ಬೇಟೆಗಾರ ಸಸ್ಯಗಳು

Update: 2017-10-14 12:17 GMT

ಬೇಟೆ ಎನ್ನುವುದು ಮನುಷ್ಯನಿಗೆ, ಪ್ರಾಣಿಗಳಿಗೆ ಮಾತ್ರ ಸಾಧ್ಯವೆಂದು ಕೊಂಡಿದ್ದ ನಮಗೆ ಈ ಕೀಟಭಕ್ಷಕ ಸಸ್ಯಗಳ ಕಾರ್ಯಾಚರಣೆ ನಿಬ್ಬೆರಗಾಗಿಸುವುದಲ್ಲಾ! ಸಸ್ಯಗಳು ಬೃಹತ್ ಆಗಿರಲಿ ಅಥವಾ ಸಾಧಾ ರಣವಾಗಿರಲಿ ಅವು ಪ್ರದರ್ಶಿಸುವ ವಿಸ್ಮಯಪೂರಿತ ವೈವಿಧ್ಯತೆಗಳ ಕಡೆ ನೋಟ ಹರಿಸಿದಾಗ ಈ ಸೃಷ್ಟಿಯ ಎಲ್ಲಾ ಚರಾಚರ ವಸ್ತುಗಳಲ್ಲೂ ಒಂದು ಮಹತ್ ಅಡಗಿದೆ ಎಂಬುದು ನಮ್ಮಲ್ಲಿ ನಮ್ರತೆಯನ್ನು ಉಂಟುಮಾಡುತ್ತದೆ.

ಈ ಪ್ರಪಂಚದಲ್ಲಿ ಮನುಷ್ಯ. ಪಶುಪಕ್ಷಿಗಳೂ ಸೇರಿ ನಾವು ಸಸ್ಯಗಳಿಂದ ಸುತ್ತುವರಿದಿದ್ದೇವೆ. ಸಸ್ಯಗಳೇ ನಮ್ಮ ಉಸಿರು. ಆದರೆ ನಮ್ಮ ದಿನ ನಿತ್ಯದ ಬದುಕಿನಲ್ಲಿ ಸಸ್ಯಗಳ ಇರವನ್ನೇ ಲಕ್ಷಿಸದೆ ನಮ್ಮಲ್ಲಿ ನಾವು ಮಗ್ನರಾಗಿ ಬಿಟ್ಟಿದ್ದೇವೆ. ಇಂಥ ವೇಗದ ಬದುಕಿನಲ್ಲಿ ಆಗೀಗ ಕೆಲವು ವಿಚಿತ್ರ ವಾರ್ತೆಗಳು ಪತ್ರಿಕೆಗಳಲ್ಲಿ ಕಂಡು ಬರುತ್ತಿರುತ್ತವೆ. ಹಾಲನ್ನು ಸುರಿಸುವ ಮರ, ಮರದಿಂದ ಹೊಗೆ ಹೊರಡುತ್ತಿವೆ ಎಂಬ ರೋಚಕ ಸುದ್ದಿಗಳನ್ನು ನಾವು ಓದಿ ಮರೆತಿರಲೂ ಬಹುದು. ಕೆಲವು ವೇಳೆ ತಿಳಿದವರು ಇಂತಹ ನೈಸರ್ಗಿಕ ಘಟನೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಒದಗಿಸುತ್ತಾರೆ.

ನಮ್ಮ ತುರ್ತಿನ ಜಗತ್ತಿನಲ್ಲಿ ನಮ್ಮ ಮಧ್ಯೆಯೇ ಸಂಭವಿಸುವ, ವೈಜ್ಞಾನಿಕ ವಾಗಿ ಸಾಬೀತಾಗಿರುವ ಕೆಲವು ಸಸ್ಯ ವಿಸ್ಮಯಗಳನ್ನು ಮುಂದೆ ನೋಡೋಣ. ನಮ್ಮ ಸುತ್ತಮುತ್ತ ಕಣ್ಣಿಗೆ ಢಾಳಾಗಿ ಕಾಣುವ ಸಸ್ಯಗಳು ಪ್ರದರ್ಶಿಸುವ ವೈಚಿತ್ರ್ಯಗಳು ಒಂದೆಡೆಯಾದರೆ, ಕಣ್ಣಿಗೆ ಅಷ್ಟಾಗಿ ಕಾಣದ, ಕಂಡರೂ ನಾವು ಗಮನಿಸದ ಸಸ್ಯವಿಸ್ಮಯಗಳು ಹಲವಾರು ಉಂಟು. ಕಣ್ಣಿಗೆ ಆಕರ್ಷ ಕವಾಗಿ ಕಾಣುವ ಹೂವು. ಎಲೆ ಇತ್ಯಾದಿಗಳಲ್ಲಿ ಕಂಡುಬರುವ ವೈಚಿತ್ರ್ಯತೆ, ಅವುಗಳ ಅನನ್ಯತೆ ಯನ್ನು ಸುಲಭವಾಗಿ ಗುರುತಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ನಾವು ದಿನನಿತ್ಯ ನೋಡಿದರೂ ಗಮನ ಕೊಡದೆ ಇರುವಂತಹ ಸಸ್ಯಗಳಲ್ಲಿ ಅದ್ಭುತ ಜೈವಿಕ ಕ್ರಿಯೆಗಳು ಸಾಗುತ್ತಿರುತ್ತವೆ. ಈ ವಿಸ್ಮಯದ ಸಂಗತಿಗಳನ್ನು ತಿಳಿಯಲು ಕೊಂಚ ಸಸ್ಯವಿಜ್ಞಾನದ ನೆರವು ಅತ್ಯಗತ್ಯ.

