×
Ad

ಪಾತ್ರದ ಒಳಗೆ ಪರಕಾಯಪ್ರವೇಶ ಮಾಡುವ ಶಕ್ತಿ ಚಿಟ್ಟಾಣಿಯವರಿಗಿತ್ತು : ಮಂಟಪ ಪ್ರಭಾಕರ ಉಪಾಧ್ಯಾಯ

Update: 2017-10-15 23:15 IST

ಬೆಂಗಳೂರು, ಅ. 15: ಏಕವ್ಯಕ್ತಿ ಯಕ್ಷಗಾನಕ್ಕೆ ಕಾರಣ ಹಾಗೂ ಸ್ಪೂರ್ತಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಾಗಿದ್ದಾರೆ. ಪಾತ್ರದ ಒಳಗೆ ಪರಕಾಯಪ್ರವೇಶ ಮಾಡಿ ಅದನ್ನು ಅಭಿವ್ಯಕ್ತಪಡಿಸುತ್ತಿದ್ದ ಕಲೆ ಚಿಟ್ಟಾಣಿಯವರಿಗಿತ್ತು ಎಂದು ಖ್ಯಾತ ಕಲಾವಿದರಾದ ಮಂಟಪ ಪ್ರಭಾಕರ ಉಪಾಧ್ಯಾಯ ಹೇಳಿದರು.

ಮಲ್ಲೇಶ್ವರಂ ನಲ್ಲಿರುವ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆದ "ಚಿಟ್ಟಾಣಿ ನಮನ" ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಟಪ ಪ್ರಭಾಕರ ಉಪಾಧ್ಯಾಯರು, ಮತ್ತೆಮತ್ತೆ ನೆನಪಿಸಿಕೊಳ್ಳುವಂತದ್ದೇ ಶ್ರದ್ಧಾಂಜಲಿ. ಅಂತಹ ಕಲಾತಪಸ್ವಿಯ ಜೊತೆ ಇರಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಯಕ್ಷಗಾನದ ಕುರಿತಾಗಿ ಅವರಿಗಿದ್ದ ಬದ್ಧತೆ, ರೀತಿನೀತಿ, ಶಿಸ್ತು, ಸ್ಪರ್ಧಾಮನೋಭಾವ ಬೇರೆಯಾರಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಅವರು ಮಾತನಾಡಿ, ಚಿಟ್ಟಾಣಿ ಅವರದ್ದು ನೇರ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಮಾದರೀ ವ್ಯಕ್ತಿತ್ವ. ಸರಳ ಸಜ್ಜನಿಕೆಯವರಾದ ಅವರು ರಂಗದ ಮೇಲೆ ಹಾಗೂ ಬದುಕಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹವ್ಯಕ ಸಮಾಜದ ಹೆಮ್ಮೆಯ ಪುತ್ರರಾದ ಅವರು ಸರ್ವ ಸಮಾಜದ ಹೆಮ್ಮೆ ಎಂದು ಹೇಳಿದರು.

ಚಿಟ್ಟಾಣಿಯವರ ಆಪ್ತ ಸ್ವಭಾವ, ಅತ್ಮೀಯ ನಡವಳಿಕೆಗಳು ಅವರ ವಿಶೇಷತೆಗಳಾಗಿತ್ತು, ಅವರಿಂದ ರಂಗದ ಮೇಲೆ ಹಾಗೂ ನಿತ್ಯ ಜೀವನದಲ್ಲಿ ಕಲಿಯ ಬೇಕಾದ್ದು ಬಹಳಷ್ಟಿದೆ. ಆ ಮೇರು ವ್ಯಕ್ಟಿತ್ವಕ್ಕೆ ಮಾತಿನ ಬದಲು ಮೌನವಾಗಿಯೇ ನಮನ ಸಲ್ಲಿಸಲು ಬಯಸುತ್ತೇನೆ ಎಂಬು ಚಿಟ್ಟಾಣಿಯವರ ಕುರಿ ತಾಗಿ ಚಲನಚಿತ್ರ ನಟರಾದ ನೀರ್ನಳ್ಳಿ ರಾಮಕೃಷ್ಣ ಹೆಗಡೆ ಅವರು ಹೇಳಿದರು.

ಹವ್ಯಕ ಮಹಾಸಭೆಯ ಯಕ್ಷಗಾನ - ಜಾನಪದ ಸಂಚಾಲಕರಾದ ಸದಾನಂದ ಹೆಗಡೆ, ವಿಜಯೀಂದ್ರ ಹೊಳ್ಳ, ಗೋಪಾಲಕೃಷ್ಣ ಹುಕ್ಲಮಕ್ಕಿ,  ಜಿ ಎಸ್ ಕೋಡೆ ಚಿಟ್ಟಾಣಿಯವರಿಗೆ ನುಡಿನಮನ. ಡಾ. ಶ್ರೀಪಾದ ಹೆಗಡೆ ಕಾವ್ಯನಮನ ಸಲ್ಲಿಸಿದರೆ, ಭರತ ಕಡಬ ಚಿತ್ರನಮನ ಸಲ್ಲಿಸಿದರು, ಯಕ್ಷಗಾನ ಕಲಾವಿದರು ಯಕ್ಷನೃತ್ಯ ಹಾಗೂ ಗಾನದ ಮೂಲಕ ನಮನ ಸಲ್ಲಿಸಿದರು.

ಸಭೆ ಮೌನ ಹಾಗೂ ರಾಮತಾರಕದ ಜೊತೆ ಶಾಂತಿಮಂತ್ರ ಪಠಿಸಿ ಯಕ್ಷತಪಸ್ವಿಗೆ ನಮನ ಸಲ್ಲಿಸಲಾಯಿತು. ಮಹಾಸಭೆಯ ಉಪಾಧ್ಯಕ್ಷ ಕೆಕ್ಕರು ಶ್ರೀಧರ್ ಭಟ್, ಗೌರವ ಕಾರ್ಯದರ್ಶಿಗಳಾದ ವೇಣುವಿಘ್ನೇಶ್, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್, ಶ್ರೀಧರ ಭಟ್ ಸಾಲೆಕೊಪ್ಪ ಕೋಶಾಧಿಕಾರಿಗಳಾದ ಪ್ರಕಾಶ್ ಕಲಸಿ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಹಾಗೂ ಚಿಟ್ಟಾಣಿ ಅಭಿಮಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News