ದಿಲ್ಲಿಯಲ್ಲಿ ಪಟಾಕಿ ಮಾರಾಟ ಲೈಸನ್ಸ್ ರದ್ದು ಆದೇಶಕ್ಕೆ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ನಕಾರ

Update: 2017-10-13 10:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.13 : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪಟಾಕಿ ಮಾರಾಟ ಲೈಸನ್ಸ್ ಅನುಮತಿ ರದ್ದುಪಡಿಸಿ ತಾನು ಹೊರಡಿಸಿದ್ದ ಆದೇಶದಲ್ಲಿ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಪಟಾಕಿ ಸಿಡಿಸುವುದಕ್ಕೆ ತಾನು ನಿಷೇಧ ಹೇರಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ವರ್ತಕರ ಒಂದು ಗುಂಪು ಗುರುವಾರ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿ ತಾವೀಗಾಗಲೇ ದೀಪಾವಳಿ ನಿಮಿತ್ತ ಪಟಾಕಿಗಳನ್ನು ತಂದಿರಿಸಿರುವುದರಿಂದ ತಮ್ಮ ಪರವಾನಿಗೆ ರದ್ದು ಆದೇಶ ಹಿಂಪಡೆಯಬೇಕೆಂದು ಹಾಗೂ ಪ್ರಕರಣದ ಶೀಘ್ರ ವಿಚಾರಣೆ ನಡೆಸಬೇಕೆಂದು ಕೋರಿತ್ತು.

 ತಾವು ಪಟಾಕಿ ಖರೀದಿಸಲು ಸಾಕಷ್ಟು ಹಣ ಹೂಡಿರುವುದಾಗಿ ಹೇಳಿದ ವರ್ತಕರು, ನ್ಯಾಯಾಲಯದ ಆದೇಶದಿಂದ ತಮಗೆ ಭಾರೀ ನಷ್ಟವಾಗಲಿದೆಯೆಂದೂ ಹೇಳಿದ್ದರು.

ನವೆಂಬರ್ 1ರ ತನಕ ಪಟಾಕಿ ಮಾರಾಟವನ್ನು ನಿಷೇಧಿಸಿರುವ ಸುಪ್ರೀಂ ಕೋರ್ಟ್, ತಡೆಯಾಜ್ಞೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ ಪಟಾಕಿ ಮಾರಾಟ ಅನುಮತಿಸಿದ ತನ್ನ ಸೆಪ್ಟೆಂಬರ್ 12ರ ಆದೇಶ ನವೆಂಬರ್ 1ರ ನಂತರವಷ್ಟೇ ಜಾರಿಗೆ ಬರುವುದು ಎಂದು ಸ್ಪಷ್ಟ ಪಡಿಸಿದೆ.

ಪಟಾಕಿ ಮಾರಾಟ ಲೈಸನ್ಸ್ ರದ್ದುಗೊಳಿಸಿ ತಾನು ನವೆಂಬರ್ 11, 2016ರಂದು ನೀಡಿರುವ ಆದೇಶಕ್ಕೆ ಒಂದು ಅವಕಾಶ ನೀಡಿ ಅದು ಈ ದೀಪಾವಳಿ ಸಂದರ್ಭ ಉತ್ತಮ ಪರಿಣಾಮ ಬೀರುವುದೇ ಎಂದು ನೋಡಬೇಕು, ಎಂದೂ ನ್ಯಾಯಾಲಯ ಹೇಳಿದೆ.

ಕಳೆದ ದೀಪಾವಳಿ ಸಂದರ್ಭ ರಾಜಧಾನಿಯ ಆತಂಕಕಾರಿ ವಾಯುಮಾಲಿನ್ಯ ಮಟ್ಟವನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News