ಅರುಷಿ ತಲ್ವಾರ್-ಹೇಮರಾಜ್ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆಯಿಂದ ಖುಲಾಸೆ

Update: 2017-10-12 09:45 GMT

ಹೊಸದಿಲ್ಲಿ, ಅ.12: ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಅರುಷಿ ತಲ್ವಾರ್-ಹೇಮರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಅಲಹಾಬಾದ್ ಹೈಕೋರ್ಟ್, ಸಿಬಿಐ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ಆರೋಪಿಗಳಾದ ಅರುಷಿ ಹೆತ್ತವರಾದ ಡಾ.ರಾಜೇಶ್ ತಲ್ವಾರ್ ಹಾಗೂ ನೂಪರ್ ತಲ್ವಾರ್‌ರನ್ನು ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಿದೆ. 

ಡಬಲ್ ಮರ್ಡರ್‌ನಲ್ಲಿ ದೋಷಿಗಳಾಗಿರುವ ಅರುಷಿ ಹೆತ್ತವರಾದ ಡಾ.ರಾಜೇಶ್ ತಲ್ವಾರ್ ಹಾಗೂ ನೂಪರ್ ತಲ್ವಾರ್‌ಗೆ 2013ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಅರುಷಿ ಹೆತ್ತವರು ಜೀವಾವಧಿ ಶಿಕ್ಷೆ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೆ.7 ರಂದು ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಬಿ.ಕೆ. ನಾರಾಯಣ ಹಾಗೂ ಎ.ಕೆ. ಮಿಶ್ರಾ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಅ.12 ರಂದು ಅಂತಿಮ ತೀರ್ಪು ಪ್ರಕಟಿಸುವುುದಾಗಿ ತಿಳಿಸಿತ್ತು.

ಏನಿದು ಪ್ರಕರಣ:

 2008ರ ಮೇ 16 ರಂದು 14ರ ಬಾಲಕಿ ಆರುಷಿ ತಲ್ವಾರ್ ಅವರ ಮೃತದೇಹ ನೋಯ್ಡಾದಲ್ಲಿರುವ ತಲ್ವಾರ್ ಕುಟುಂಬದ ಮನೆಯ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿತ್ತು. ಆರುಷಿಯ ಗಂಟಲನ್ನು ಸೀಳಿ, ತಲೆಗೆ ಗಂಭೀರ ಗಾಯಗೊಳಿಸಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಮನೆಗೆಲಸಗಾರ ಹೇಮರಾಜ್ ಮೇಲೆ ಹತ್ಯೆ ಶಂಕೆ ವ್ಯಕ್ತಪಡಿಸಲಾಗಿತ್ತು. ಮರುದಿನ ಹೇಮಂತ್‌ನ ಶವ ಮನೆಯ ಟೆರೇಸ್‌ನಲ್ಲಿ ಪತ್ತೆಯಾಗಿತ್ತು.

ಕೊಲೆ ನಡೆದು ಆರು ದಿನಗಳ ಬಳಿಕ ನೊಯ್ಡೆ ಪೊಲೀಸರು ಇದೊಂದು ಮರ್ಯಾದಾ ಹತ್ಯೆ ಎಂದು ಶಂಕೆ ವ್ಯಕ್ತಪಡಿಸಿದ್ದರು. 2008ರಲ್ಲಿ ಹತ್ಯೆ ಆರೋಪದಲ್ಲಿ ಡಾ. ರಾಜೇಶ್ ತಲ್ವಾರ್‌ರನ್ನು ಬಂಧಿಸಲಾಗಿತ್ತು. ಆಗಿನ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನೊಯ್ಡ ಪೊಲೀಸರಿಂದ ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದರು. 2013ರ ನವೆಂಬರ್ 25 ರಂದು ಸಿಬಿಐ ನ್ಯಾಯಾಧೀಶ ಶ್ಯಾಮ್ ಲಾಲ್ ತಲ್ವಾರ್ ದಂಪತಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News