ಜನವಿರೋಧಿ ನೀತಿಗಳನ್ನು ಸಾರ್ವಜನಿಕರು ವಿರೋಧಿಸಬೇಕು: ಸಂತೋಷ್ ಹೆಗಡೆ

Update: 2017-10-15 16:05 GMT

ಬೆಂಗಳೂರು, ಅ. 15: ಸಾರ್ವಜನಿಕರು ಜನಪರ ಯೋಜನೆಗಳಿಗೆ ಬೆಂಬಲ ನೀಡಬೇಕು ಹಾಗೂ ಜನವಿರೋಧಿ ಯೋಜನೆಗಳನ್ನು ವಿರೋಧಿಸಬೇಕು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ತಿಳಿಸಿದ್ದಾರೆ.

ರವಿವಾರ ಸ್ವಾತಂತ್ರ ಉದ್ಯಾನವನದಲ್ಲಿ ನಗರದಲ್ಲಿ ನಿರ್ಮಾಣ ಆಗುತ್ತಿದ್ದ ಉಕ್ಕಿನ ಸೇತುವೆ ಯೋಜನೆ ಕೈಬಿಡಲು ಹೋರಾಟ ನಡೆಸಿ ಹಾಗೂ ಆ ಯೋಜನೆ ಕೈ ಬಿಟ್ಟು ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ‘ಬೇಕು ಬೇಡ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ ಸ್ವಹಿತಾಸಕ್ತಿಗೆ ರಾಜಕೀಯ ಪಕ್ಷಗಳು ರೂಪಿಸುವ ಹಾಗೂ ಏಕ ವ್ಯಕ್ತಿ ನಿರ್ಣಯಿಸಿ ತೀರ್ಮಾನ ಮಾಡುವ ಯೋಜನೆಗಳಿಗೆ ಯಾವುದೆ ರೀತಿಯಲ್ಲಿ ಬೆಂಬಲ ನೀಡಬಾರದು. ಅದೇ ರೀತಿ ಜನಹಿತ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು. ಸಮಾಜದ ಬೇಕು ಬೇಡಗಳಿಗೆ ಸ್ಪಂಧಿಸಿ, ಬೇಡಗಳನ್ನು ನಿರಾಕರಿಸಬೇಕು. ಈ ನಿಟ್ಟಿನಲ್ಲಿ ಯುವಜನತೆ ತಮ್ಮನ್ನು ತಾವು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು ಕಿವಿಮಾತು ಹೇಳಿದರು.

ಇತ್ತೀಚಿಗೆ ‘ಕೆಲವರಿಂದ ಕೆಲವರಿಗಾಗಿ ಹಾಗೂ ಕೆಲವರ ಸರಕಾರ’ ಎಂಬ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ದುರಂತ. ಅದು ಮತ್ತಷ್ಟು ಮುಂದುವರೆಯಲು ಅವಕಾಶ ಕಲ್ಪಿಸಬಾರದು. ಒಂದು ವೇಳೆ ಹೀಗಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವುದು ಖಚಿತ. ತಾವು, ತಮ್ಮ ಪಕ್ಷ ಎಂಬುದನ್ನು ಮಾತ್ರ ಅವರು ಗಮನದಲ್ಲಿಟ್ಟುಕೊಂಡಿರುತ್ತಾರೆ. ಈಗಾಗಲೇ ಇಂತಹ ದುರಂತ ಸೃಷ್ಟಿಯಾಗುವ ಎಲ್ಲ ಕುರುಹುಗಳು ಕಾಣುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಪ್ರಕಾಶ್ ಬೆಳವಾಡಿ ಮಾತನಾಡಿ, ರಾಜ್ಯದಲ್ಲಿ ನಿತ್ಯ ಧೋ ಎಂದು ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಇದು ನಿಜಕ್ಕೂ ದುರ್ದೈವ ಎಂದರು.

ರಾಜಕಾರಣಿಗಳು ಜನರ ಅಗತ್ಯತೆ ಹಾಗೂ ಅವರ ಆದೇಶಗಳನ್ನು ಪಾಲಿಸಬೇಕೇ ಹೊರತು ತಮಗೆ ಇಷ್ಟಬಂದುದದನ್ನು ಮಾಡಲು ಅಲ್ಲ. ಅವರ ದಾರಿಯಲ್ಲೇ ಹೋಗಲು ಅವರನ್ನು ಬಿಟ್ಟರೆ, ಜನರಿಗೆ ಏನೂ ಸಿಗುವುದಿಲ್ಲ. ಸಂಪೂರ್ಣ ನಾಶ ಮಾಡಿ, ತಮ್ಮ ಅಭಿವೃದ್ಧಿಯತ್ತ ಮಾತ್ರ ಗಮನಹರಿಸುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗಾಯಕಿ ಎಂ.ಡಿ.ಪಲ್ಲವಿ, ಸಿಟಿಜನ್ ಆಕ್ಷನ್ ೆರಂನ ಅಧ್ಯಕ್ಷ ಡಿ.ಎಸ್.ರಾಜಶೇಖರ್ ಸೇರಿದಂತೆ ನೂರಾರು ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು, ಐಟಿ ಬಿಟಿ ಉದ್ಯೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡು, ತಮ್ಮ ಬೇಕು ಬೇಡಗಳನ್ನು ಪ್ರದರ್ಶಿಸಿದರು. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಈ ಮೂಲಕ ಆಗ್ರಹಿಸಿದರು.

‘ನಗರದಲ್ಲಿ ಎರಡು ಕಡೆ ಮತ್ತೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಆದರೆ, ಜನ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಮತ್ತೆ ಅಂತಹ ಯೋಜನೆಗಳು ಜಾರಿಗೆ ಬಂದಲ್ಲಿ ಜನ ಒಟ್ಟಾಗಿ ಅವುಗಳ ವಿರುದ್ಧ ಹೋರಾಟ ನಡೆಸಬೇಕು’

-ಎನ್ .ಸಂತೋಷ್ ಹೆಗಡೆ ನಿವೃತ್ತ ಲೋಕಾಯುಕ್ತ

ಏನು ಬೇಕು-ಏನು ಬೇಡ:

ಬೇಕು - ಉತ್ತಮ ಹಾಗೂ ಸ್ವಚ್ಛ ರಸ್ತೆಗಳು, ಸ್ವಚ್ಛ ಕೆರೆಗಳು, ಮಾಲಿನ್ಯ ಮುಕ್ತ ಬೆಂಗಳೂರು, ಕನ್ನಡ ಉಳಿವು, ಮಳೆ ನೀರು ಸಂಗ್ರಹ, ಸಾರ್ವಜನಿಕ ಸಾರಿಗೆ, ಉತ್ತಮ ಗುಣಮಟ್ಟದ ರಾಜಕೀಯ, ಜನಹಿತ ರಾಜಕೀಯ....ಇತರೆ.

ಬೇಡ - ರಸ್ತೆ ಗುಂಡಿಗಳು, ಅತಿಯಾದ ವಾಹನ ದಟ್ಟಣೆ, ನೀರಿನ ಟ್ಯಾಂಕರ್ ಮಾಫಿಯಾ, ಜನಸಂಖ್ಯೆ ಹೆಚ್ಚಳ, ಮದ್ಯಪಾನ ಅಂಗಡಿ, ಧೂಮಪಾನ, ಕಸದ ಸಮಸ್ಯೆ... ಇತರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News