ಕೈವಾರ ನಾರೇಯಣ ಸಾಮಾನ್ಯ ಜನರ ಸದ್ಗುರು

Update: 2017-10-14 11:51 GMT

ತಾತಯ್ಯ ಕೀರ್ತನೆಗಳನ್ನು ಕಟ್ಟಿ ಹಾಡಿದ್ದು ವಚನಗಳನ್ನು ಪಲುಕಿದ್ದು ಕವಿಯಾಗಿ ಅಲ್ಲ. ಆತನ ಆದರ್ಶ ಶಾಸ್ತ್ರ-ಪಂಡಿತ- ಕವಿಗಳಲ್ಲ. ಬದುಕಿನ ಪಾಡುಗಳನ್ನೇ ಹಾಡು ಮಾಡಿದ ಜಾನಪದರು, ಶರಣ ವಚನಕಾರರು, ತನ್ನ ಪೂರ್ವದ ಯೋಗಿ ಸಂತರು. ಹಾಗಾಗಿ ಕುರಿತೋದದ ಜನರಲ್ಲಿ ಓದಲೇಬಾರದ ಜನರಲ್ಲಿ ಉಳಿದುಕೊಂಡ. ಕವಿಯಾಗಿ ಹಾಡದೆ ಹಾಡಿ ಕವಿಯಾದ.

ಬಳೆ ಹೊತ್ತು ಮಾರುವ ಕಸುಬಿನ ಕುಟುಂಬದಲ್ಲಿ ನಾರೇಯಣಪ್ಪ ಹುಟ್ಟಿದ ಜಾತಿ ಆಂಧ್ರ ಬಲಿಜ. ಮಾತೃಭಾಷೆ ತೆಲುಗು. ಹುಟ್ಟಿದ ವರ್ಷದ ಬಗ್ಗೆ ಎರಡು ಅಭಿಪ್ರಾಯವಿದೆ. ಒಂದು, 1730 ಎಂಬುದು, ಎರಡು. 1770 ಎಂದು. ಶತಾಯುಷಿ 110 ವರ್ಷ ಬದುಕಿದ್ದ ಎಂಬುದರಲ್ಲಿ ಎರಡು ಮಾತಿಲ್ಲ. ಮರಣದ ವರ್ಷ 1840 ಅಥವಾ 1880.

ಒಂದುನೂರ ಹತ್ತು ವರ್ಷಗಳ ಬದುಕಿನಲ್ಲಿ ಈತ ಐವತ್ತು ವರ್ಷ ಗಳನ್ನು ಸಂಸಾರದಲ್ಲಿ ಕಳೆದು ಉಳಿದ ಅರವತ್ತು ವರ್ಷಗಳನ್ನು ಯೋಗ ಸಾಧನೆ ಯಲ್ಲಿ ಕಳೆದಂತೆ ತಿಳಿದು ಬರುತ್ತದೆ. ಈತನ ಬಾಲ್ಯದ ದಿನಗಳು ಹೇಗಿತ್ತೆಂಬು ದರ ಬಗ್ಗೆ ಮಾಹಿತಿ ಇಲ್ಲ. ವಿದ್ಯಾಭ್ಯಾಸ ಪ್ರಾಥಮಿಕ ಶಿಕ್ಷಣಕ್ಕೇ ನಿಂತಂತೆ ಹೇಳಿಕೆಗಳಿವೆ. ಬಳೆಯ ವಲಾರ ಹೊರುವಷ್ಟು ದೈಹಿಕ ಶಕ್ತಿ ಪಡೆದಂದಿ ನಿಂದಲೇ ಸಂಪಾದನೆಗೆ ತೊಡಗಿರಬಹುದೆಂದು ಊಹಿಸಬಹುದು. ಬಹುಶಃ ಬಾಲ್ಯವಿವಾಹವೇ ಆಗಿರುವ ಸಾಧ್ಯತೆಯೇ ಹೆಚ್ಚು. ಯೌವನವೂ ಬಳೆಯ ಮಾರಾಟದಲ್ಲೇ ಕಳೆದಿರಲೂಬಹುದು.

