‘ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಅನ್ಯಾಯ’ ನಾಲ್ಕನೆ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ
ಬೆಂಗಳೂರು, ಅ.11: ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಆಗ್ರಹಿಸಿ ಕನ್ನಡ ಪಕ್ಷದ ವಿದ್ಯಾರ್ಥಿ ಪರಿಷತ್ತಿನ ನೂರಾರು ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಬುಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾಗಿರುವ ಧರಣಿ ಸತ್ಯಾಗ್ರಹ ಇಂದಿಗೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದ ನಾನಾ ಭಾಗಗಳಿಂದ ಬ್ಯಾಂಕಿಂಗ್ ಹುದ್ದೆಗಳ ಆಕಾಂಕ್ಷಿಗಳು ಪಾಲ್ಗೊಂಡಿದ್ದಾರೆ. ಜೊತೆಗೆ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೆ.ಯೋಗೇಶ್, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳಲ್ಲಿ ಅನ್ಯ ರಾಜ್ಯಗಳಲ್ಲಿನ ಸ್ಥಳೀಯರು ಶೇ.80ಕ್ಕಿಂತ ಹೆಚ್ಚಿನ ಮಂದಿ ಆಯ್ಕೆ ಆಗುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಶೇ.15ರಷ್ಟು ಮಂದಿ ಮಾತ್ರ ಆಯ್ಕೆ ಆಗುತ್ತಿದೆ. 2014ರ ವರೆಗೆ ಸ್ಥಳೀಯ ಅಭ್ಯರ್ಥಿಗಳಿಗೆ ಸಿಗುತ್ತಿದ್ದ ಅವಕಾಶವನ್ನು ಪರಿಷ್ಕರಿಸಿ ಐಬಿಪಿಎಸ್ ಆದೇಶ ಹೊರಡಿಸಿದೆ.ಇದರಿಂದ ಕನ್ನಡಿಗರಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಐಬಿಪಿಎಸ್‌ನ 2012-14ರ ನಿಯಮಾವಳಿ ಪ್ರಕಾರ ಬ್ಯಾಂಕಿಂಗ್ ಕ್ಷೇತ್ರಗಳ ನೇಮಕಾತಿ ನಡೆಸಬೇಕು. ಕೇಂದ್ರ ಸರಕಾರದ ಅಥವಾ ಇತರೆ ಹಣಕಾಸು ನಿರ್ವಹಣಾ ವಲಯದ ‘ಸಿ’ ಮತ್ತು ‘ಡಿ’ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಯು 10+2ರಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿರಬೇಕು. ಪ್ರಸಕ್ತ ಸಾಲಿನ ಐಬಿಪಿಎಸ್ ಪ್ರಾಥಮಿಕ ಪರೀಕ್ಷೆ ನಡೆದಿದೆ. ಮುಂದೆ ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ರಾಜ್ಯಗಳಲ್ಲಿ ನೇಮಕಾತಿ ನೀಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಕನ್ನಡ ಪಕ್ಷದ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಪುರುಷೋತ್ತಮ್ ಸೇರಿ ಪ್ರಮುಖರು ಹಾಜರಿದ್ದರು.