               ಕಿಗಿಲ್ಲಾ ಪೆನೆಟಾ

ಅತ್ತಿಹಣ್ಣಿನ ಮರಗಳನ್ನು ಈಗಿನ ದಿನಗಳಲ್ಲಿ ಎಲ್ಲಿಯಾದರೂ ನೋಡು ವುದು ಒಂದು ಅದೃಷ್ಟ ಅತ್ತಿ ಹಣ್ಣಿನ ಹೂವನ್ನು ನೋಡಿದವರಿಲ್ಲ ಎಂದು ಹೇಳುತ್ತಾರೆ. ಅತ್ತಿ ಮರದಲ್ಲಿ ನಸುಗೆಂಪಿನ ಅತ್ತಿಹಣ್ಣುಗಳು ಗುಪ್ಪೆ ಗುಪ್ಪೆ ಯಾಗಿ ಮರದ ಕಾಂಡ, ಕೊಂಬೆಗಳಿಗೆ ಅಂಟಿಕೊಂಡಿರುತ್ತವೆ. ಬಸವಣ್ಣನ ವರು ‘‘ಎನ್ನ ಚಿತ್ತವು ಅತ್ತಿಯ ಹಣ್ಣು’’ ಎಂದರು. ಅತ್ತಿಯ ಹಣ್ಣಿನೊಳಗೆ ಕೀಟಗಳು, ಹುಳುಗಳು ಕಂಡುಬರುವುದರಿಂದ ಅನೇಕ ವಿಷಯಗಳಿಂದ ಪ್ರಕ್ಷುಬ್ಧಗೊಂಡ ಚಿತ್ತವನ್ನು ಬಸವಣ್ಣನವರು ಅತ್ತಿಯ ಹಣ್ಣಿಗೆ ಹೋಲಿಸಿದ್ದಾರೆ ಎನಿಸುತ್ತದೆ. ಆದರೆ ಪ್ರಕೃತಿ ಅತ್ತಿಹಣ್ಣಿನಲ್ಲಿ ನಡೆಸುವ ವ್ಯಾಪಾರವೇ ಬೇರೆ. ಅತ್ತಿಯಲ್ಲಿ ಇಡೀ ಪುಷ್ಪಮಂಜರಿ ಒಂದು ಅತ್ತಿಹಣ್ಣಾಗಿ ರೂಪುಗೊಳ್ಳುತ್ತದೆ. ಅತ್ತಿಯ ಪುಷ್ಪ ಮಂಜರಿಯ ಒಳಗೆ ಮೇಲೆ ಗಂಡು ಹೂಗಳೂ. ಕೆಳಗೆ ಹೆಣ್ಣು ಹೂಗಳೂ ಇರುತ್ತವೆ. ಅತ್ತಿಯ ಹಣ್ಣಿನ ಮೇಲ್ಭಾಗದಲ್ಲಿರುವ ರಂಧ್ರದ ಮೂಲಕ ಸೊಳ್ಳೆ. ಇರುವೆಗಳಂಥ ಕೀಟಗಳು ಪ್ರವೇಶಿಸಿ ಓಡಾಡಿದಾಗ ಗಂಡು ಹೂಗಳ ಪರಾಗ ಹೆಣ್ಣು ಹೂವುಗಳಿಗೆ ತಲುಪಿ ಗರ್ಭಕಟ್ಟುವಿಕೆ ನಡೆದು ಅತ್ತಿಯ ಇಡೀ ಪುಷ್ಪಮಂಜರಿ ನಮಗೆ ಕಾಣುವಂತೆ ಒಂದೇ ಒಂದು ಅತ್ತಿಹಣ್ಣಾಗಿ ಪರಿಣಮಿಸುತ್ತದೆ. ಇನ್ನೊಂದು ಅತ್ತಿಯ ಜಾತಿಗೆ ಸೇರಿದ ಸಸ್ಯ ಡಾರ್‌ಸ್ಟೀನಿಯಾ ಇದು ಗೇಣುದ್ದದ ಚಿಕ್ಕಗಿಡ. ಅತ್ತಿಯಲ್ಲಿ ಇಡೀ ಪುಷ್ಪಮಂಜರಿ ಮುಚ್ಚಿಕೊಂಡಿದ್ದು ಹಣ್ಣಾಗಿ ಪರಿಣಮಿಸುತ್ತದೆ. ಆದರೆ ಡಾರ್‌ಸ್ಟೀನಿಯಾದ ಪುಷ್ಪಮಂಜರಿ ತೆರೆದುಕೊಂಡು ಪುಟ್ಟ ಹೆಡೆಯಂತೆ ಕಾಣಿಸುತ್ತದೆ. ಇಲ್ಲಿಯೂ ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆದು. ಬೀಜ, ಸೃಷ್ಟಿಯಾಗಿ, ಬೀಜಗಳು ಸಿಡಿದು ಹೊಸ ಡಾರ್‌ಸ್ಟೀನಿಯಾ ಸಸ್ಯಗಳು ಹುಟ್ಟಿಕೊಳ್ಳುತ್ತವೆ. ಒಂದೇ ಸಸ್ಯಸಂಸಾರದ ಬೃಹದಾಕಾರದ ಅತ್ತಿಮರವೆಲ್ಲಿ? ನೆಲದಲ್ಲೇ ಇರುವ ಗೇಣುದ್ದದ ಪುಟ್ಟ ಡಾರ್‌ಸ್ಟೀನಿಯಾ ಎಲ್ಲಿ? .