ಬಳೆಯ ಮಾರಾಟಕ್ಕಾಗಿ ಈತ ಆಂಧ್ರದ ಚಿತ್ತೂರು ವರೆಗಿನ ದೂರದೂರು ಗಳಿಗೆ ಹೋಗುತ್ತಿದ್ದುದರಿಂದ ಅಲೆಮಾರಿ ವ್ಯಾಪಾರಿಯಾಗಿದ್ದಂತೆ ತಿಳಿದು ಬರುತ್ತದೆ. ಈತನ ವ್ಯಾಪಾರದ ರೀತಿ ಮನೋಭಾವಗಳನ್ನು ಗಮನಿಸಿದರೆ, ಮೃದು ಸ್ವಭಾವದ, ಕರುಣೆ, ತುಂಬಿದ ಮನಸ್ಸಿನವನೆಂದು, ಕಿಸೆಗೆ ಬಂದಷ್ಟೇ ತನ್ನ ಪ್ರಾಪ್ತಿಯೆಂದು ತಿಳಿದು, ಸ್ಥಿತಿಗೆ ಹೊಂದಿಕೊಂಡು ಸಂಸಾರ ಸಾಗಿಸುತ್ತಿದ್ದನೆಂದು ಊಹಿಸಬಹುದು.

ಕೈವಾರ ತಾತಯ್ಯನವರು ಯೋಗಸಾಧನೆ ಮಾಡಿ ಯೋಗವಿದ್ಯಾ ರಹಸ್ಯ ಬಲ್ಲವರಾಗಿದ್ದರು ಎಂಬುದಕ್ಕೆ ಅವರ ಕೃತಿಗಳುದ್ದಕ್ಕೂ ಪುರಾವೆಗಳಿವೆ. ಆದರೆ ಅದನ್ನು ಅವರು ಯಾರಿಂದ ತಿಳಿದರು ಎಂಬುದು ಸ್ಪಷ್ಟವಿಲ್ಲ. ಯೋಗ ವಿದ್ಯೆಯನ್ನು ಪರದೇಶಸ್ವಾಮಿಗಳಿಂದ ಉಪದೇಶರೂಪದಲ್ಲಿ ಗ್ರಹಿಸಿ, ಸ್ವಯಂ ಸಾಧನೆಯಿಂದ ಸಿದ್ಧಿ ಪಡೆದಿರಬಹುದು. ಇಲ್ಲವೆ ತಮ್ಮ ಆರಾಧ್ಯ ದೈವ ಅಮರನಾರೇಯಣಸ್ವಾಮಿಯನ್ನು ಗುರುವೆಂದು ಸ್ವೀಕರಿಸಿ ಏಕಲವ್ಯನಂತೆ ಯೋಗ ವಿದ್ಯಾಭ್ಯಾಸ ಮಾಡಿರಬಹುದು. ಎರಡನ್ನು ಒಪ್ಪಿಕೊಂಡರೂ ಸ್ವಯಂ ಸಾಧಕ ಯೋಗಿ ಎಂದೇ ಹೇಳಬಹುದು.

ಎಲ್ಲಾ ಸಂತ ಯೋಗಿಗಳಂತೆಯೆ ತಾತಯ್ಯನವರು ಸೈತ ಜಾತಿಮತಗಳ ಎಲ್ಲೆ ದಾಟಿದ ಮಹಾನುಭಾವ. ಜಾತಿ ಮತಗಳ ಬಗೆಗಿನ ಈತನ ಟೀಕೆ ವಿಮರ್ಶೆಗಳು ನಂಜಿಲ್ಲದವು. ಪೂರ್ವದ ಅನುಭಾವಿ ಸಂತರಂತೆ ಮಾನವ ಕುಲ ಒಂದೇ ಎಂದು ಎತ್ತರದ ಧ್ವನಿಯಲ್ಲಿ ಈತನೂ ಸಾರಿ ಹೇಳಿ, ಅದರಂತೆ ಬದುಕಿದ ನಿತ್ಯ ಜಂಗಮಯ್ಯನೀತ.

