ಚಿನ್ನದ ನಾಣ್ಯ ಖರೀದಿಸುವಾಗ ನೀವು ಇವುಗಳನ್ನು ತಿಳಿದಿರಲೇಬೇಕು

Update: 2017-10-13 10:32 GMT

 ಹಬ್ಬಗಳ ಋತು ನಮ್ಮೆದುಗಿರಿಗಿದೆ. ಜನರು ದೀಪಾವಳಿಗೆ ಖರೀದಿಸಬೇಕಾದ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿರಬಹುದು. ದೀಪಾವಳಿಯ ಸಂದರ್ಭದಲ್ಲಿ, ವಿಶೇಷವಾಗಿ ಧನ ತೃಯೋದಶಿಯಂದು ಚಿನ್ನದ ಖರೀದಿ ಶುಭಕರ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಹೆಚ್ಚಿನವರ ಶಾಪಿಂಗ್ ಲಿಸ್ಟ್‌ನಲ್ಲಿ ಅದು ಆದ್ಯತೆ ಪಡೆದಿರಬಹುದು. ಜನರು ಕೇವಲ ಆಭರಣಗಳ ರೂಪದಲ್ಲಿ ಚಿನ್ನವನ್ನು ಖರೀದಿಸುವುದಿಲ್ಲ, ನಾಣ್ಯಗಳ ರೂಪದಲ್ಲಿಯೂ ಖರೀದಿಸುತ್ತಾರೆ.

ಹಬ್ಬದ ಸಂಭ್ರಮದಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುವವರು ತಿಳಿದಿರಲೇಬೇಕಾದ ಏಳು ಮಾಹಿತಿಗಳು ಇಲ್ಲಿವೆ.

ಚಿನ್ನದ ನಾಣ್ಯಗಳ ಶುದ್ಧತೆ

ಚಿನ್ನದ ನಾಣ್ಯಗಳ ಶುದ್ಧತೆಯನ್ನು ತಿಳಿದುಕೊಳ್ಳಲು ಎರಡು ವಿಧಾನಗಳಿವೆ. ಕ್ಯಾರಟ್ ಮತ್ತು ಫೈನ್‌ನೆಸ್. ಕ್ಯಾರೆಟ್ ಚಿನ್ನದ ಶುದ್ಧತೆಯನ್ನು ತಿಳಿದುಕೊಳ್ಳಲು ಸಾಮಾನ್ಯವಾಗಿ ಬಳಕೆಯಾಗುವ ಮಾಪನವಾಗಿದೆ. 24 ಕ್ಯಾರೆಟ್ ಅನ್ನು ಚಿನ್ನದ ಅತ್ಯಂತ ಪರಿಶುದ್ಧ ರೂಪವೆಂದು ಪರಿಗಣಿಸಲಾಗಿದೆ. ಅದು 24ರಲ್ಲಿ 24 ಭಾಗ ಚಿನ್ನವನ್ನೇ ಒಳಗೊಂಡಿ ರುತ್ತದೆ. 22ಕ್ಯಾರಟ್ ಅಂದರೆ 22 ಭಾಗ ಶುದ್ಧ ಚಿನ್ನ ಮತ್ತು ಎರಡು ಭಾಗ ಆಭರಣಗಳ ತಯಾರಿಕೆಗೆ ಅನುಕೂಲವಾಗುವಂತೆ ಅದನ್ನು ಗಟ್ಟಿಯಾಗಿಸಲು ಸತುವು ಅಥವಾ ಬೆಳ್ಳಿಯಂತಹ ಇತರ ಲೋಹವಾಗಿರುತ್ತದೆ.