ಇದಲ್ಲವೇ ಸೃಷ್ಟಿ ವೈಚಿತ್ರ್ಯ?

ಸಾಮಾನ್ಯವಾಗಿ ದುಂಭಿ. ಚಿಟ್ಟೆಗಳು ಹೂವಿಂದ ಹೂವಿಗೆ ಹಾರಾಡಿ ಹೂಗಳಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಯುವುದು ಬೆಳಗಿನ ಹೊತ್ತು. ಆದರೆ ಕೆಲವು ಸಸ್ಯಗಳಲ್ಲಿ ಈ ಪರಾಗಸ್ಪರ್ಶ ಕ್ರಿಯೆ ರಾತ್ರಿ ಹೊತ್ತು ನಡೆಯುವುದು ಅಚ್ಚರಿಯ ಸಂಗತಿ. ನೀವು ಮರದಲ್ಲಿ ಬಿಡುವ ಸೌತೆಕಾಯಿಗಳನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದರೆ ‘‘ಎಲ್ಲಾದರೂ ಉಂಟೆ?’’ ಎಂದು ನೀವು ಕಣ್ಣರಳಿಸಬಹುದು. ಮೈಸೂರಿನ ಗಂಗೋತ್ರಿಯಲ್ಲಿ ಅರಮನೆಯ ಹೊರಾಂಗಣದ ಉದ್ಯಾನವನದಲ್ಲಿ ಹಾಕಿರುವ ಕೆಲಮ ಮರಗಳಲ್ಲಿ ಕಂದು ಬಣ್ಣದ ಸೌತೆಕಾಯಿ ಆಕಾರದ ಕಾಯಿಗಳು ಉದ್ದನೆಯ ಸಪೂರ ಹಗ್ಗದಂತಹ ತೊಟ್ಟಿನ ತುದಿಯಲ್ಲಿ ತೂಗಾಡುತ್ತಿರುತ್ತವೆ. ಈ ತಿನ್ನಲಾಗದ ಸೌತೆಕಾಯಿಗಳ ಮರಕ್ಕೆ ಕಿಗಿಲಿಯಾ ಪಿನ್ನೇಟ ಎಂಬುದು ಸಸ್ಯಶಾಸ್ತ್ರೀಯ ಹೆಸರು. ಎಪ್ರಿಲ್, ಮೇ ತಿಂಗಳಲ್ಲಿ ಆನೆ ಸೌತೆಕಾಯಿ ಮರದಲ್ಲಿ ಬಟ್ಟಲಿನಾಕಾರ ಹೂವುಗಳ ಗೊಂಚಲು ಮೂಡುತ್ತವೆ. ಈ ಹೂಗಳಲ್ಲಿ ತುಂಬಾ ಮಕರಂದವಿರುತ್ತದೆ. ಈ ಮರದ ಹೂಗಳು ರಾತ್ರಿ ಹೊತ್ತು ಅರಳುವುದು, ರಾತ್ರಿ ಹೊತ್ತು ಇದರ ಮಕರಂದಕ್ಕಾಗಿ ಸಸ್ತನಿಯಾದ ಭಾವಲಿಗಳು ಭೇಟಿಕೊಟ್ಟು ಪರಾಗಸ್ಪರ್ಶ ಕ್ರಿಯೆ ನಡೆಯುವುದು ಈ ಹೂಗಳ ವೈಶಿಷ್ಟ. ಇದೇ ರೀತಿ ಮತ್ತೊಂದು ಆಶ್ಚರ್ಯಕರ ಸಂಬಂಧ ಬ್ಲಾಕಿಯಾ ಕ್ಲೊರಾಂಥ ಎಂಬ ಒಂದು ಉಷ್ಣವಲಯದ ಪುಟ್ಟ ಪುಷ್ಪ ಮತ್ತು ಮರಗಳ ಮೇಲೆ ವಾಸಿಸುವ ಒಂದು ಇಲಿಯದ್ದು. ಪರಾಗಸ್ಪರ್ಶ ಕ್ರಿಯೆಗಾಗಿ ಬ್ಲಾಕಿಯಾ ಹೂವು ನಿಶಾಚರಿಯಾದ ಇಲಿಗಾಗಿ ಕಾದು ರಾತ್ರಿಯೇ ಅರಳುತ್ತದೆ. ಹೂವಿನ ಮಕರಂದ ಸೇವಿಸಲು ಬಂದ ಇಲಿ ತನ್ನ ಮುಂಗಾಲುಗಳಿಂದ ಹೂವಿನ ನಾಲ್ಕು ಸೆಂಟಿಮೀಟರ್ ಉದ್ದದ ದಳಗಳನ್ನು ಹಿಡಿದು ಹೂವಿನ ಮಕರಂದವನ್ನು ಸೇವಿಸುವಾಗ ಹೂವಿನ ಪರಾಗವು ಇಲಿಯ ಮೂತಿಗೆಲ್ಲಾ ಬಳಿಯಲ್ಪಡುತ್ತದೆ. ಇಲಿ ಇನ್ನೊಂದು ಕ್ಲೊರಾಂಥ ಹೂವಿಗೆ ಭೇಟಿ ಕೊಟ್ಟಾಗ ಈ ಪರಾಗವು ಎರಡನೆ ಹೂವನ್ನು ತಲುಪಿ ಗರ್ಭಧಾರಣೆಯಾಗುತ್ತದೆ. ಹೂವು ಮತ್ತು ಇಲಿಯ ಈ ವಿಚಿತ್ರ ಸಂಬಂಧವನ್ನು ಸಿಸಿಲ್ ಲ್ಯೂಮರ್ ಎಂಬ ಸಸ್ಯ ವಿಜ್ಞಾನಿ ಅನೇಕ ರಾತ್ರಿಗಳನ್ನು ಕಾಡಿನಲ್ಲಿ ಕಳೆದು ಕಂಡು ಹಿಡಿದರು. ಸಸ್ಯಗಳ ರೀತಿನೀತಿಗಳನ್ನು ಅರಿಯಲು ಸಸ್ಯ ವಿಜ್ಞಾನಿಗಳು ಪಡುವ ಶ್ರಮ ಒಂದು ತಪಸ್ಸೇ ಸರಿ.