ತಾತಯ್ಯನವರು ತಮ್ಮ ಯೌವ್ವನದಲ್ಲಾಗಲಿ, ಸಂಸಾರಿಯಾಗಿದ್ದಾಗಲಾಗಲಿ ಕೃತಿ ರಚನೆಯನ್ನು ಮಾಡಿದಂತೆ ತೋರುವುದಿಲ್ಲ. ಈ ದಿನ ಗಳಲ್ಲಿ ಕನ್ನಡದ ದಾಸರ, ಶರಣರ ರಚನೆಗಳನ್ನು; ತೆಲುಗಿನ ತ್ಯಾಗರಾಜ, ಕಂಚೆರ್ಲಗೋಪನ್ನ (ಭದ್ರಾಚಲ ರಾಮದಾಸ) ಅನ್ನಮಾಚಾರ್ಯ ಮುಂತಾ ದವರ ರಚನೆಗಳನ್ನು ಕೇಳಿಯೋ, ಇಲ್ಲವೆ ಓದಿಯೋ ತಿಳಿದಿರುವ ಸಾಧ್ಯತೆ ಯಿದೆ. ಆ ದಿನಗಳಲ್ಲಿ ಅವುಗಳನ್ನು ಮನನಮಾಡಿ, ಅವುಗಳ ಸಾರವನ್ನು ಗ್ರಹಿಸಿ ಅಲ್ಲಿನ ಮೌಲ್ಯಗಳನ್ನು ಒಪ್ಪಿಕೊಂಡಿರಬಹುದು. ಹಾಗೆಯೇ ಸರ್ವಜ್ಞ ವೇಮನರನ್ನೂ ತಿಳಿಯುವ ಅವಕಾಶ ದೊರೆತಿರಬಹುದು.

ನಾರೇಯಣಪ್ಪನಿಗೆ ಕೂತು ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುವ ಅವಕಾಶ ಅನುಕೂಲಗಳು ಇರಲೇ ಇಲ್ಲ. ಬಳೆಯ ಮಲಾರ ಹೊತ್ತು ಊರಿಂದೂರಿಗೆ ನಡೆಯುವಾಗ ಸಿಗುತ್ತಿದ್ದ ಏಕಾಂತದಲ್ಲಿ ಚಿಂತನೆಗೆ ಧಾರಾಳ ವಾದ ಅವಕಾಶವಿತ್ತು. ಹಾಗೆಯೇ ಲೋಕಾನುಭವ ಪಡೆಯುವ ಅವಕಾಶವೂ ವಿಪುಲವಾಗಿತ್ತು. ಸಾಮಾನ್ಯರಿಂದ ಹಿಡಿದು ಪ್ರಾಜ್ಞರರೆಗೆ ಪರಿಚಯ ಬೆಳೆಸಿಕೊಳ್ಳುವ ಸದಾವಕಾಶ ದೊರೆಕಿತ್ತು. ಮನಸ್ಸು ಪಕ್ವವಾ ಗುತ್ತಿತ್ತು. ಮನಸ್ಸು ವಯಸ್ಸು ಹದಗೊಳ್ಳುತ್ತಿದ್ದ ಯುಕ್ತ ಕಾಲದಲ್ಲಿ ಪರದೇಶ ಸ್ವಾಮಿಗಳ ದರ್ಶನವಾಗಿ ದೀಕ್ಷೆ, ಮಾರ್ಗದರ್ಶನ, ಬೆಳಕನ್ನು ತೋರಿಸಿತ್ತು. ಆ ಬೆಳಕಿನಲ್ಲಿ ಸಿದ್ಧಿಪಡೆದ ನಾರೇಯಣಪ್ಪ ಇಷ್ಟೂ ದಿನದ ಮೌನಕ್ಕೆ ಮೊದಲು ಮಾತು ಕೊಟ್ಟಿದ್ದು ಕೀರ್ತನೆಗಳ ಮೂಲಕ ಎನ್ನಬಹುದು.