 ಫೈನ್‌ನೆಸ್ ಅಥವಾ ಉತ್ಕೃಷ್ಟತೆಯನ್ನು ಚಿನ್ನದ ಶುದ್ಧತೆ, ಮುಖ್ಯವಾಗಿ 24 ಕ್ಯಾರಟ್ ಚಿನ್ನದ ಪರಿಶುದ್ಧತೆಯನ್ನು ಅಳೆಯಲು ಬಳಸಲಾಗುತ್ತದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ವೆಬ್ ಸೈಟ್‌ನ ಪ್ರಕಾರ ಶುದ್ಧಚಿನ್ನವೂ ಕೂಡ ತಯಾರಿಕರಿಂದ ನಿವಾರಿಸಲು ಸಾಧ್ಯವಾಗದ ಅಲ್ಪಪ್ರಮಾಣದ ಅಶುದ್ಧತೆಯನ್ನು ಹೊಂದಿರುತ್ತದೆ. ಉತ್ಕೃಷ್ಟತೆಯನ್ನು ಚಿನ್ನದ ತೂಕ ಮತ್ತು ಒಟ್ಟು ತೂಕ(ಇತರ ಲೋಹಗಳು ಮತ್ತು ಅಶುದ್ಧತೆ ಸೇರಿ)ದ ಅನುಪಾತವನ್ನಾಗಿ ವ್ಯಾಖ್ಯಾನಿಸಲಾಗಿದೆ. ಅದನ್ನು ಪ್ರತಿ 1000 ಯೂನಿಟ್‌ಗಳ ಲೆಕ್ಕದಲ್ಲಿ ಅಳೆಯಲಾಗುತ್ತದೆ. ಅತ್ಯಂತ ಪರಿಶುದ್ಧ ಚಿನ್ನ ಅಂದರೆ 24 ಕ್ಯಾರಟ್ ಚಿನ್ನವು ಶುದ್ಧತೆಯ ಪ್ರತಿ ಸಾವಿರ ಯೂನಿಟ್‌ಗೆ 999.9 ರಷ್ಟು ಉತ್ಕೃಷ್ಟತೆಯನ್ನು ತೋರಿಸುತ್ತದೆ.

ಹಾಲ್ ಮಾರ್ಕಿಂಗ್

 ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗಬಾರದೆಂದು ಭಾರತ ಸರಕಾರವು ಭಾರತೀಯ ಮಾನಕ ಸಂಸ್ಥೆ(ಬಿಐಎಸ್)ಯನ್ನು ಸ್ಥಾಪಿಸಿದೆ. ಬಿಐಎಸ್ ಚಿನ್ನದ ಆಭರಣಗಳು ಮತ್ತು ನಾಣ್ಯಗಳ ಮೇಲೆ ಮುದ್ರೆಯನ್ನೊತ್ತುವ ಮೂಲಕ ಅವುಗಳ ಶುದ್ಧತೆ ಯನ್ನು ಪ್ರಮಾಣೀಕರಿಸುತ್ತದೆ. ಬಿಐಎಸ್‌ನ ಲಾಂಛನ, ಶುದ್ಧತೆ/ಉತ್ಕೃಷ್ಟತೆಯನ್ನು ಸೂಚಿಸುವ ಅಂಕಿಗಳು(ಉದಾ 22 ಕೆಟಿ,916), ಅಸ್ಸೇಯಿಂಗ್ ಮತ್ತು ಹಾಲ್ ಮಾರ್ಕಿಂಗ್ ಸೆಂಟರ್‌ನ ಲಾಂಛನಗಳು, ಮುದ್ರೆಯನ್ನೊತ್ತಿದ ದಿನಾಂಕ ಮತ್ತು ಚಿನ್ನಾಭರಣ ವ್ಯಾಪಾರಿಯ ಗುರುತಿನ ಚಿಹ್ನೆ ಇವುಗಳು ಚಿನ್ನದ ಮೇಲಿರುತ್ತವೆ. ಬಿಐಎಸ್ 2017,ಜ.1ರಿಂದ ಕೇವಲ 22 ಕೆಟಿ,18 ಕೆಟಿ ಮತ್ತು 14 ಕೆಟಿ ಚಿನ್ನಾಭರಣಗಳಿಗೆ ಮಾತ್ರ ಹಾಲ್ ಮಾರ್ಕಿಂಗ್ ನೀಡುತ್ತಿದೆ.

