ಕೊಹ್ಲಿ ತಂಡದ ಪರ ಧೋನಿ ಎರಡು ಗೋಲು.. !

Update: 2017-10-16 07:55 GMT
ಚೆಂಡಿಗಾಗಿ ಧೋನಿ ಮತ್ತು ರಣಬೀರ್ ಕಪೂರ್  ಸೆಣಸಾಟ

ಮುಂಬೈ,ಅ.16: ವಿರಾಟ್ ಕೊಹ್ಲಿ ನಾಯಕತ್ವದ ಆಲ್ ಹಾರ್ಟ್ ಫುಟ್ಬಾಲ್ ತಂಡ ಇಲ್ಲಿ ನಡೆದ ಚಾರಿಟಿ ಫುಟ್ಬಾಲ್ ಪಂದ್ಯದಲ್ಲಿ ಅಭಿಷೇಕ್ ಬಚ್ಚನ್ ನಾಯಕತ್ವದ ಆಲ್ ಸ್ಟಾರ್ಸ್ ಎಫ್ ಸಿ ವಿರುದ್ಧ 7-3 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎರಡು ಗೋಲು ದಾಖಲಿಸಿ ಕೊಹ್ಲಿ ತಂಡದ ಗೆಲುವಿಗೆ ನೆರವಾದರು. ಕೊಹ್ಲಿ ತಂಡ ಕಷ್ಟದಲ್ಲಿದ್ದಾಗ ಸ್ಫೋಟಕ ಬ್ಯಾಟಿಂಗ್ ಮೂಲಕ   ಗೆಲುವಿಗೆ ನೆರವಾಗುವ ಧೋನಿ ಫುಟ್ಬಾಲ್ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಧೋನಿ  ಎರಡು ಬಾರಿ ಎದುರಾಳಿ ತಂಡದ ಗೋಲು ಕೀಪರ್ ಮಾರ್ಕ್ ರಾಬಿನ್ಸನ್ ಕಣ್ಣುತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಕಳುಹಿಸಿದರು. ಉತ್ತಮ ಆಟ ಪ್ರದರ್ಶಿಸಿದ ಧೋನಿ  ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬಹಳ ದೂರದಿಂದ ಚೆಂಡನ್ನು ಗೋಲು ಪೆಟ್ಟಿಗೆ ರವಾನಿಸಿ ಧೋನಿ ಮೊದಲ ಗೋಲನ್ನು ದಾಖಲಿಸಿದರು. ಎರಡನೆ ಗೋಲು ಫ್ರಿ –ಕಿಕ್ ಮೂಲಕ ದಾಖಲಿಸಿದರು. ಧೋನಿ ಆಟ ಇಂಗ್ಲೆಂಡ್ ನ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಬೆಕಮ್ ಅವರ ಆಟದ ಶೈಲಿಯನ್ನು ನೆನಪಿಸುವಂತಿತ್ತು.

ಕೊಹ್ಲಿ ತಂಡದಲ್ಲಿ ಭಾರತದ ಕ್ರಿಕೆಟ್ ತಂಡದ ಆಟಗಾರರ ಜೊತೆಗೆ ಭಾರತದ ಹಾಕಿ ತಂಡದ ಮಾಜಿ ನಾಯಕ ಪಿ.ಆರ್.ಶ್ರೀಜೇಶ್ ,ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಚಾಂಪಿಯನ್ ರೋಹನ್ ಬೋಪಣ್ಣ  ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News