ಅಮಿತ್ ಶಾ ಪುತ್ರ ಜೈ ಶಾ ಪ್ರಕರಣದಲ್ಲಿ ಕಣ್ಣು ಮುಚ್ಚಿ ಕುಳಿತ ಪ್ರಧಾನಿ: ರಣದೀಪ್‌ಸಿಂಗ್ ಸುರ್ಜೆವಾಲ

Update: 2017-10-17 13:54 GMT

ಬೆಂಗಳೂರು, ಅ.17: ಪ್ರಧಾನಿಯಾಗುವ ಮೊದಲು ‘ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ನಾನು ತಿನ್ನುವುದಿಲ್ಲ ಹಾಗೂ ತಿನ್ನಲು ಬಿಡುವುದಿಲ್ಲ’ ಎಂದಿದ್ದ ನರೇಂದ್ರಮೋದಿ, ಇದೀಗ ತಮ್ಮ ಕಣ್ಣ ಮುಂದೆಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಆದಾಯ ‘ಬುಲೆಟ್ ರೈಲು’ ವೇಗದಲ್ಲಿ ಹೋಗುತ್ತಿದ್ದರೂ ಕಣ್ಣು ಕಾಣದವರಂತೆ ಇದ್ದಾರೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ಸಿಂಗ್ ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯು ತೀವ್ರವಾಗಿ ಕುಸಿಯುತ್ತಿರುವಾಗ ನರೇಂದ್ರ ಮೋದಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಹಾಗೂ ಸರಿಯಾದ ತಿಳುವಳಿಕೆ ಇಲ್ಲದ ‘ಜಿಎಸ್‌ಟಿ’ ಯೋಜನೆಗಳು ಜೈ ಶಾ ಪಾಲಿಗೆ ಹಬ್ಬವಾಗಿ ಪರಿಣಮಿಸಿದಂತೆ ಗೋಚರಿಸಿವೆ ಎಂದು ಆರೋಪಿಸಿದರು.

ಅಮಿತ್ ಶಾ ಅವರ ಪತ್ನಿ, ಸೊಸೆ ಮತ್ತು ಮಗನ ಹೆಸರಿನಲ್ಲಿರುವ ಕಂಪೆನಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಎಲ್ಲೆಡೆ ಗಂಭೀರ ಪ್ರಶ್ನೆಗಳು ಎದ್ದಿವೆ. ದೇಶಕ್ಕೆ ಸತ್ಯವನ್ನು ತಿಳಿಸಲು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಾಲಮಿತಿಯೊಳಗೆ ಈ ಅಕ್ರಮಗಳ ತನಿಖೆ ನಡೆಸಬೇಕು. ಅಲ್ಲದೆ, ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ಜೈ ಶಾ ವಿರುದ್ಧ ತನಿಖೆಗೆ ಒತ್ತಾಯಿಸಿದೆ. ಹೀಗಿರುವಾಗ, ಪ್ರಧಾನಿ ಹಾಗೂ ಅಮಿತ್ ಶಾ ಮೌನ ಮುರಿಯುತ್ತಿಲ್ಲ. ದೇಶದ ಹಿತಾಸಕ್ತಿಗಾಗಿ ಕೇಂದ್ರ ಸರಕಾರವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತದೋ ಅಥವಾ ಸತ್ಯ, ಜವಾಬ್ದಾರಿ ಮತ್ತು ನೈತಿಕತೆಯ ಪರವಾಗಿ ನಿಲ್ಲುವುದೋ ಎಂಬ ಪ್ರಶ್ನೆ ನಮ್ಮ ಮುಂದಿದೆ ಎಂದರು.

ಅಮಿತ್ ಶಾ ಅವರ ಪತ್ನಿ, ಸೊಸೆ ಮತ್ತು ಮಗನ ಹೆಸರಿನಲ್ಲಿರುವ ಟೆಂಪಲ್ ಎಂಟರ್‌ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ 2004 ರಿಂದ 2014ರವರೆಗೆ ಕೇವಲ 18.8 ಲಕ್ಷ ರೂ. ವಹಿವಾಟನ್ನು ಹೊಂದಿತ್ತು. 2012-13 ಮತ್ತು 2013-14ರಲ್ಲಿ ನಷ್ಟ ಅನುಭವಿಸಿದ್ದ ಈ ಕಂಪೆನಿಯು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ತನ್ನ ವಹಿವಾಟನ್ನು ಹೇಗೆ 16 ಸಾವಿರ ಪಟ್ಟು ಹೆಚ್ಚಿಸಿಕೊಂಡಿತು. 2013-14ರಲ್ಲಿ ಜೈ ಶಾ ಪಡೆದ ಸಾಲದ ಮೊತ್ತ 1.3 ಕೋಟಿ ರೂ.ಆಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಇವರ ಸಾಲದ ಪ್ರಮಾಣವು 400ರಷ್ಟು(53.4 ಕೋಟಿ ರೂ.) ಹೆಚ್ಚಾಗಿದೆ. 2016ರ ಅಕ್ಟೋಬರ್‌ನಲ್ಲಿ ಮುಚ್ಚುವ ಹಂತದಲ್ಲಿದ್ದ ಟೆಂಪರ್ ಎಂಟರ್‌ ಪ್ರೈಸಸ್ ಏಕಾಏಕಿ ಹೇಗೆ ಚೇತರಿಕೆ ಕಂಡು ಕೊಂಡಿತು ಎಂದು ಪ್ರಶ್ನಿಸಿದರು.

