ನೂತನ ಟೆಸ್ಟ್ ಹಾಗೂ ಏಕದಿನ ಲೀಗ್ ಆರಂಭಕ್ಕೆ ಐಸಿಸಿ ನಿರ್ಧಾರ

Update: 2017-10-13 07:31 GMT

ದುಬೈ, ಅ.13: ನೂತನ ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ ಲೀಗ್‌ಗಳನ್ನು ಆಯೋಜಿಸುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸದಸ್ಯರುಗಳು ನಿರ್ಧರಿಸಿದ್ದಾರೆ.

 ಟೆಸ್ಟ್ ಸರಣಿಗಳ ಲೀಗ್‌ನಲ್ಲಿ 9 ತಂಡಗಳು ಎರಡು ವರ್ಷಗಳ ಕಾಲ ಆರು ಸರಣಿಗಳನ್ನು ಆಡಲಿವೆ. ಇದರಲ್ಲಿ ಮೂರು ಸ್ವದೇಶ ಹಾಗೂ ಮೂರು ವಿದೇಶಿ ಸರಣಿಗಳಿರುತ್ತವೆ. ಮೊದಲೆರಡು ವರ್ಷಗಳ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 2019ರ ಏಕದಿನ ವಿಶ್ವಕಪ್‌ನ ಬಳಿಕ ಆರಂಭವಾಗಲಿದೆ. ಏಕದಿನ ಲೀಗ್ 2010-21ರಲ್ಲಿ ಅಗ್ರ-13 ತಂಡಗಳ ನಡುವೆ ನಡೆಯಲಿದೆ.

ಏಕದಿನ ಲೀಗ್‌ನಲ್ಲಿ 12 ಪೂರ್ಣ ಸದಸ್ಯ ತಂಡಗಳು ಹಾಗೂ ಪ್ರಸ್ತುತ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಚಾಂಪಿಯನ್‌ಶಿಪ್‌ನ ವಿಜೇತರು ಭಾಗವಹಿಸಲಿವೆೆ. ಏಕದಿನ ಲೀಗ್ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ನೇರ ಅರ್ಹತೆಗಿರುವ ಹೆದ್ದಾರಿಯಾಗಿದೆ.

9 ತಂಡಗಳಿರುವ ಟೆಸ್ಟ್ ಲೀಗ್ ಹಾಗೂ 13 ತಂಡಗಳಿರುವ ಏಕದಿನ ಲೀಗ್ ದ್ವಿಪಕ್ಷೀಯ ಕ್ರಿಕೆಟ್‌ಗೆ ಹೊಸ ಅರ್ಥ ನೀಡಲಿದೆ. 

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್,‘‘ಒಮ್ಮತದ ತೀರ್ಮಾನಕ್ಕೆ ಬರುವ ಮೂಲಕ ಕ್ರಿಕೆಟ್ ಬೆಳವಣಿಗೆಯ ಬಗ್ಗೆ ಆಸಕ್ತಿ ತೋರಿಸಿರುವ ನಮ್ಮ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲು ಬಯಸುವೆ. ದ್ವಿಪಕ್ಷೀಯ ಸರಣಿಗೆ ಸನ್ನಿವೇಶ ಸೃಷ್ಟಿಸುವುದು ಹೊಸ ಸವಾಲಲ್ಲ. ಆದರೆ, ಇದೇ ಮೊದಲ ಬಾರಿ ಪ್ರಬುದ್ಧ ಪರಿಹಾರಕ್ಕೆ ಸಮ್ಮತಿ ಸೂಚಿಸಲಾಗಿದೆ’’ ಎಂದರು.

 ‘‘ಅಂತಾರಾಷ್ಟ್ರೀಯ ದ್ವಿಪಕ್ಷೀಯ ಕ್ರಿಕೆಟ್‌ಗೆ ರೋಮಾಂಚಕಾರಿ ಭವಿಷ್ಯ ಕಲ್ಪಿಸಲು ಐಸಿಸಿ ಸದಸ್ಯರುಗಳು ಹಾಗೂ ನಮ್ಮ ಸಂಘಟಿತ ಪ್ರಯತ್ನವಾಗಿದೆ. ಎರಡು ಲೀಗ್‌ಗಳಿಗೆ ಮಾನ್ಯತೆ ನೀಡುವ ಮೂಲಕ ಎರಡು ವರ್ಷಗಳಿಂದ ಸದಸ್ಯರುಗಳು ನಡೆಸುತ್ತಿರುವ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡಲಾಗಿದೆ’’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News