×
Ad

ಕೆಎಸ್ಸಾರ್ಟಿಸಿ ಡೈಮಂಡ್ ಕ್ಲಾಸ್ ಅಂತರಾಜ್ಯ ಬಸ್ ಮಾರ್ಗಗಳಿಗೆ ಚಾಲನೆ

Update: 2017-10-14 20:25 IST

ಬೆಂಗಳೂರು, ಅ.14: ಕೆಎಸ್ಸಾರ್ಟಿಸಿಯಿಂದ ಕೇರಳದ ಆಲೆಪ್ಪಿಗೆ ಆರಂಭಿಸಿದ್ದ ನೂತನ ಡೈಮಂಡ್ ಕ್ಲಾಸ್ ಶ್ರೇಣಿಯ ಐಶಾರಾಮಿ ಬಸ್ ಸೇವೆಯನ್ನು ಆರಂಭಿಸಿದೆ.

ಶನಿವಾರ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನೂತನ ಅಂತರಾಜ್ಯ ಮಾರ್ಗ ಹಾಗು ಹೆಚ್ಚುವರಿ ಬಸ್ ಸೇವೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಚಾಲನೆ ನೀಡಿದರು.

ಬೆಂಗಳೂರಿನಿಂದ ಕೇರಳದ ಪ್ರಮುಖ ಪ್ರವಾಸಿ ತಾಣವಾದ ಆಲೆಪ್ಪಿಗೆ ಪ್ರತಿದಿನ ಸಂಜೆ 07.45ಕ್ಕೆ ಹೊರಡಲಿರುವ ಡೈಮಂಡ್ ಕ್ಲಾಸ್ ಸ್ಕಾನಿಯಾ ಬಸ್ ಮರುದಿನ ಬೆಳಗ್ಗೆ 7 ಗಂಟೆಗೆ ಆಲೆಪ್ಪಿ ತಲುಪಲಿದೆ. ಅನಂತರ ಆಲೆಪ್ಪಿಯಿಂದ ಪ್ರತಿದಿನ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.30 ಕ್ಕೆ ಬೆಂಗಳೂರು ತಲುಪಲಿದ್ದು, ಪ್ರಯಾಣ ದರವನ್ನು 1205 ರೂ.ಗಳು ನಿಗದಿಪಡಿಸಲಾಗಿದೆ.

ಹಾಗೆಯೇ, ಬೆಂಗಳೂರಿನಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾಗೆ ಇದುವರೆಗೂ ಸಂಚರಿಸುತ್ತಿರುವ ರಾತ್ರಿ ಬಸ್ ಸೇವೆಯನ್ನು ಹಗಲಿಗೆ ವಿಸ್ತರಣೆ ಮಾಡಲಾಗಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 5.15ಕ್ಕೆ ಶ್ರೀಹರಿಕೋಟಾಗೆ ತಲುಪಲಿದೆ. ಸಂಜೆ 8.30 ಕ್ಕೆ ಶ್ರೀಹರಿಕೋಟಾದಿಂದ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಬೆಂಗಳೂರು ತಲುಪಲಿದೆ. ಹಗಲು ವೇಳೆ ಪ್ರಯಾಣ ದರ 684 ರೂ.ಗಳು ಹಾಗೂ ರಾತ್ರಿ ವೇಳೆ ಪ್ರಯಾಣಕ್ಕೆ 790 ರೂ.ಗಳ ಪ್ರಯಾಣ ದರ ನಿಗದಿಪಡಿಸಲಾಗಿದೆ.

ನೂತನ ಸೇವೆ ಕುರಿತು ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕೆಲ ತಿಂಗಳಿಂದ ಆಲೆಪ್ಪಿಗೆ ಅಂತಾರಾಜ್ಯ ಸೇವೆಗೆ ಪ್ರಯತ್ನ ನಡೆಸಿದ್ದು ಅಂತಿಮವಾಗಿ ಆಲೆಪ್ಪಿಯಲ್ಲಿಯೇ ನೂತನ ಸೇವೆಗೆ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿದ್ದವು. ಅದರಂತೆ ಈ ಸೇವೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರತಿಹಬ್ಬದಂತೆ ದೀಪಾವಳಿಗೂ ಕೆಎಸ್ಸಾರ್ಟಿಸಿ ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸಿದೆ. ವಿಶೇಷ ಸೇವೆ ನೀಡುವ ಬಸ್ ಮರಳಿ ಬರುವಾಗಿ ಖಾಲಿ ಬರಬೇಕು. ಹಾಗಾಗಿ ಅಲ್ಪ ಪ್ರಮಾಣದ ದರ ಹೆಚ್ಚಳ ಮಾಡುತ್ತೇವೆ. ಆದರೆ ಖಾಸಗಿಯವರು ಅಧಿಕ ಹಣ ಪಡೆಯುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸುತ್ತೇವೆ. ಆದರೆ, ಪ್ರಯಾಣಿಕರು ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಖಾಸಗಿಯವರಿಗೆ ಹೆಚ್ಚು ಹಣ ನೀಡುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದರು.

ಬಿಎಂಟಿಸಿಗೆ ಹೊಸದಾಗಿ 3000 ಬಸ್ ಸೇರ್ಪಡೆ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ 1500 ಬಸ್‌ಗಳನ್ನು ನಿಗಮ ಖರೀದಿಸಲಿದ್ದು, ಇನ್ನುಳಿದ 1500 ಬಸ್‌ಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗುತ್ತದೆ. ಆದರೆ, ಆ ಬಸ್‌ಗಳಿಗೆ ಸಿಬ್ಬಂದಿ ಇರಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News