ಕೇವಲ ಒಂದೇ ಕೊಠಡಿ ಇರುವ ಕಚೇರಿಗೆ 80 ಲಕ್ಷ ರೂ.ಬಾಡಿಗೆ ಕಟ್ಟುತ್ತಿದ್ದ ಕಾರಣವೇನು? ಮುಚ್ಚಿ ಹೋಗುತ್ತಿದ್ದ ಕಂಪೆನಿಯೊಂದು ದಿಢೀರ್ ಆಗಿ 16 ಸಾವಿರ ಪಟ್ಟು ವ್ಯವಹಾರವನ್ನು ಹೆಚ್ಚಿಸಿಕೊಂಡ ನಂತರದ ವರ್ಷದಲ್ಲಿ ನಷ್ಟವಾಗಿದೆ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟ ವಿಚಾರದ ಕುರಿತು ಅಬಕಾರಿ, ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆಯೆ ಎಂದು ಪ್ರಶ್ನಿಸಿದ ಅವರು, ಟೆಂಪಲ್ ಎಂಟರ್‌ ಪ್ರೈಸಸ್ ವಿದೇಶಿ ಬ್ಯಾಂಕುಗಳಿಂದ 51 ಕೋಟಿ ರೂ. ಪಡೆದಿದೆ. ಇದಲ್ಲದೆ, ಜೈ ಶಾ ‘ಕುಸುಮ್ ಫಿನ್ಸರ್ವ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪೆನಿಯನ್ನು ಹೊಂದಿದ್ದು, ನಂತರ ಅದನ್ನು ಎಲ್‌ಎಲ್‌ಪಿ ಎಂದು ನಾಮಕರಣ ಮಾಡಲಾಗಿದೆ. ಈ ಕಂಪೆನಿಗೆ ಕಾಲುಪುರ್ ಕಮರ್ಷಿಯಲ್ ಕೋ ಆಪರೇಟಿವ್ ಬ್ಯಾಂಕ್‌ನಿಂದ 25 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.

ಕೇವಲ 6.2 ಕೋಟಿ ರೂ.ಮೌಲ್ಯದ ಆಸ್ತಿಯ ಮೇಲೆ 25 ಕೋಟಿ ರೂ. ಸಾಲವನ್ನು ನೀಡಲು ಆರ್‌ಬಿಐ ನಿಯಮದಡಿ ಒಪ್ಪಿಗೆ ಇದೆಯೇ? ಇದೇ ರೀತಿ ಈ ಸಹಕಾರ ಬ್ಯಾಂಕ್‌ನವರು ಬೇರೆ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಈ ರೀತಿಯ ಸಾಲ ನೀಡಿದೆಯೇ ಎಂದು ಜನ ಕೇಳುತ್ತಿದ್ದಾರೆ. ಜೈ ಶಾ ವಿರುದ್ಧ ಆರೋಪಗಳು ಕೇಳಿ ಬಂದ ಕೂಡಲೇ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ತರಾತುರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಖಾಸಗಿ ವ್ಯಕ್ತಿಯಾದ ಅವರನ್ನು ಸಮರ್ಥಿಸಿಕೊಳ್ಳುವ ಅಗತ್ಯವೇನಿತ್ತು? ಜೈ ಶಾ ಕಂಪೆನಿಗೆ ವಿಶೇಷ ಸಾಲ ಮಂಜೂರಾತಿ ಮಾಡಿದ್ದ ಸಂದರ್ಭದಲ್ಲಿ ಪಿಯೂಷ್ ಗೋಯೆಲ್ ಕೇಂದ್ರದಲ್ಲಿ ಇಂಧನ ಸಚಿವರಾಗಿದ್ದರು. ಜೈ ಶಾ ಅವರೇನು ಕೇಂದ್ರ ಸಂಪುಟದ ಸಚಿವರೇ ಅಥವಾ ಬಿಜೆಪಿ ಸಂಸದರೇ ಎಂದು ಕೇಳಿದರು.

ಕೇಂದ್ರ ಕಾನೂನು ಸಚಿವಾಲಯವು ಹಿರಿಯ ವಕೀಲ ಹಾಗೂ ಹೆಚ್ಚುವರಿ ಸಾಲಿಸಿಟರ್ ಆಗಿರುವ ತುಷಾರ್ ಮೆಹ್ತಾರನ್ನು ಜೈ ಶಾ ಪರ ವಕಾಲತ್ತು ವಹಿಸಲು ಅನುಮತಿ ನೀಡಿದ್ದೇಕೆ? ಅಚ್ಚರಿಯ ಸಂಗತಿ ಎಂದರೆ ಅ.8ರಂದು ಮಾಧ್ಯಮಗಳು ಜೈ ಶಾ ವಿರುದ್ಧ ವರದಿಗಳನ್ನು ಪ್ರಕಟಿಸಲು ತಯಾರಾಗುತ್ತಿದ್ದರೆ, ಕೇಂದ್ರ ಕಾನೂನು ಸಚಿವಾಲಯವು ರಾಕೆಟ್ ವೇಗದಲ್ಲಿ ಕಾರ್ಯನಿರ್ವಹಿಸಿ ಹೆಚ್ಚುವರಿ ಸಾಲಿಸಿಟರ್‌ಗೆ ಜೈ ಶಾ ಪರ ವಾದ ಮಂಡಿಸಲು ಅ.6ರಂದೇ ಅಣಿಗೊಳಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿ ಗೌಡ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News