ಡಿ.ವಿ.ಸದಾನಂದಗೌಡ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು
ಬೆಂಗಳೂರು, ಅ.11: ಸಾರ್ವತ್ರಿಕ ಲೋಕಸಭಾ ಚುನಾವಣೆ(2014)ಯಲ್ಲಿ ಅವಧಿ ಮೀರಿ ಪ್ರಚಾರ ನಡೆಸಿದ ಆರೋಪದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಹಾಗೂ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ರಾಜಶೇಖರ್ ಅವರು, 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಡಿ.ವಿ.ಸದಾನಂದಗೌಡ ಅವರು ಮಂಗಳೂರಿನಲ್ಲಿ ಅವಧಿ ಮೀರಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂವಿಧಾನದ ಕಲಂ 171(ಎಚ್), ಕಲಂ 161ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಈ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲು ಬರುವುದಿಲ್ಲ. ಹೀಗಾಗಿ, ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಸರಕಾರದ ಪರ ವಾದಿಸಿದ ವಕೀಲರು, 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಎಫ್‌ಐಆರ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಎಫ್‌ಐಆರ್ ಅನ್ನು ರದ್ದುಪಡಿಸಿ ಆದೇಶ ನೀಡಿತು.