ಇಲ್ಲೊಂದು ರೋಚಕ ಸಂಗತಿ. ವಿಕಾಸವಾದದ ಚಾರ್ಲ್ಸ್ ಡಾರ್ವಿನ್‌ಗೆ ಸ್ಟಾರ್ ಆಫ್ ಬೆಥ್ಲೆಹೆಮ್ ಅಥವಾ ಅಂಗ್ರೇಕಮ್ ಸೆಸಿಕ್ವಿಪಿಡೇಲ್ ಎಂಬ ನಕ್ಷತ್ರಾಕಾರದ ಶ್ವೇತ ಆರ್ಕಿಡ್ ಹೂ ಮಡಗಾಸ್ಕರ್ ದ್ವೀಪದಿಂದ ಕಳುಹಿಸಲ್ಪಟ್ಟಿತು. ಈ ಬಿಳಿ ಆರ್ಕಿಡ್‌ಗೆ ಒಂದು ವಿಚಿತ್ರವಾದ 111/2 ಇಂಚು ಉದ್ದದ ಬಾಲದಂತ ರಚನೆಯಿತ್ತು. ಹೂವಿನ ಈ ಬಾಲದ ಕೊನೆಯ ಒಂದೂವರೆ ಇಂಚು ಭಾಗದಲ್ಲಿ ಮಕರಂದ ತುಂಬಿತ್ತು. ಈ ಆರ್ಕಿಡ್‌ನ ಬಾಲದ ಕೊನೆಯಲ್ಲಿರುವ ಮಧುವನ್ನು ಸೇವಿಸಲು ಇದರ ಜನ್ಮಸ್ಥಳವಾದ ಮಡಗಾಸ್ಕರ್‌ನಲ್ಲಿ ಕಡೇ ಪಕ್ಷ ಹತ್ತು ಇಂಚು ಉದ್ದದ ಹೀರುನಳಿಕೆ ಇರುವ ಪತಂಗ ಇರಬೇಕು ಎಂದು ಡಾರ್ವಿನ್ ಹೇಳಿದಾಗ ಕೀಟಶಾಸ್ತ್ರಜ್ಞರು ಅವನನ್ನು ಗೇಲಿ ಮಾಡಿದರು. ನಾಲ್ಕು ದಶಕಗಳ ನಂತರ ಡಾರ್ವಿನ್ ವರ್ಣಿಸಿದ್ದಂತಹ ಪತಂಗ ಮಡಗಾಸ್ಕರ್‌ನಲ್ಲಿ ಕಂಡು ಹಿಡಿಯಲ್ಪಟ್ಟಿತು.

                         ಬೆತ್ಲೆಹೆಮ್ ಫ್ಲವರ್

 ಹೀಗೆ ಒಂದು ನಿರ್ದಿಷ್ಟ ಹೂವಿನ ರಚನೆ ಮತ್ತು ಅರಳುವ ಸಮಯ ಒಂದೇ ವಿಧದ ಕೀಟಕ್ಕೆ ಆ ಹೂವಿನ ಮಧುವನ್ನು ಪಡೆಯಲು ಸಾಧ್ಯವಿರು ವಂತೆ ಪರಾಗವಾಹಕಗಳು ಕೂಡ ಒಂದು ನಿರ್ದಿಷ್ಟ ಹೂವಿನ ಸಂಪರ್ಕ ಪಡೆಯಲು ಅನುಕೂಲವಾಗಿರುವಂತಹ ರಚನೆ ಮತ್ತು ನಡವಳಿಕೆಗಳನ್ನು ಹೊಂದಿರುತ್ತವೆ. ಒಂದು ನಿರ್ದಿಷ್ಟ ಹೂವಿಗಾಗಿ ಕೀಟ ಅಥವಾ ದುಂಬಿ, ಒಂದು ನಿರ್ದಿಷ್ಟ ಕೀಟಕ್ಕಾಗಿ ಹೂವು ಪರಸ್ಪರ ಪೂರಕ ಮಾರ್ಪಾಡುಗಳನ್ನು ಮಾಡಿಕೊಂಡಿರುವುದಕ್ಕೆ ಸಹವಿಕಸನ ಅಥವಾ Co-Evolution ಎನ್ನುತ್ತಾರೆ. ಆರ್ಕಿಡ್‌ಗಳಲ್ಲಿ ಕಂಡು ಬರುವಷ್ಟು ‘‘ಸಹವಿಕಸನ’’ ಕ್ರಿಯೆ ಮತ್ತೆಲ್ಲೂ ಕಂಡು ಬರುವುದಿಲ್ಲ. ಸಸ್ಯ ಮತ್ತು ಕೀಟಗಳ ಈ ವಿನೂತನ ಪರಸ್ಪರ ಅವಲಂಬನೆ ಸೃಷ್ಟಿಯ ಒಂದು ಮಹತ್ತರ ಸೋಜಿಗವಲ್ಲವೇ?

