ಬೆದರಿಕೆ, ಕೇಸುಗಳಿಗೆ ಹೆದರಲು ‘ವೈರ್’ ಅನ್ನು ಸ್ಥಾಪಿಸಿಲ್ಲ

Update: 2017-10-12 13:07 GMT

ಹೊಸದಿಲ್ಲಿ, ಅ.12: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜೇ ಶಾ ಅವರ ಕಂಪೆನಿಗಳ ವಹಿವಾಟಿನ ಬಗ್ಗೆ ‘thewire.in’ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿತ್ತು. ವರದಿಗೆ ಸಂಬಂಧಿಸಿ ಈ ಆರೋಪಗಳು ಸುಳ್ಳು ಎಂದ ಜೇ ಶಾ ಅವರು ‘ದಿ ವೈರ್’ ಹಾಗು ಪತ್ರಕರ್ತೆ ರೋಹಿಣಿ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ thewire.in ನ ಸ್ಥಾಪಕ ಸಂಪಾದಕರಲ್ಲೋರ್ವರಾದ ಸಿದ್ದಾರ್ಥ್ ವರದರಾಜನ್ ಪ್ರತಿಕ್ರಿಯೆ ನೀಡಿದ್ದು, ಈ ಪ್ರತಿಕ್ರಿಯೆಯ ಸಂಪೂರ್ಣ ಸಾರಾಂಶ ಇಲ್ಲಿದೆ.

“ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರನ ಸಂಸ್ಥೆಯ ವ್ಯವಹಾರಗಳ ಬಗ್ಗೆ ‘ದಿ ವೈರ್’ ಲೇಖನವೊಂದನ್ನು ಪ್ರಕಟಿಸಿತ್ತು. ಜೇ ಶಾ ಅವರ ಎರಡು ಕಂಪೆನಿಗಳ ವಿವರಗಳ ಬಗೆಗಿನ ವರದಿ ಇದಾಗಿತ್ತು. ಕಂಪೆನಿಗಳ ರಿಜಿಸ್ಟ್ರಾರ್ ವೆಬ್ ಸೈಟ್ ಗಳಲ್ಲಿ ಲಭ್ಯವಿದ್ದ ಮಾಹಿತಿಗಳನ್ನಾಧರಿಸಿದ ವರದಿ ಇದಾಗಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಎರಡು ಕಂಪೆನಿಗಳ ವ್ಯವಹಾರಗಳಲ್ಲಿ ಭಾರೀ ಬೆಳವಣಿಗೆಯನ್ನು ನಾವು ಗಮನಿಸಿದೆವು”.

“ಸಾಮಾನ್ಯ ಓದುಗರು ಈ ವರದಿಯನ್ನು ಸ್ವಾಗತಿಸಿದರು. 'ದಿ ವೈರ್' ಹೊರತರುವ ಪಾರದರ್ಶಕ ವರದಿಗಳಿಗೆ ಒಂದು ಉದಾಹರಣೆಯಾಗಿ ಓದುಗರು ಈ ವರದಿಯನ್ನು ಕಂಡರು. ಆದರೆ ಬಿಜೆಪಿ ಪಕ್ಷ ಪತ್ರಕರ್ತೆ ರೋಹಿಣಿ ಸಿಂಗ್ ಹಾಗು 'ವೈರ್' ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆಯೊಡ್ಡಿತು. ನಾವು ಅಮಿತ್ ಶಾ ಹಾಗು ಅವರ ಪುತ್ರನ ತೇಜೋವಧೆ ಮಾಡುತ್ತಿದ್ದೇವೆ ಎಂದು ಬಿಜೆಪಿ ಆರೋಪಿಸಿತು. ನಮ್ಮ ಮೇಲೆ ಸಿವಿಲ್ ಹಾಗು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನೂ ಹೂಡುವುದಾಗಿ ಅದು ಬೆದರಿಸಿತು ಮೋದಿ ಸರಕಾರದ ಸಚಿವರಾದ ಪಿಯೂಷ್ ಗೋಯಲ್ ‘ವೈರ್’ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿದರು”.

