ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ್ ಉಚ್ಚಾಟನೆ
ಬೆಂಗಳೂರು, ಅ.13: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್(ನಡಹಳ್ಳಿ)ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಎ.ಎಸ್.ಪಾಟೀಲ್‌ಗೆ ಪತ್ರ ಬರೆದಿರುವ ಪರಮೇಶ್ವರ್, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡುವಂತೆ ಮಾಧ್ಯಮಗಳ ಮೂಲಕ ಸ್ವಹಿತಾಸಕ್ತಿಯಿಂದ ಆಗ್ರಹಿಸಿ, ಕಾಂಗ್ರೆಸ್ ಪಕ್ಷದ ನೀತಿ, ನಿಯಮಗಳನ್ನು ಉಲ್ಲಂಘನೆ ಮಾಡಿ ಕಾಂಗ್ರೆಸ್ ಪಕ್ಷದ ಸರಕಾರದ ಬಗ್ಗೆ ಟೀಕೆಗಳನ್ನು ಮಾಡಿದ್ದೀರಿ. ಈ ಕಾರಣಕ್ಕಾಗಿ ನಿಮ್ಮನ್ನು 2015ರ ಎ.23ರಂದು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಎಪ್ರಿಲ್ 24ರಂದು ನೀವು ಲಿಖಿತ ಉತ್ತರವನ್ನು ಕೆಪಿಸಿಸಿಗೆ ಸಲ್ಲಿಸಿದ್ದೀರಿ. ಆದರೆ, ತಮ್ಮ ಉತ್ತರ ಸಮಂಜಸವಾಗಿಲ್ಲ ಹಾಗೂ ಅಂದಿನಿಂದ ಇದುವರೆಗೂ ಪಕ್ಷದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ಪಕ್ಷದ ಘನತೆ ಗೌರವಗಳಿಗೆ ಹಾನಿ ಉಂಟು ಮಾಡುವಂತಹ ಕೆಲಸಗಳಲ್ಲಿ ಮುಂದುವರೆಯುತ್ತಿರುವುದು ಕಂಡು ಬಂದಿದೆ. ಈ ಕಾರಣದಿಂದಾಗಿ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.