ನಾರೇಯಣಪ್ಪನ ಬದುಕು ಬಡತನದ್ದು. ಸಾಲ ಮಾಡಿದ್ದು ತೀರಿರಲಿಲ್ಲ. ಈ ಎರಡರ ನಿವಾರಣೆಗೆ ಆದಾಯದ ಮೂಲವಿರಲಿಲ್ಲ. ಇದ್ದದ್ದು ಯಾತಕ್ಕೂ ಸಾಲದಾಗಿತ್ತು. ಬಡತನ-ಸಾಲಗಳಿಂದ ರೋಸಿ ಹೋಗಿತ್ತು. ಜೀವ, ಸಂಕಟದಲ್ಲಿ ಕಾಯುವವನೇ ವೆಂಕಟರಮಣ ಎಂಬ ನಂಬಿಕೆ ಪರಂಪರೆ ಯಿಂದ ಬಂದದ್ದು. ಋಣಮುಕ್ತಿಗೆ ಉಳ್ಳವರಲ್ಲಿ ಬೇಡುವ ಮನಸ್ಸು ಭಕ್ತನಲ್ಲಿ. ದೈವಕ್ಕೆ ಎಲ್ಲ ಒಪ್ಪಿಸಿ ಶರಣೆನ್ನುವುದೇ ದಾರಿ. ಅವರ ದೊಂದು ಪದ ಹೀಗಿದೆ...

‘‘ಏನಮ್ಮ ಲಕ್ಷ್ಮೀದೇವಮ್ಮ

ನನ್ನ ಕರುಣಿಸಬಾರದೇನಮ್ಮ

ಕೈಯಲ್ಲಿ ಕಾಸಿದ್ದರೆ ಮಾಡುವುದೇನು ವೆಚ್ಚ

ನಿನ್ನ ಕಿವಿಯ ಓಲೆಗಳ ಕೊಡಲು

ತೀರುವುವು ನನ್ನ ಸಾಲಗಳು....’’ (ಅನುವಾದ)

- ದೈವ ಒಲಿದಾಯ್ತು, ಅನುಗ್ರಹವೂ ಆಯಿತು. ಇದು ತಿಳಿದ ಸಾಲಿ ಗರು ಮಾರ್ಗದರ್ಶನ ಬೇಡಿದರು. ಸಾಲದ ಬಂಧನದಿಂದ ಬಿಡುಗಡೆ ಮಾಡಿದರು. ಋಣಮುಕ್ತ ಭಕ್ತನ ಯೋಗಸಾಧನೆಗೆ ದಾರಿ ತೆರೆದು ಕೊಂಡಿತು.

ನಾರೇಯಣಪ್ಪನ ಬಡತನ, ವ್ಯಾಪಾರಿಗೆ ಸಹಜವಲ್ಲದ ಧಾರಾಳತ ನದಿಂದ ಬಂದ ಬಡತನ ಎರಡಕ್ಕೂ ಪತ್ನಿ ಹೊಂದಿಕೊಂಡು ಅನುಕೂಲವತಿಯಾಗಿದ್ದಿ ರಬಹುದು. ಆತ ಎಲ್ಲೂ ಸತಿನಿಂದೆ ಮಾಡಿಲ್ಲ. ಹೆಣ್ಣಿನ ಬಗ್ಗೆ ಆದರ ಪ್ರೀತಿ ವಿಶ್ವಾಸದ ಭಾವನೆಗಳನ್ನೇ ವ್ಯಕ್ತಪಡಿಸಿರುವುದು ಕಂಡು ಬರುತ್ತದೆ.

ತಾತಯ್ಯ ಕೀರ್ತನೆಗಳನ್ನು ಕಟ್ಟಿ ಹಾಡಿದ್ದು ವಚನಗಳನ್ನು ಪಲುಕಿದ್ದು ಕವಿಯಾಗಿ ಅಲ್ಲ. ಆತನ ಆದರ್ಶ ಶಾಸ್ತ್ರ-ಪಂಡಿತ- ಕವಿಗಳಲ್ಲ. ಬದುಕಿನ ಪಾಡುಗಳನ್ನೇ ಹಾಡು ಮಾಡಿದ ಜಾನಪದರು, ಶರಣ ವಚನಕಾರರು, ತನ್ನ ಪೂರ್ವದ ಯೋಗಿ ಸಂತರು. ಹಾಗಾಗಿ ಕುರಿತೋದದ ಜನರಲ್ಲಿ ಓದಲೇಬಾ ರದ ಜನರಲ್ಲಿ ಉಳಿದುಕೊಂಡ. ಕವಿಯಾಗಿ ಹಾಡದೆ ಹಾಡಿ ಕವಿಯಾದ.

