ನ್ಯಾಯಾಂಗ ಸಮಸ್ಯೆ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಅ.13: ನ್ಯಾಯಮೂರ್ತಿ ಜಯಂತ್ ಪಟೇಲ್ ವರ್ಗಾವಣೆ ಸೇರಿ ನ್ಯಾಯಾಂಗದಲ್ಲಿ ತಲೆದೋರುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಹೈಕೋರ್ಟ್‌ನ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕೊಲಿಜಿಯಂನ ದ್ವಂದ್ವಗಳು ಮತ್ತು ಸ್ವತಂತ್ರ ನ್ಯಾಯಾಂಗ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಲವು ಕಾರಣಗಳಿಂದ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಬದಲಾಗುತ್ತಿದೆ ಹಾಗೂ ನ್ಯಾಯಾಂಗದಲ್ಲಿ ಸಮಸ್ಯೆಗಳು ತಲೆದೋರುತ್ತಿವೆ ಎಂಬ ಭಾವನೆ ಕಾನೂನು ತಜ್ಞರಲ್ಲಿ ಮೂಡುತ್ತಿದ್ದು, ಈ ಸಮಸ್ಯೆಗಳನ್ನು ಹೋಗಲಾಡಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಪ್ರಕರಣಗಳು ವಿಚಾರಣೆಯಾಗದೆ ಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಆದಷ್ಟು ಬೇಗ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು. ಅಲ್ಲದೆ, ಕೋರ್ಟ್‌ಗಳಲ್ಲಿ ನೇಮಕವಾಗಿರುವ ಶೇ.50ರಷ್ಟು ನ್ಯಾಯಮೂರ್ತಿಗಳು ಶಿಫಾರಸು ಮೂಲಕ ಬಂದವರಾಗಿದ್ದಾರೆ ಎಂದು ಹೇಳಿದರು.
ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಆಸಿಂ ಪಾಂಡ್ಯ ಮಾತನಾಡಿ, ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ರಾಜಕೀಯ ನಡೆಯುತ್ತಿದ್ದು, ಈ ರಾಜಕೀಯದಲ್ಲಿ ಕೊಲಿಜಿಯಂ ಕೂಡ ಭಾಗಿಯಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೊಂದಿ ಮಾತನಾಡಿ, ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆಯಿದ್ದು, ಕೊಲಿಜಿಯಂನವರು ಆದಷ್ಟು ಬೇಗ ಈ ಹುದ್ದೆಗಳನ್ನು ಭರ್ತಿ ಮಾಡುವ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು, ಖಜಾಂಚಿ ಎಚ್.ವಿ.ಪ್ರವೀಣ್, ಪುಟ್ಟೆಗೌಡ, ಎಸ್.ರಾಜು, ಬಿ.ಟಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.