'ಸ್ತನ ಕ್ಯಾನ್ಸರ್' ಜಾಗೃತಿ ಶಿಬಿರಕ್ಕೆ ಸಚಿವ ಖಾದರ್ ಚಾಲನೆ'

Update: 2017-10-17 13:43 GMT

ಬೆಂಗಳೂರು, ಅ.17: ನಾರಿ ಫೌಂಡೇಶನ್, ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಶಿಬಿರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಂಗಳವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಯು.ಟಿ.ಖಾದರ್, ಆಧುನಿಕ ಜೀವನ ಶೈಲಿಯಿಂದ ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳನ್ನು ಜನಸಾಮಾನ್ಯರು ಎದುರಿಸುವಂತಾಗಿದೆ. ಸ್ತನ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ವಿಚಾರಗಳನ್ನು ತಿಳಿದು ಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನಾರಿ ಫೌಂಡೇಶನ್ ಅಧ್ಯಕ್ಷೆ ಫಾತಿಮಾ ತಬಸ್ಸುಮ್ ಮಾತನಾಡಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳಿವೆಯೆ ಇಲ್ಲವೆ ಎಂಬುದರ ಕುರಿತು ಈ ಮೊಬೈಲ್ ಮೆಮೊಗ್ರಾಫಿ ಯೂನಿಟ್(ಎಂಎಂಯು)ನಲ್ಲಿ ತಜ್ಞ ವೈದ್ಯರು ಪರೀಕ್ಷಿಸಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗಾಗಿ ಸುಮಾರು 3500 ರೂ.ಖರ್ಚಾಗುತ್ತದೆ ಎಂದರು.

ನಮ್ಮ ಸಂಘಟನೆಯು ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಉಚಿತವಾಗಿ ಪರೀಕ್ಷೆ ಮಾಡಿಸಲಾಗುತ್ತಿದೆ. ಇದರಿಂದಾಗಿ, ಬಡ ಹಾಗೂ ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಅನುಕೂಲವಾಗುತ್ತದೆ. ಅಕ್ಟೋಬರ್ ತಿಂಗಳನ್ನು ‘ಸ್ತನ ಕ್ಯಾನ್ಸರ್ ಜಾಗೃತಿ ಮಾಸ’ವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪ್ರತಿತಿಂಗಳು ಇಂತಹ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ, ನಾವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದು, ಆ್ಯಸಿಡ್ ದಾಳಿ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆಗೆ ಗುರಿಯಾಗಿರುವಂತಹ ಮಹಿಳೆಯರ ಪರ ಧ್ವನಿ ಎತ್ತುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನೌರಿ ಫೌಂಡೇಶನ್ ಖಜಾಂಚಿ ನಯಾಝ್ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News