ಆಹಾ! ಸಸ್ಯಗಳಲ್ಲಿ ಚಲನೆ! ಸಸ್ಯಗಳು ಪ್ರಾಣಿಗಳಂತೆ ಚಲಿಸದಿದ್ದರೂ ಕೆಲವು ಸಸ್ಯಗಳಿಗೆ ತಮ್ಮದೇಆದ ಚಲನೆ ಇದೆ. ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ಮುಟ್ಟಿದಾಗ ಅವು ಯಕ್ಷಿಣಿಯಂತೆ ಮುದುಡಿಕೊಳ್ಳುವುದು, ಕೊಂಚ ಹೊತ್ತಿನ ನಂತರಎಲೆಗಳು ಮೊದಲಿನಂತಾಗುವುದು ಬಾಲ್ಯದ ಒಂದು ಅಚ್ಚರಿಯ ಮೋಜಿನ ಆಟ. ಮುಟ್ಟಿದರೆ ಮುನಿಯ ಈ ಆಶ್ಚರ್ಯಕರ ಚಲನೆಗೆ ಕಾರಣವೇನು? ಮುಟ್ಟಿದರೆ ಮುನಿಸಸ್ಯದ ಎಲೆಗಳಲ್ಲಿರುವ ಜೀವಕೋಶಗಳು ನೀರಿನಿಂದ ತುಂಬಿ, ಕೋಶಗಳಲ್ಲಿ ಒಂದು ಬಗೆಯ ಒತ್ತಡ ನಿರ್ಮಾಣವಾಗಿ ಎಲೆಗಳು ಬಿಟ್ಟುಕೊಂಡಿರುತ್ತವೆ. ಮುಟ್ಟಿದರೆ ಮುನಿಯ ಎಲೆಗಳನ್ನು ಮುಟ್ಟಿದಾಗ ಉಂಟಾದ ಪ್ರಚೋದನೆ ಯಿಂದ ಕೋಶಗಳಲ್ಲಿರುವ ನೀರು ಪಕ್ಕದ ಜೀವ ಕೋಶಗಳಿಗೆ ದಾಟಿಕೊಂಡು ಎಲೆಗಳು ಮುಚ್ಚಿ ಕೊಳ್ಳುತ್ತವೆ. ಕೊಂಚ ಹೊತ್ತಿನ ನಂತರ ಪುನಃ ಕೋಶಗಳಲ್ಲಿ ನೀರು ತುಂಬಿ ಎಲೆಗಳು ಬಿಚ್ಚಿಕೊಳ್ಳು ತ್ತವೆ. ಈ ಕ್ರಿಯೆ ಮುಟ್ಟಿದರೆ ಮುನಿ ಸಸ್ಯಗಳ ಎಲೆಗಳ ಚಲನೆಗೆ ಕಾರಣವಾಗುತ್ತದೆ. ಮುಟ್ಟಿದರೆ ಮುನಿ ಸಸ್ಯವು ಮೇಯುವ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲೋ ಅಥವಾ ತನ್ನ ಮೇಲೆ ಎರಗುವ ಕೀಟಗಳನ್ನು ನಿವಾರಿಸಿಕೊಳ್ಳಲೋ ಈ ಮುದುಡುವ ಬಿಚ್ಚಿಕೊಳ್ಳುವ ಕ್ರಿಯೆಯನ್ನು ಅಳವಡಿಸಿಕೊಂಡಿರಬಹುದೆಂದು ಹೇಳುತ್ತಾರೆ.

ನಾವು ದಿನ ನಿತ್ಯ ನೋಡುವ ಹಾಗೂ ಇಷ್ಟಪಟ್ಟು ತಿನ್ನುವ ಕಡ್ಲೆಕಾಯಿಯ ಸಸ್ಯದ ಚಲನೆ! ಊಹಿಸಲಾಗದು.

