ಹೂಳೆತ್ತುವ ಹಣ ಎಲ್ಲಿ ಹೋಗಿದೆ: ಕುಮಾರಸ್ವಾಮಿ

Update: 2017-10-17 14:23 GMT

ಬೆಂಗಳೂರು, ಅ.17: ರಾಜಕಾಲುವೆ ಹೂಳೆತ್ತುವ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.22ರಷ್ಟು ಅಧಿಕವಾಗಿ 850 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಇತ್ತ ಹೂಳೂ ಇಲ್ಲ. ಅತ್ತ ಹಣವೂ ಇಲ್ಲ. ಇನ್ನು ಹಣ ಎಲ್ಲಿಗೆ ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸೋಮವಾರ ಜೆಪಿ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಲಾಕ್ ಲಿಸ್ಟ್‌ನಲ್ಲಿರುವ ಗುತ್ತಿಗೆದಾರರಿಗೆ ಹೂಳೆತ್ತುವ ಗುತ್ತಿಗೆ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸತ್ಯ ಹರಿಶ್ಚಂದ್ರರಾಗಿದ್ದಾರೆ, ಬಿಡುಗಡೆ ಮಾಡಿದ ಹಣ ಎಲ್ಲಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಲಿ, ಇಲ್ಲದಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಕೋಟ್ಯಂತರ ರೂ. ಹಣ ದೋಚಿ ಮುಂದಿನ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಗುಂಡಿ ಮುಚ್ಚಲು ತಂದಿದ್ದ ಪೈಥಾನ್ ವಾಹನ ಮೂಲೆ ಗುಂಪಾಗಿದೆ. ಇದರ ಹೆಸರಿನಲ್ಲೂ ಅನುದಾನ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಶೂರ್ ರಸ್ತೆಗಳಾದ ಕೆ.ಎಚ್.ರೋಡ್, ಮೋದಿ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ ಸೇರಿ 7 ಕಿ.ಮೀ. ರಸ್ತೆ ಅಭಿವೃದ್ಧಿಗೆ 59 ಕೋಟಿ ರೂ. ಇದ್ದ ಅನುದಾನವನ್ನು 87 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆದರೆ, ಗುತ್ತಿಗೆದಾರರಿಗೆ ಸರಿಯಾದ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ 150 ವರ್ಷಗಳ ನಂತರ ಸಾಕಷ್ಟು ಮಳೆಯಾಗಿದೆ. ಇದನ್ನು ಹವಾಮಾನ ಇಲಾಖೆ ಮೊದಲೇ ತಿಳಿಸಿತ್ತು. ಈ ಬಾರಿ ಮಳೆಗೆ 15ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದರೆ, ಬಿಜೆಪಿಯವರು ಆರೋಪ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News