ತಾತಯ್ಯನವರು ಜನಸಾಮಾನ್ಯರ ಆಡು ನುಡಿಯಲ್ಲೇ ಪದ, ವಚನಗಳನ್ನು ಕಟ್ಟಿದರು. ಇದರಿಂದಾಗಿ ಅವುಗಳೊಡಲು ಹೊಮ್ಮುವ ಬೆಳಕನ್ನು ಹಿಡಿಯಲು ಅವರೆದೆಗೆ ಸಾಧ್ಯವಾಯಿತು. ತಮ್ಮ ದೈನಂದಿನ ಬದುಕಿನ ದುಃಖ ದುಮ್ಮಾನ, ನೋವು ಭಯಗಳನ್ನು ಸಾಂತ್ವನದ ನೆಲೆಗೆ ತಂದು ನೇರ್ಪು ಗೊಳಿಸಿಕೊಳ್ಳಲು, ಪ್ರಯತ್ನಿಸಲು, ಬೀಗ ಬಿದ್ದ ನೆಮ್ಮದಿಯ ಬಾಗಿಲನ್ನು ತಾವೇ ತೆರೆದುಕೊಳ್ಳಲು ಈತನ ಪದ-ವಚನಗಳು ಅನುವು ಮಾಡಿಕೊಟ್ಟವು.

ತಾತಯ್ಯನವರ ರಚನೆಗಳು ಸಂಸಾರಿಗೆ ಸಾತ್ವಿಕ ಬದುಕಿಗೆ ಮಾರ್ಗ ದರ್ಶನ ಮಾಡಿದವು. ಭಕ್ತರಿಗೆ ಭಕ್ತಿ ರಸಾಯನವನ್ನು ಉಣ ಬಡಿಸಿದವು. ಯೋಗಿಗಳಿಗೆ ಎದುರಾಗುವ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಜ್ಞಾನಸಾಧನೆಯ ನೈಪುಣ್ಯತೆಯನ್ನು ಬೋಧಿಸಿದವು. ತಮ್ಮ ಜಾತಿ ಕುಲ ಕೀಳೆಂದು ಮುದುಡಿದವರ ಎದೆಗಳಲ್ಲಿ ಕಮಲಗಳನ್ನು ಅರಳಿಸಿದವು.

ತಾತಯ್ಯನವರ ರಚನೆಗಳಿರುವುದು ತೆಲುಗಿನಲ್ಲಿ. ಕನ್ನಡ ಪದಗಳ ಸಂಖ್ಯೆ ಕಡಿಮೆ. ಒಂದು ಮಂಗಳ ಪದವೂ ಸೇರಿದರೆ. ಹದಿನಾರು ಮಾತ್ರ. ಒಂದು ಪದ ಕನ್ನಡ ತೆಲುಗು ಭಾಷೆಯ ಬೆರಕೆ. ಅದನ್ನೂ ಸೇರಿಸಿಕೊಂಡರೆ ಹದಿನೇಳು. ಇವು ಕಡಿಮೆ ಇದ್ದಾಗ್ಯೂ ಸೊಗಸಿಗೆ ಕುಂದಿಲ್ಲ.

ಇದೇ ರೀತಿಯ ಪದ್ಯವೊಂದು ಪಿನ ಬಯಲಾಚಾರ್ಯ ಎಂಬ ಕವಿಯಿಂದ ರಚಿತವಾಗಿದೆ. ಆದರೆ ಈ ಪದ್ಯ ಕನ್ನಡ, ತೆಲುಗು, ತಮಿಳು, ಉರ್ದು ಮಿಶ್ರಿತ. ಕೊಡಗೂಸು ಶಿವನಿಗೆ ಹಾಲು ನೀಡಿ ಕುಡಿಯಲು ಪ್ರಾರ್ಥಿಸಿದ ಸಂದರ್ಭ-ಅದು ಹೀಗಿದೆ,

‘ನೋಡಯ್ಯ ಕರುಣದೊಳ್ ಪವನಾ ಶಿಷ್ಯನಾ

ಬೇಡಿಕೊಂಬೆನು ನಿಮ್ಮ ದೇವರೆ ಕರುಣ ಸಾಗರೇ

ಜಾಗೇಕೆ ಮಾಡೀಯೊ ಇಶ್ವರಾ ಕರೂಣಾಸಾಗರಾ

ಯಲದೇವ ಯಲದೇವ ಮೀಗಡಾ ರುಚಿ ಪಾರಡಾ

ಅಲ್ಲಾ ದೂದು ಪೀರೆ-ಮಾಧವಾ, ವಂದೀಟು ನನ್ನ ಮಾತು ಕೇಳೋ

ಕ್ಯಾರೇ ಮಿಯಾ’ (ಕೃತಿ: ಗೂಡಗೂಚಿ ಕಥಾ, 1667)