ಪ್ರಕೃತಿ ಕಡ್ಲೆಕಾಯಿಯ ವಿಷಯದಲ್ಲಿ ತನ್ನ ಮತ್ತೊಂದು ಕೈಚಳಕ ತೋರಿಸಿದೆ. ಹೊಲ ಗಳಲ್ಲಿ ಕಡ್ಲೆಕಾಯಿ ಗಿಡಗಳು ನೆಲಮಟ್ಟದಲ್ಲೇ ಹರಡಿ ದಂತೆ ಬೆಳೆದು ಹಳದಿ ಹೂವುಗಳನ್ನು ಬಿಡುತ್ತವೆ. ಕಡ್ಲೆಕಾಯಿ ಸಸ್ಯದ ಹೂಗಳಲ್ಲಿ ಪರಾಗ ಸ್ಪರ್ಶ ಕ್ರಿಯೆ ನಡೆದ ನಂತರ, ಹೂವಿನ ಅಂಡಾಶಯದ ಕೆಳಗೆ ತೊಟ್ಟಿನಲ್ಲಿ ಒಂದು ಮೊಳಕೆ ಮೂಡುತ್ತದೆ. ಈ ಮೊಳಕೆ ತ್ವರಿತವಾಗಿ ಬೆಳೆದು ಭೂಮಿಯೊಳಕ್ಕೆ ಪ್ರವೇಶಿಸುತ್ತದೆ. ಈ ಮೊಳೆಕೆಯೊಂದಿಗೆ ಹೂವಿನ ಅಂಡಾಶಯವೂ ಭೂಮಿಯೊಳಕ್ಕೆ ಸೆಳೆಯಲ್ಪಟ್ಟು ಭೂಮಿಯೊಳಗೆ ಸಮಾನಂತರವಾಗಿ ಸ್ಥಾಪಿತವಾಗಿ, ಮುಂದೆ ಭೂಮಿಯೊಳಕ್ಕೆ ಸೇರಿದ ಅಂಡಾಶಯ 1-5 ಬೀಜಗಳಿರುವ ಕಡ್ಲೆಕಾಯಿ ಆಗಿ ಪರಿವರ್ತನೆ ಆಗುತ್ತದೆ. ಪುಟ್ಟ ಹಳದಿ ಹೂ ಚಲಿಸಿ ಭೂಮಿಯೊಳಗೆ ಫಲವಾ ಗುವುದು ಸಾಮಾನ್ಯ ನೋಟಕ್ಕೆ ಸಿಲುಕದ ನಿಸರ್ಗದ ಅದ್ಭುತ ಪ್ರಕ್ರಿಯೆ.

ಕೆಲವು ಸಲ ಮುಂಜಾವಿನಲ್ಲಿ ಹುಲ್ಲಿನ ಎಲೆಗಳ ತುದಿಯೆಲ್ಲೋ. ಹುಲ್ಲೆ ಸಳಿನ ಅಂಚಿನಲ್ಲೋ ನೀರ ಹನಿಗಳು ಮುತ್ತಿನ ಹನಿಗಳಂತೆ ಕುಳಿತಿರುವುದನ್ನು ನೋಡಿ ಇಬ್ಬನಿಯ ಹನಿಗಳು ಎಂದು ಭಾವಿಸುತ್ತೇವೆ. ಕವಿ ಕುವೆಂಪು ಹುಲ್ಲಿನ ಗರಿಯ ತುದಿಯಲ್ಲಿ ಮುತ್ತಿನಂದದಿ ಇದ್ದ ನೀರ ಹನಿಯ ಬಗ್ಗೆ ತಮ್ಮ ರಾಮಾಯಣ ದರ್ಶನಂ ಕಾವ್ಯದಲ್ಲಿ ‘‘ತೃಣ ಸುಂದರಿಯ ಮೂಗುತಿಯ ಮುತ್ತು ಪನಿಯಂತೆ ಮಿರುಮಿರುಗಿ ಮೆರೆವಾ ಹಿಮದ ಬಿಂದು’’ ಎಂದು ವರ್ಣಿಸಿದ್ದಾರೆ. ಈ ನೀರಿನ ಹನಿಗಳು ಕೆಲವು ಸಸ್ಯಗಳಲ್ಲಿ ನಡೆಯುವ ಜೈವಿಕ ಕ್ರಿಯೆಯ ಫಲ ಕೆಲವು ವೇಳೆ ಭೂಮಿಯಲ್ಲಿ ತೇವಾಂಶ ಜಾಸ್ತಿ ಇದ್ದು; ವಾತಾವರಣದಲ್ಲಿ ಆರ್ದತೆ ಹೆಚ್ಚಾಗಿರುವಾಗ ಕೆಲವು ಸಸ್ಯಗಳ ಬೇರುಗಳು ಹೆಚ್ಚು ನೀರನ್ನು ಹೀರಿಕೊಂಡು, ಬೇರುಗಳಲ್ಲಿ ಒತ್ತಡ ಉಂಟಾಗಿ, ಬೇರಿನಿಂದ ನೀರು ಸಸ್ಯದಲ್ಲಿ ಮೇಲ್ಮುಖವಾಗಿ ಹರಿಯುತ್ತದೆ. ಆಗ ಹೆಚ್ಚುವರಿ ನೀರು ಎಲೆಗಳಲ್ಲಿರುವ ರಂಧ್ರಗಳ ಮೂಲಕ ಹೊರಬಂದು ನೀರ್ ಹನಿಗಳಾಗಿ ಎಲೆಗಳ ತುದಿ, ಅಂಚುಗಳಲ್ಲಿ ಶೇಖರಗೊಳ್ಳುತ್ತವೆ. ಈ ಕ್ರಿಯೆಗೆ ಬಾಷ್ಪೀಕರಣ ಎನ್ನುತ್ತಾರೆ. ಎಲೆಗಳ ತುದಿ, ಅಂಚುಗಳ ಈ ನೀರ ಹನಿಗಳಲ್ಲಿ ಸಸ್ಯದ ಶರ್ಕರಗಳು ಕಿಣ್ವಗಳೂ ಇರುತ್ತವೆ. ಬಾಷ್ಟೀಕರಣದ ಫಲವಾಗಿ ಗರಿಕೆ ಹುಲ್ಲಿನ ಮೇಲೆ ಶೇಖರವಾದ ನೀರಹನಿಗಳು ಕವಿಯ ಕಲ್ಪನೆಯನ್ನು ಗರಿಗೆದರಿಸಿದ್ದೂ ಒಂದು ಅಚ್ಚರಿ.

