ಮಾರಾಟಕ್ಕಿಟ್ಟಿರುವ ವರ್ತಮಾನದಲ್ಲಿ ಕಮಲಾ ಕವಿತೆಗಳು....

Update: 2017-10-14 18:37 GMT

ಕನ್ನಡ ಕಾವ್ಯ ಲೋಕದಲ್ಲಿ ಎಂ. ಆರ್. ಕಮಲಾ ಅವರ ಹೆಸರು ಚಿರಪರಿಚಿತ. ‘ಶಕುಂತಲೋಪಾಖ್ಯಾನ’ ಕವನ ಸಂಕಲನದ ಮೂಲಕ ಸಹೃದಯರ ಗಮನ ಸೆಳೆದ ಕಮಲಾ ಅವರ ‘ಕತ್ತಲ ಹೂವಿನ ಹಾಡು’ ಅನುವಾದ ಅವರನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಅರಬ್ ಮಹಿಳಾ ಕಾವ್ಯಗಳನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆಯೂ ಅವರದು. ಇದೀಗ ಅವರ ‘ಮಾರಿಬಿಡಿ-ಈ ಕಾಲದ ತಲ್ಲಣಗಳು’ ಕವನ ಸಂಕಲನ ಸುದ್ದಿಯಲ್ಲಿದೆ.

ಒಟ್ಟು 41 ಕವಿತೆಗಳಿರುವ ಈ ಸಂಕಲನ ಅವರೇ ಹೇಳಿಕೊಳ್ಳುವಂತೆ ಈ ಕಾಲದ ತಲ್ಲಣಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆೆ. ‘ಮಾರಾಟ’ವೆನ್ನುವುದು ವರ್ತಮಾನದ ಮುಖೇಡಿ ಅಭಿವೃದ್ಧಿಯ ಬೆಳವಣಿಗೆಯಾಗಿದೆ. ಎಲ್ಲ ವಸ್ತುಗಳ ವೌಲ್ಯಗಳನ್ನು ಹಣದ ಥೈಲಿಯ ಜೊತೆಗಿಟ್ಟು ಮಾರುವುದಕ್ಕೆ ಹೊರಟಿರುವ, ವಿಲಾಸದ ಬದುಕಿನ ತೆಕ್ಕೆಯಲ್ಲಿ ತೇಲುತ್ತಿರುವ ವರ್ತಮಾನವನ್ನು ವ್ಯಂಗ್ಯಮಾಡುವಂತಹ ಕವಿತೆ ‘ಹಾಗಾದರೆ ಮಾರಿಬಿಡಿ’.

ಅಮ್ಮನ ಸವೆದ ಒಂದು ಜೊತೆ ಬಂಗಾರದ ಬಳೆ, ಸೋರುತ್ತಿರುವ ಹಳೆಮನೆ ಇವೆಲ್ಲವೂ ಅಂತಿಮವಾಗಿ ಹರಾಜುಗಟ್ಟೆಯಲ್ಲಿ ನಿಂತಿರುವ ಚಂದ್ರಮತಿ ಎನ್ನುವ ಮಹಿಳೆಯವರೆಗೆ ತಲುಪುತ್ತದೆ. ‘‘...ಆದರೂ ಮಾರಬಹುದೇ ನೀವು ಅವಳ ಘನತೆಯನ್ನು/ ಕಟ್ಟುಪಾಡಿಲ್ಲದೇ ಕಟ್ಟಿ ಹಿಡಿವ ತಾಯ್ತನದ ಮಮತೆಯನ್ನು....’’ ಎಂಬ ಪ್ರಶ್ನೆ ಪ್ರತೀ ವಸ್ತುವಿಗೂ ಅನ್ವಯಿಸುವಂತಹದು. ಇಂತಹ ಮಾರಾಟ ಹಲವು ಕವಿತೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಬೆನ್ನುಡಿಯಲ್ಲಿ ಹೇಳುವಂತೆ ‘‘ಸಿದ್ಧ ಮಾದರಿ, ಮಂದಿ ಮೆಚ್ಚುವ ಶೈಲಿ, ಧ್ರುವೀಕರಣದ ಅಬ್ಬರದಲ್ಲಿ ಸ್ವಂತಿಕೆ ಕಳೆದುಕೊಂಡು ತಬ್ಬಿಬ್ಬಾದ ಲೋಕದಲ್ಲಿ ಕಮಲಾ ಅವರ ಕವಿತೆಗಳು ಭಿನ್ನವಾಗಿ ನಿಲ್ಲುವುದಕ್ಕೆ ಕಾರಣ ಅವರು ಭ್ರಮಾಲೋಕದಿಂದ ಮುಕ್ತವಾಗಿರುವುದು ಹಾಗೂ ಪರಿಮಿತಿಗಳನ್ನು ಮೀರಲು ಇರುವ ಏಕೈಕ ದಾರಿ ಸಹಜತೆ ಮತ್ತು ಸರಳತೆಗಳೇ ಆಗಿವೆ ಎಂದು ಅರಿತಿರುವುದು...’’ ಎನ್ನುವುದಕ್ಕೆ ಇಲ್ಲಿರುವ ಪ್ರತೀ ಕವಿತೆಗಳೂ ತಲೆದೂಗುತ್ತವೆ.

ಹಣೆಪಟ್ಟಿ, ಹುಸಿ ಸೋಗಿನ ಸಿದ್ಧಾಂತಗಳಿಂದ ದೂರವಾಗಿರುವ ಮತ್ತು ಜೀವನ ಸಿದ್ಧಾಂತವನ್ನೇ ತಮ್ಮ ಅನನ್ಯತೆಯನ್ನಾಗಿರಿಕೊಂಡಿರುವ ಈ ಕವಿತೆಗಳು ಸಹಜ ಚೆಲುವಿನಿಂದ ಓದುಗನನ್ನು ಮಂತ್ರಮುಗ್ಧನನ್ನಾಗಿಸುತ್ತವೆ. ಕಥನ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 125 ರೂಪಾಯಿ. ಆಸಕ್ತರು 9448334622 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News