- ಇಲ್ಲಿ ಆಡಬಹುದಾದುದು ಆಡುವ ಮಾತೆಂದರೆ ‘ಪ್ರಯೋಗ’ ಎಂಬುದು. ಆದರೆ ಇದೇ ಸತ್ಯವಲ್ಲ. ಅಭಿಮಾನದ್ದು ಮೇಲಾಗಿ ಭಾಷಾ ಬಾಂಧ ವ್ಯದ್ದು. ತಾತಯ್ಯನವರದ್ದಂತೂ ಅಭಿಮಾನದ್ದು ಹೌದು, ದೈವಕೃಪೆ ಗಾಗಿ ಆದದ್ದೂ ಹೌದು.

ತಾತಯ್ಯ ಭಕ್ತ ಯೋಗಿಯಷ್ಟೇ ಆಗಿದ್ದವರಲ್ಲ. ಉಜ್ವಲ ದೇಶಪ್ರೇಮಿ, ದೇಶಭಕ್ರತೂ ಆಗಿದ್ದರು.

ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?

ತಾತಯ್ಯ ಹುಟ್ಟಿದ್ದು ಶೂದ್ರಕುಲದಲ್ಲಿಯಾದರೂ ಬ್ರಹ್ಮಜ್ಞಾನಿಯಾಗಿ ಭಕ್ತಿ-ಯೋಗಗಳ ಅನುಸಂಧಾನ ಮಾಡಿ ಬ್ರಾಹ್ಮಣನ ಏತ್ತರಕ್ಕೆ ಏರಿದರೂ. ಹುಟ್ಟಿನ ಜಾತಿ ಕೀಳೆಂದು ಕುಗ್ಗಲಿಲ್ಲ. ತಾನೂ ಬ್ರಹ್ಮಜ್ಞಾನಿಯಾಗಿ ಬ್ರಾಹ್ಮಣನಾದವನೆಂದು ಹಿಗ್ಗಲಿಲ್ಲ. ಎಲ್ಲ ಸಂತ ಅನುಭಾವಿಗಳಂತೆ ಸಮಚಿತ್ತ ಸಾಧಿಸಿದ ದೊಡ್ಡ ಮನುಷ್ಯ. ಪ್ರೀತಿಯನ್ನು ಮಂತ್ರ ಮಾಡಿಕೊಂಡು ಇಡೀ ಮಾನವ ಕೋಟಿಯನ್ನು ಅಖಿಲ ಜೀವಜಾತದೊಂದಿಗೆ ಪ್ರೀತಿಸಿದ ಮಹಾನುಭಾವ, ಸಿದ್ಧಪುರುಷ, ಜ್ಞಾನದ ಪಕ್ಷಪಾತಿಯಾಗಿ ಅಜ್ಞಾನವನ್ನು ತಿದ್ದಿದವ. ಅಂತೆಯೆ ಇಹದ ಬದುಕನ್ನು ಸಾಗಿಸಿ ಇಹ-ಪರದ ಸೂಕ್ಷ್ಮ ಸಂಬಂಧವನ್ನು ಮನಗಂಡು ಮನಗಾಣಿಸಿದವ. ಅವರ ಕಾಣ್ಕೆ, ಭಕ್ತಿ ಮೂಲದ ಮುಕ್ತಿ. ಹಚ್ಚಿದ ದೀಪವೆಲ್ಲ ಅದೇ. ಅದರ ಬೆಳಕಲ್ಲಿ ಸಾರಿದ್ದು.

 ಚ. ರಘುನಾಥ್

Writer - ರೂಪದರ್ಶಿಗಳು ಚ. ರಘುನಾಥ್

contributor

Editor - ರೂಪದರ್ಶಿಗಳು ಚ. ರಘುನಾಥ್

contributor

Similar News