ಸಸ್ಯಗಳು ಸಾಮಾನ್ಯವಾಗಿ ತಮಗೆ ಬೇಕಾದ ಪೋಷಕಾಂಶಗಳನ್ನು ಭೂಮಿಯಿಂದ ಪಡೆದು ಬೆಳೆಯುವುದು. ಸಹಜ ಸಂಗತಿ. ಕೆಲವು ಸಸ್ಯಗಳು ಸಾರಜನಕದ ಕೊರತೆಯಿರುವ ಜೌಗುಪ್ರದೇಶಗಳಲ್ಲಿ ಬೆಳೆಯುವುದರಿಂದ ಅವು ತಮಗೆ ಬೇಕಾದ ಸಾರಜನಕ ಪೋಷಕಾಂಶಕ್ಕಾಗಿ ಕೀಟಗಳನ್ನು ಬೇಟೆಯಾಡಿ, ಅವುಗಳನ್ನು ಜೀರ್ಣಿಸಿಕೊಂಡು ಕೀಟಾಹಾರಿ ಅಥವಾ ಮಾಂಸಾಹಾರಿ ಸಸ್ಯಗಳೆಂಬ ಬಿರುದನ್ನು ಪಡೆದಿವೆ.

ಕೀಟಭಕ್ಷಕ ಸಸ್ಯಗಳಲ್ಲೂ ಪತ್ರ ಹರಿತ್ತು ಇರುವುದರಿಂದ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತವೆ. ಅವುಗಳಲ್ಲೂ ಹೂವು ಕಾಯಾಗಿ, ಬೀಜ ಪ್ರಸಾರವಾಗಿ ಸಂತತಿ ಮುಂದುವರಿಯುತ್ತದೆ. ಆದರೆ ಇವು ತಮಗೆ ಬೇಕಾದ ಪೋಷಕಾಂಶಗಳಿಗಾಗಿ ಕೀಟಗಳನ್ನು ಬೇಟೆಯಾಡಲು ಹೂಡುವ ತಂತ್ರ, ಅದಕ್ಕಾಗಿ ಕೀಟಭಕ್ಷಕ ಸಸ್ಯಗಳ ದೇಹ ಹೊಂದಿರುವ ಮಾರ್ಪಾಡು ಆಶ್ಚರ್ಯಕರ. ಕೆಲವು ಕೀಟ ಭಕ್ಷಕ ಸಸ್ಯಗಳಿಗೆ ಕೂದಲಿನಂತಹ ರಚನೆಗಳಿದ್ದು, ಅವುಗಳಲ್ಲಿ ಸಿಹಿದ್ರವವನ್ನು ಸ್ರವಿಸುವ ಗ್ರಂಥಿಗಳಿರುತ್ತವೆ. ಇನ್ನು ಕೆಲವು ಕೀಟಾಹಾರಿ ಸಸ್ಯಗಳಲ್ಲಿ ಕೀಟಗಳನ್ನು ಹಿಡಿಯಲು ಎಲೆಗಳ ತುದಿ ಹೂಜಿ ಆಕಾರ ತಾಳಿರುತ್ತವೆ. ಮತ್ತೂ ಆಶ್ಚರ್ಯವೆಂದರೆ ನೀರಿನಲ್ಲಿ ತೇಲುವ ಯುಟ್ರಕ್ಯುಲೇರಿಯಾ ಎಂಬ ಕೀಟಭಕ್ಷಕ ಸಸ್ಯ ಎಲೆಗಳಲ್ಲಿ ಕೀಟಗಳನ್ನು ಹಿಡಿಯಲು ಚೀಲ ಅಥವಾ ಕೋಶಗಳನ್ನು ಹೊಂದಿರುತ್ತದೆ.