ಬಿಐಎಸ್ 24 ಕ್ಯಾರಟ್ ಚಿನ್ನಕ್ಕೆ ಹಾಲ್ ಮಾರ್ಕ್ ಮಾಡುವುದಿಲ್ಲ, ಆದರೆ ಅದರ ಪರಿಶುದ್ಧತೆಯನ್ನು ಬಿಐಎಸ್‌ನಿಂದ ಅಂಗೀಕೃತ ರಿಫೈನರಿಗಳು ಅಥವಾ ಪ್ರಯೋಗಶಾಲೆ ಗಳಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದೆ.

ಪ್ಯಾಕೇಜಿಂಗ್

ಚಿನ್ನದ ನಾಣ್ಯಗಳು ಹಸ್ತಕ್ಷೇಪ ಸಾಧ್ಯವಿಲ್ಲದ ಪ್ಯಾಕೇಜಿಂಗ್‌ನಲ್ಲಿ ಬರುತ್ತವೆ. ಪ್ಯಾಕೇಜಿಂಗ್ ಚಿನ್ನದ ನಾಣ್ಯದ ಪರಿಶುದ್ಧತೆಯ ವಿಶ್ವಾಸಾರ್ಹತೆಯನ್ನು ಖಚಿತ ಪಡಿಸುವುದರಿಂದ ಗ್ರಾಹಕರು ಚಿನ್ನದ ನಾಣ್ಯವನ್ನು ಮರುಮಾರಾಟ ಮಾಡಲು ಬಯಸಿದ್ದಲ್ಲಿ ಅದರ ಪ್ಯಾಕಿಂಗ್‌ನ್ನು ಹರಿಯಬಾರದು ಅಥವಾ ಬಾಕ್ಸ್‌ನ್ನು ತೆರೆಯಬಾರದು ಎಂದು ಚಿನ್ನಾಭರಣ ವ್ಯಾಪಾರಿಗಳು ಸಾಮಾನ್ಯವಾಗಿ ಸೂಚಿಸುತ್ತಾರೆ.

ತೂಕಗಳು

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 0.5 ಗ್ರಾಮ್‌ನಿಂದ 50 ಗ್ರಾಮ್ ತೂಕದವರೆಗಿನ ಚಿನ್ನದ ನಾಣ್ಯಗಳು ಲಭ್ಯವಿವೆ. 2017,ಅ.11ರಂದು ಎಂಸಿಎಕ್ಸ್‌ನಲ್ಲಿ ಇದ್ದ ಪ್ರತಿ ಹತ್ತು ಗ್ರಾಮ್‌ಗೆ 29,785 ರೂ.ದರದಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಚಿಕ್ಕ, ಅಂದರೆ 0.5 ಗ್ರಾಮ್ ತೂಕದ ಚಿನ್ನದ ನಾಣ್ಯದ ಬೆಲೆ 1,800ರಿಂದ 2,000 ರೂ.ಗಳಾಗುತ್ತವೆ. *ತಯಾರಿಕೆ ವೆಚ್ಚ

 ಚಿನ್ನಾಭರಣಗಳಿಗೆ ಹೋಲಿಸಿದರೆ ನಾಣ್ಯಗಳ ಖರೀದಿಯು ಸುಲಭವಾಗಿದೆ. ಅದು ಅತ್ಯಂತ ಶುದ್ಧ ಚಿನ್ನವನ್ನು 0.5 ಗ್ರಾಮ್ ಕನಿಷ್ಠ ತೂಕದಲ್ಲಿ ಖರೀದಿ ಮಾಡುವ ಆಯ್ಕೆಯನ್ನು ನೀಡುತ್ತದೆ. ಬೆಂಡೋಲೆ, ಉಂಗುರ ಇತ್ಯಾದಿಗಳಿಗೆ ಹೋಲಿಸಿದರೆ ಅದರ ತಯಾರಿಕೆ ವೆಚ್ಚವು ತುಂಬ ಕಡಿಮೆಯಾಗಿರುತ್ತದೆ. ಚಿನ್ನದ ನಾಣ್ಯಗಳ ತಯಾರಿಕೆ ವೆಚ್ಚ ಶೇ.4ರಿಂದ ಶೇ.11ರಷ್ಟಿದ್ದರೆ ಚಿನ್ನಾಭರಣಗಳ ತಯಾರಿಕೆ ವೆಚ್ಚ ಶೇ.8-10 ರಿಂದ ಆರಂಭಗೊಳ್ಳುತ್ತದೆ ಮತ್ತು ಕುಸುರಿ ಕೆಲಸವನ್ನು ಅವಲಂಬಿಸಿ ಅದು ಹೆಚ್ಚುತ್ತಲೇ ಹೋಗುತ್ತದೆ.