“ಅಹ್ಮದಾಬಾದ್ ನ ಕೋರ್ಟೊಂದರಲ್ಲಿ ಅಮಿತ್ ಶಾ ಅವರ ಪುತ್ರ ‘ವೈರ್’ ವಿರುದ್ಧ ಹಾಗು ಸಂಪಾದಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳಲ್ಲೇ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಬಹುದು. ನಾನು ಈ ವಿಚಾರದಲ್ಲಿ ಒಂದು ವಿಷಯವನ್ನು ಹೇಳಬಯಸುತ್ತೇನೆ. ಈ ಎಲ್ಲಾ ಪ್ರಕರಣಗಳ ವಿರುದ್ಧವೂ ನಾವು ಹೋರಾಡುತ್ತೇವೆ”.

“ಬೆದರಿಕೆ ಹಾಕಿದಾಗ, ಕೇಸುಗಳನ್ನು ದಾಖಲಿಸಿದಾಗ ಹೆದರಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಿಂದ ದೂರ ಉಳಿಯುವುದಕ್ಕಾಗಿ ನಾವು ‘ವೈರ್’ ಅನ್ನು ಸ್ಥಾಪಿಸಿಲ್ಲ. ಪ್ರಕರಣ ದಾಖಲಾಗಿದೆ. ಇನ್ನೂ ಮೊಕದ್ದಮೆಗಳು ದಾಖಲಾಗಬಹುದು. ಆದರೆ ನಾವು ಹೋರಾಟ ನಡೆಸುತ್ತೇವೆ. ಈ ವಿಚಾರದಲ್ಲಿ ನಿಮ್ಮ ಬೆಂಬಲವಿದೆ“.

“ನಿಮಗೆಲ್ಲರಿಗೂ ತಿಳಿದಂತೆ ವೈರ್ ಲಾಭ ಗಳಿಸುವ ಸಂಸ್ಥೆಯಲ್ಲ. ಬಂಡವಾಳದಾರರು, ಕಾರ್ಪೊರೇಟ್ ದೈತ್ಯರು ಅಥವಾ ರಾಜಕೀಯ ಪಕ್ಷಗಳು ನಮ್ಮ ಸಂಸ್ಥೆಗೆ ಬಂಡವಾಳ ಹಾಕಿಲ್ಲ. ನಮ್ಮ ವೆಬ್ ಸೈಟ್ ಓದುಗರ ಕೊಡುಗೆಯಿಂದ ನಡೆಯುತ್ತಿದೆ. ಹಾಗಾಗಿ ನಾವು ಓದುಗರಿಂದ ಸಿಗುವ ಹಣಕಾಸಿನ ನೆರವಿನಿಂದ ಈ ಪ್ರಕರಣದಲ್ಲಿ ಹೋರಾಟ ನಡೆಸಲಿದ್ದೇವೆ. ಈವರೆಗೆ ನೀವು ನೀಡಿರುವ ಎಲ್ಲಾ ರೀತಿಯ ಸಹಕಾರಕ್ಕೆ ಚಿರಋಣಿಯಾಗಿದ್ದೇವೆ. ಇನ್ನು ಮುಂದೆಯೂ ನಮಗೆ ನಿಮ್ಮಿಂದ ಬೆಂಬಲ ಸಿಗಲಿದೆ ಎಂಬ ಭರವಸೆಯಿದೆ”.

“ಈ ಹೋರಾಟದ ಭಾಗವಾಗಿ ನೀವು ವೈರ್ ಗೆ ಆರ್ಥಿಕ ಸಹಾಯವನ್ನು ನೀಡಬಹುದು. Bit.ly/donatethewire ಈ ಯುಆರ್ ಎಲ್ ಮೂಲಕ ಈ ಹೋರಾಟದಲ್ಲಿ ನಮಗೆ ನೆರವಾಗಿ” ಎಂದು ಸಿದ್ದಾರ್ಥ್ ವರದರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News