ಕರ್ನಾಟಕದ ಮಲೆನಾಡಿನ ಬೆಟ್ಟಪ್ರದೇಶಗಳಲ್ಲಿ ಡ್ರಾಸೆರಾ ಮತ್ತು ಯುಟ್ರಿಕ್ಯುಲೇರಿಯಾ ಎಂಬ ಕೀಟಭಕ್ಷಕ ಸಸ್ಯಗಳು ಕಂಡುಬರುತ್ತವೆ. ಡ್ರಾಸೆರಾದ ಎಲೆಗಳು ವೃತ್ತಾಕಾರವಾಗಿ ಜೋಡಿಸಲ್ಪಟ್ಟು ಎಲೆಗಳ ಮೇಲೆಕೂದಲಿನಂತಹ ರಚನೆಗಳಿದ್ದು, ಅವು ಸಿಹಿ ಯಾದ ದ್ರವವನ್ನು ಸ್ರವಿಸುತ್ತವೆ. ಬಿಸಿಲಿನಲ್ಲಿ ಮುತ್ತಿನಂತೆ ಹೂಳೆವ ಈ ಸಿಹಿದ್ರವಕ್ಕೆ ಆಕರ್ಷಿ ತವಾಗಿ ಯಾವುದಾದರು ಕೀಟ ಬಂದು ಕುಳಿತಾಗ,ಅದು ಅಂಟಾದ ದ್ರವದಲ್ಲಿ ಸಿಕ್ಕಿಹಾಕಿಕೊಂಡು ಸುತ್ತಲಿನ ಕೂದಲಿನಂತಹ ರಚನೆಗಳು ಮುಚ್ಚಿಕೊಳ್ಳು ತ್ತವೆ. ಸಸ್ಯ ಬಂಧಿಯಾದ ಕೀಟದ ದೇಹವನ್ನು ಜೀರ್ಣಿಸಿ ಕೊಂಡು ಸಾರಜನಕ ಪೋಷಕಾಂಶವನ್ನು ಪಡೆದುಕೊಳ್ಳುತ್ತವೆ. ಯುಟ್ರಕ್ಯುಲೇರಿಯಾ ಎಂಬ ನೀರಿನಲ್ಲಿ ತೇಲುವ ಕೀಟಭಕ್ಷಕ ಸಸ್ಯದ ಎಲೆಗಳಲ್ಲಿ ಕೋಶಗಳಿರುತ್ತವೆ. ನೀರಿನೊಂದಿಗೆ ಯಾವುದಾದರು ಕೀಟ ಈ ಕೋಶದೊಳಕ್ಕೆ ಸೆಳೆಯಲ್ಪಟ್ಟಾಗ ಕೋಶದ ಬಾಗಿಲು ಬೋನಿನ ಬಾಗಿಲಂತೆ ವರ್ತಿಸಿ ಮುಚ್ಚಿಕೊಳ್ಳುತ್ತದೆ. ಒಳಗೆ ಬಂಧಿಯಾದ ಕೀಟವನ್ನು ಯುಟ್ರಿಕ್ಯುಲೇರಿಯಾ ಜೀರ್ಣಿಸಿಕೊಂಡು ಬಿಡುತ್ತದೆ. ನಮ್ಮ ದೇಶದ ಅಸ್ಸಾಂನ ಖಾಸಿ ಬೆಟ್ಟಗಳಲ್ಲಿ ಕಾಣಸಿಗುವ ನೆಪಂ ಥೀಸ್ ಅಥವಾ ಹೂಜಿ ಗಿಡ ಒಂದು ಸ್ವಾರಸ್ಯಕರ ಕೀಟ ಭಕ್ಷಕ ಸಸ್ಯ. ನೆಪಂಥೀಸ್ ಗಿಡದ ಬಳ್ಳಿ ಆಧಾರಕ್ಕಾಗಿ ಬೇರೆ ಗಿಡಗಳಿಗೆ ಸುತ್ತಿಕೊಂಡು ಬೆಳೆದು, ಎಲೆಗಳ ತುದಿ ಯಲ್ಲಿ ಆಕರ್ಷಕ ಹೂಜಿಗಳನ್ನು ಸೃಷ್ಟಿಸಿರುತ್ತದೆ. ಹೂಜಿಯೊಳಗೆ ಕೀಟಗಳಿಗೆ ಮಾರಕವಾದ. ಸಿಹಿದ್ರವವಿರುತ್ತದೆ. ಹೂಜಿಯೊಳಗಿನ ದ್ರವದ ಸುವಾಸನೆಗೆ ಆಕರ್ಷಿತವಾದ ಕೀಟ ಹೂಜಿಯೊಳಕ್ಕೆ ಬೀಳುತ್ತದೆ. ಹೂಜಿಯ ಒಳಭಾಗದಲ್ಲಿರುವ ಮೊನಚಾದ ಕೂದಲುಗಳು ಒಳಕ್ಕೆ ಬಿದ್ದ ಕೀಟವನ್ನು ಮೇಲೇರಲು ಬಿಡುವುದಿಲ್ಲ. ಕೀಟವು ನೆಪಂಥೀಸ್‌ನ ಹೂಜಿಯು ಸ್ರವಿಸಿದ ಜೀರ್ಣಕಾರಕ ರಸಗಳಿಂದ ಜೀರ್ಣವಾಗಿ ಸಸ್ಯ ಹೀರಿಕೊಳ್ಳುತ್ತದೆ.

                          ಡಾರ್ವಿನ್    

                    ಕುವೆಂಪು                                                                   

ಬೇಟೆ ಎನ್ನುವುದು ಮನುಷ್ಯನಿಗೆ, ಪ್ರಾಣಿಗಳಿಗೆ ಮಾತ್ರ ಸಾಧ್ಯವೆಂದುಕೊಂಡಿದ್ದ ನಮಗೆ ಈ ಕೀಟಭಕ್ಷಕ ಸಸ್ಯಗಳ ಕಾರ್ಯಾಚರಣೆ ನಿಬ್ಬೆರಗಾಗಿಸುವುದಲ್ಲಾ! ಸಸ್ಯಗಳು ಬೃಹತ್ ಆಗಿರಲಿ ಅಥವಾ ಸಾಧಾ ರಣವಾಗಿರಲಿ ಅವು ಪ್ರದರ್ಶಿಸುವ ವಿಸ್ಮಯಪೂರಿತ ವೈವಿಧ್ಯತೆಗಳ ಕಡೆ ನೋಟ ಹರಿಸಿದಾಗ ಈ ಸೃಷ್ಟಿಯ ಎಲ್ಲಾ ಚರಾಚರ ವಸ್ತುಗಳಲ್ಲೂ ಒಂದು ಮಹತ್ ಅಡಗಿದೆ ಎಂಬುದು ನಮ್ಮಲ್ಲಿ ನಮ್ರತೆಯನ್ನು ಉಂಟುಮಾಡುತ್ತದೆ.

Writer - ಪದ್ಮ ಶ್ರೀರಾಮ

contributor

Editor - ಪದ್ಮ ಶ್ರೀರಾಮ

contributor

Similar News