ಖರೀದಿ ಆಯ್ಕೆಗಳು

  ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳಲ್ಲದೆ, ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಸರಕಾರಿ ಸ್ವಾಮ್ಯದ ಎಂಎಂಟಿಸಿ, ಮುತ್ತೂಟ್ ಗ್ರೂಪ್‌ನಂತಹ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದಲೂ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. ಈ ನಾಣ್ಯಗಳು ಲಕ್ಷ್ಮಿ, ಗಣೇಶ ಇತ್ಯಾದಿ ದೇವತೆಗಳ ಚಿತ್ರಗಳ ವಿನ್ಯಾಸಗಳನ್ನೂ ಹೊಂದಿರುತ್ತವೆ ಮತ್ತು ನಾಣ್ಯದ ಬೆಲೆ ಈ ವಿನ್ಯಾಸಗಳನ್ನು ಅವಲಂಬಿಸಿ ಹೆಚ್ಚುಕಡಿಮೆಯಾಗಬಹುದು.

ಮರುಮಾರಾಟ ಸುಲಭ

ಬ್ಯಾಂಕಿನಿಂದ ಚಿನ್ನದ ನಾಣ್ಯವನ್ನು ಖರೀದಿಸಲು ನೀವು ಬಯಸಿದ್ದೀರಾದರೆ ಆರ್‌ಬಿಐ ನಿರ್ದೇಶದಂತೆ ಅವು ಈ ನಾಣ್ಯವನ್ನು ನಿಮ್ಮಿಂದ ಮರುಖರೀದಿ ಮಾಡುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಸಾಮಾನ್ಯವಾಗಿ ಓರ್ವ ವ್ಯಾಪಾರಿಯಿಂದ ಖರೀದಿಸಲಾದ ಚಿನ್ನಾಭರಣಗಳು ಅಥವಾ ಚಿನ್ನದ ನಾಣ್ಯಗಳನ್ನು ಇನ್ನೋರ್ವ ವ್ಯಾಪಾರಿಗೆ ಮರುಮಾರಾಟ ಮಾಡಿದರೆ ಲಭಿಸುವ ಮೊತ್ತ ಕಡಿಮೆಯಾಗುತ್ತದೆ. ಏಕೆಂದರೆ ಆ ಇನ್ನೋರ್ವ ವ್ಯಾಪಾರಿ ಕೇವಲ ಚಿನ್ನದ ವೌಲ್ಯವನ್ನು ಮಾತ್ರ ಪಾವತಿಸುತ್ತಾನೆ. ನೀವು ಮೊದಲ ವ್ಯಾಪಾರಿಗೆ ನೀಡಿದ್ದ ತಯಾರಿಕೆ ವೆಚ್ಚ, ಆಡಳಿತಾತ್ಮಕ ವೆಚ್ಚ, ಲಾಭಾಂಶಗಳು ದೊರೆಯುವುದಿಲ್ಲ. ಆದರೆ ಮೊದಲ ವ್ಯಾಪಾರಿಗೇ ಮರುಮಾರಾಟ ಮಾಡಿದರೆ ಇದಕ್ಕಿಂತ ಹೆಚ್ಚಿನ ಬೆಲೆ ದೊರೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News