್ಲಿ ನಡೆದ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆ ಎದುರಿಸಲು ಜೆಡಿಎಸ್ ಸಿದ್ಧವಾಗಿದ್ದು, ಬಹುಷಃ ಇನ್ನೆರೆಡು ಮೂರು ತಿಂಗಳಲ್ಲಿ ಚುನಾವಣೆ ಎದುರಾಗಬಹುದು. ಎಸೆಸೆಲ್ಸಿ ಪರೀಕ್ಷೆ ಮಾರ್ಚ್‌ನಲ್ಲಿದೆ ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಚುನಾವಣಾಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದಿದ್ದಾರೆ ಎಂದು ಅವರು ಹೇಳಿದರು.

ನ.2 ರಂದು ಪ್ರಧಾನಿ ರಾಜ್ಯಕ್ಕೆ ಆಗಮಿಸಲಿದ್ದು, ನವ ಭಾರತ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮನ್ ಕೀ ಬಾತ್‌ಗೆ ಸರಿಸಮಾನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮ್ ಕೀ ಬಾತ್, ನವ ಕರ್ನಾಟಕ ನಿರ್ಮಾಣ ಎಂದಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಲು ಜೆಡಿಎಸ್ ಸಿದ್ಧವಾಗಿದೆ ಎಂದು ದೇವೇಗೌಡ ತಿಳಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳ ಹತ್ತಿರ ಹಣವಿದೆ. ಹಣದ ಬಲದ ಮೇಲೆ ಅವರು ಚುನಾವಣೆ ಎದುರಿಸುತ್ತಾರೆ. ನಮ್ಮ ಅಭ್ಯರ್ಥಿಗಳು ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. 2-3 ಆಕಾಂಕ್ಷಿಗಳು ಇರುವ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿದೆ. ಒಂದು ತಿಂಗಳ ಕಾಲ ಎಲ್ಲರೂ ಒಟ್ಟಾಗಿ ಹೋಗಿ. ಚೆನ್ನಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಲಾಗುವುದು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಯಾರ ಹಂಗಿಲ್ಲದೆ ಸರಕಾರ ರಚನೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕಿದೆ. ಪ್ರತಿಹಳ್ಳಿಗೆ ಜೆಡಿಎಸ್ ಕಾರ್ಯಕ್ರಮ ತಲುಪಿಸಬೇಕು. ಯಾರೂ ಕೂಡ ದೇವೇಗೌಡ, ಕುಮಾರಸ್ವಾಮಿ ಹತ್ರ ಬರಬೇಕಾಗಿಲ್ಲ. ಜಿಲ್ಲಾವಾರು ಮಾಹಿತಿ ಪಡೆದು ಟಿಕೆಟ್ ನೀಡುತ್ತೇವೆ. ಕಚೇರಿಯಲ್ಲಿ ಬಂದು ಕುಳಿತು ಕೇಳುವವರಿಗೆ ಅವಕಾಶ ನೀಡುವುದಿಲ್ಲ ಎಂದರು.

ಒಂದು ತಿಂಗಳ ಕಾಲಾವಕಾಶ ನೀಡುತ್ತೇನೆ. ಪ್ರತಿಮನೆಗೆ ಹೋಗಿ ಕುಮಾರಸ್ವಾಮಿ ಮತ್ತು ದೇವೇಗೌಡ ಅಧಿಕಾರಾವಧಿಯಲ್ಲಿ ಏನೇನು ಕೆಲಸ ಆಗಿದೆ ಎಂಬುದನ್ನು ಮತದಾರರಿಗೆ ವಿವರಿಸಿ. ಅಧಿಕಾರಕ್ಕೆ ಬಂದರೆ ಮುಂದೆ ಏನು ಕೆಲಸ ಮಾಡುತ್ತಾರೆ ಎನ್ನುವುದನ್ನೂ ಹೇಳಿ. ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

ಕುಮಾರಣ್ಣ , ನಿಮ್ಮ ಅಪ್ಪನನ್ನು ಬಿಟ್ಟು ಬಾ. ನಾವು ಮತ್ತೆ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದವರೆಲ್ಲ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಅಂದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದವರು ಈಗ ಕುಮಾರಸ್ವಾಮಿ ರಾಮನಗರದಲ್ಲಿ ಗೆದ್ದು ತೋರಿಸಲಿ ಎಂದು ಪಂಥಾಹ್ವಾನ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನ ನಮ್ಮಂದಿಗೆ ಇದ್ದಾರೆ. ನೂರಕ್ಕೆ ನೂರರಷ್ಟು ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ನಾನು ಮತ್ತು ಕುಮಾರಸ್ವಾಮಿ ಭಾಷಣ ಮಾಡುವಾಗ ಟಿವಿಯಲ್ಲಿ ಮುಖ ತೋರಿಸಲು ನಮ್ಮ ಹಿಂದೆ ಬಂದು ನಿಂತುಕೊಳ್ಳುವುದಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡಿ, ಪಕ್ಷ ಸಂಘಟನೆ ಮಾಡಿ. ಮುಂದಿನ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಿ ಎಂದು ದೇವೇಗೌಡ ಸೂಚನೆ ನೀಡಿದರು.

ಶಸ್ತ್ರಚಿಕಿತ್ಸೆಯ ಬಳಿಕ ಕುಮಾರಸ್ವಾಮಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಅವರು ಭಾಗಿಯಾಗಿಲ್ಲ. ನ.1 ರಿಂದ ಅವರು ರಾಜ್ಯ ಪ್ರವಾಸ್ಕಕೆ ಮತ್ತೆ ಮುಂದಾಗುತ್ತಾರೆ ಎಂದು ದೇವೇಗೌಡ ಹೇಳಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದತ್ತ ಮತದಾರರನ್ನು ಸೆಳೆಯಲು ಬಿಜೆಪಿಯ ವಿಸ್ತಾರಕ ಮತ್ತು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪ್ರತಿಯಾಗಿ ‘ಮನೆ ಮನೆಗೆ ಕುಮಾರಣ್ಣ’, ‘ನಮ್ಮ ನಡಿಗೆ ಜೆಡಿಎಸ್ ಕಡೆಗೆ’, ‘ಕರ್ನಾಟಕಕ್ಕೆ ಕುಮಾರಣ್ಣ’ ಎಂಬ ಹೆಸರಿನ ಕಿರು ಹೊತ್ತಿಗೆಯನ್ನು ದೇವೇಗೌಡ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News