ಪ್ರತ್ಯೇಕ ಕಾರ್ಮಿಕ ಮಂಡಳಿ ರಚಿಸಲು ಆಗ್ರಹ
ಬೆಂಗಳೂರು, ಅ. 17: ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕ ತಲುಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಬೇರ್ಪಡಿಸಿ ಪ್ರತ್ಯೇಕ ಮಂಡಳಿ ರಚಿಸಬೇಕು ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವೆಲ್‌ಫೇರ್ ಅಸೋಸಿಯೇಶನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಕಾರ್ಮಿಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮಂಡಳಿಯ ಅಧಿಕಾರಿಗಳಲ್ಲದ ಕಾರಣ ಕಾರ್ಮಿಕ ಇಲಾಖೆಯ ಕೆಲಸಗಳನ್ನು ಹಾಗೂ ಮಂಡಳಿ ಕೆಲಸಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ, ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕ ಸಿಗಬೇಕಾದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಆದುದರಿಂದ ಮಂಡಳಿಯನ್ನು ಬೇರ್ಪಡಿಸಿ, ಪ್ರತ್ಯೇಕ ಮಂಡಳಿ ರಚಿಸಬೇಕು ಎಂದರು.
ಕಟ್ಟಡ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಧನ ಸಹಾಯಕ್ಕೆ ತಿದ್ದುಪಡಿ ಮಾಡಿರುವುದು ಸರಿಯಲ್ಲ. 1 ನೆ ತರಗತಿಯಿಂದ 4 ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೂ ಧನ ಸಹಾಯ ನೀಡಬೇಕು. ಐಟಿಐ ಪ್ರೊಫೆಷನ್ ಡಿಪ್ಲೊಮೋ ವ್ಯಾಸಂಗಕ್ಕೆ 20 ಸಾವಿರ ಸಹಾಯ ಧನ ನೀಡಬೇಕು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವ್ಯಾಸಂಗಕ್ಕೆ 1 ಲಕ್ಷ ರೂ. ನೀಡಬೇಕು. ಕಟ್ಟಡ ಕಾರ್ಮಿಕರು ಮೃತಪಟ್ಟರೆ ಕೇವಲ 54 ಸಾವಿರ ರೂ.ನೀಡಲಾಗುತ್ತಿದೆ. ಅದನ್ನು ಐದು ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಹೇಳಿದರು.
ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಸ್ಲಂಗಳಲ್ಲಿ ಗುಡಿಸಲುಗಳಲ್ಲಿ, ಬಾಡಿಗೆ ಮನೆಗಳಲ್ಲಿ, ಶೌಚಾಲಯಗಳಲ್ಲಿ ವಾಸ ಮಾಡುವಂತ ಸ್ಥಿತಿ ಇದೆ. ಆದರೆ, ಸರಕಾರ ಸೂರು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದ ಅವರು, ಕೂಡಲೇ ಮಂಡಳಿಯಿಂದ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು ಮತ್ತು ಕಾರ್ಮಿಕ ಕಾಲನಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಹಾತ್ಮಗಾಂಧಿ ನರೇಗಾದಲ್ಲಿ ಕೆಲಸ ಮಾಡುವವರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೋಂದಣಿ ಮಾಡಿ ಸದಸ್ಯರನ್ನಾಗಿ ನೇಮಕ ಮಾಡುತ್ತಿರುವುದು ಸರಿಯಲ್ಲ. ಅದೇ ರೀತಿಯಲ್ಲಿ ಕಾರ್ಮಿಕರ ಹಣವನ್ನು ವೆಚ್ಚ ಮಾಡಿ ಬಸ್ ಪಾಸ್ ವಿತರಿಸಲು ಮುಂದಾಗಿರುವುದನ್ನು ಸಂಘ ವಿರೋಧಿಸುತ್ತದೆ ಎಂದರು.
ಕಾರ್ಮಿಕರ ತರಬೇತಿ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಹಣ ಬಳಕೆ ಮಾಡಿರುವುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಜೂ.22 ರಂದು ನಡೆದ ಮಂಡಳಿ ಸಭೆಯಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಗೌಸ್ ಪೀರ್, ಖಜಾಂಚಿ ಡಿ.ಈಶ್ವರಪ್ಪ, ರಂಗರಾಜ್, ಬುಡೇನ್‌ಸಾಬ್ ಉಪಸ್ಥಿತರಿದ್ದರು.