×
Ad

ಮಂಗಳೂರು ಮನಪಾಗೆ ಹೈಕೋರ್ಟ್ ತರಾಟೆ

Update: 2017-10-11 23:09 IST

ಬೆಂಗಳೂರು, ಅ.11: ಮಹಿಳೆಯರು ಪುರುಷರಿಗೆ ಮಸಾಜ್ ಪಾರ್ಲರ್‌ಗಳಲ್ಲಿ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ. ಸಾಕ್ಷ್ಯವೇ ಇಲ್ಲದೇ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಯಾವ ಆಧಾರದಲ್ಲಿ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿಸಿದ್ದೀರಿ ಎಂದು ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.

ನಮ್ಮ ಆಯುರ್ವೇದ, ಪಂಚಕರ್ಮ ಥೆರಪಿ ಶಾಪ್‌ಗಳನ್ನು ಪಾಲಿಕೆ ಬಂದ್ ಮಾಡಿಸಿದೆ ಎಂದು ಆಕ್ಷೇಪಿಸಿ ಆರು ಜನ ಅಂಗಡಿ ಮಾಲಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿತು.

ವಿಚಾರಣೆ ವೇಳೆ ಮಹಾನಗರ ಪಾಲಿಕೆ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ, ನಿಮ್ಮ ತಲೆಯಲ್ಲಿ ಎಂತಹ ನೈತಿಕತೆ ತುಂಬಿಕೊಂಡಿದೆ. ಮಹಿಳೆಯರು ಪುರುಷರಿಗೆೆ, ಪುರುಷರು ಮಹಿಳೆಯರಿಗೆ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.

ಶಾಪ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಬಳಿ ಏನು ಸಾಕ್ಷಗಳಿವೆ. ಒಂದು ವೇಳೆ ಅಲ್ಲಿ ವೇಶ್ಯಾವಾಟಿಕೆ ಅಥವಾ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂದಾದರೆ ಸೂಕ್ತ ಕ್ರಮ ಕೈಗೊಳ್ಳಿ. ನಿಮ್ಮ ವಾದದ ಸರಣಿ ಅನುಸಾರ ನಡೆದುಕೊಂಡರೆ ಇಡೀ ಆಯುರ್ವೇದ ಉದ್ಯಮವೇ ಬಾಗಿಲು ಹಾಕಿಕೊಳ್ಳುತ್ತದೆ ಎಂದು ಕಿಡಿ ಕಾರಿದರು.

ಆದೇಶ: ಅರ್ಜಿದಾರರ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸುವ ದಿಸೆಯಲ್ಲಿ ಪಾಲಿಕೆ ಅಂಗಡಿ ಮಾಲಕರಿಗೆ ಹೊಸ ಷೋಕಾಸ್ ನೋಟಿಸ್ ನೀಡಬೇಕು. ಅವರ ಅಹವಾಲುಗಳನ್ನು ಆಲಿಸಲು ಮುಕ್ತ ಅವಕಾಶ ಕೊಡಬೇಕು. ಆ ನಂತರ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು. ಅಲ್ಲಿಯವರೆಗೂ ಯಾವುದೇ ಬಲವಂತ  ಕ್ರಮ ಕೈಗೊಳ್ಳಬಾರದು ಎಂದು ಪಾಲಿಕೆಗೆ ನ್ಯಾಯಪೀಠ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News