ಪ್ರಸೂತಿ ವೇಳೆ ಅನಗತ್ಯ ಶಸ್ತ್ರಚಿಕಿತ್ಸೆ ಪಿಕ್‌ ಪಾಕೆಟ್‌ಗೆ ಸಮ: ರಮೇಶ್‌ ಕುಮಾರ್

Update: 2017-10-17 14:27 GMT

ಬೆಂಗಳೂರು, ಅ.17: ಸಹಜವಾಗಿ ನಡೆಯುವ ಪ್ರಸೂತಿಗಳಿಗೆ ಅನಗತ್ಯವಾಗಿ ಶಸ್ತ್ರ ಚಿಕಿತ್ಸೆ ಮಾಡುವ ಕೆಲ ವೈದ್ಯರು ರೋಗಿಗಳ ಬಳಿ ಪಿಕ್‌ ಪಾಕೆಟ್ ಮಾಡಿದಂತೆ ಹಣವನ್ನು ದೋಚುತ್ತಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್ ವಿಷಾದಿಸಿದರು.

ಮಂಗಳವಾರ ಆಯುಷ್ ಇಲಾಖೆ ನಗರದ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಸೂತಿ ವೇಳೆ ಅನಗತ್ಯ ಶಸ್ತ್ರಚಿಕಿತ್ಸಾ ಪ್ರಕರಣ ಹೆಚ್ಚಾಗುತ್ತಿದೆ. ವೈದ್ಯರು ತಮ್ಮ ಸ್ವಾರ್ಥತೆಗಾಗಿ ಆರೋಗ್ಯ ಕ್ಷೇತ್ರವನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇಂತಹ ದಂಧೆಯಲ್ಲಿ ತೊಡಗಿರುವ ವೈದ್ಯರು ಪಿಕ್‌ ಪಾಕೆಟ್ ಮಾಡುವವರಿಗಿಂತಲೂ ಕೀಳು ಮನಸ್ಥಿತಿಯನ್ನು ಹೊಂದಿರುವವರಾಗಿರುತ್ತಾರೆ ಎಂದು ಅವರು ಲೇವಡಿ ಮಾಡಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯರು, ಅತ್ಯಾಧುನಿಕ ಉಪಕರಣ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಸೌಲಭ್ಯವಿದ್ದರೂ ಹೆಚ್ಚಿನ ರೋಗಿಗಳು ಯಾಕೆ ದಾಖಲಾಗುವುದಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳು ಮೇಲ್ನೋಟಕ್ಕೇ ಅಶುಚಿಯಾಗಿ ಕಾಣುತ್ತಿವೆ. ಹೀಗಾಗಿ ಆಸ್ಪತ್ರೆಗಳ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಸೂಚಿಸಿದರು.

ಆಯುಷ್ ಇಲಾಖೆಯ ನಿರ್ದೇಶಕ ಡಾ.ರತನ್ ಕೇಲ್ಕರ್ ಮಾತನಾಡಿ, ಯಾವುದೇ ಒಂದು ಚಿಕಿತ್ಸಾ ಕ್ರಮದಿಂದ ಸಮಾಜದ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿಲ್ಲ. ಪ್ರತಿರೋಗದ ಗುಣ ಲಕ್ಷಣಗಳನ್ನು ತಿಳಿದುಕೊಂಡು ಆ ರೋಗಕ್ಕೆ ಯಾವ ಚಿಕಿತ್ಸಾ ಕ್ರಮ ಸೂಕ್ತವೆಂದು ತಿಳಿದು ಚಿಕಿತ್ಸೆ ನೀಡುವಂತಾಗಬೇಕು ಎಂದು ಆಶಿಸಿದರು.

ಕಳೆದ ಆರು ತಿಂಗಳಿನಿಂದ ಡೆಂಗ್ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರೆ, ಇಂಜೆಕ್ಷನ್ ಜೊತೆಗೆ ಗಿಡ ಮೂಲಿಕೆಗಳಿಂದ ಮಾಡಿದ ಕಷಾಯ ಸೇರಿದಂತೆ ಹಣ್ಣುಗಳನ್ನು ತಿನ್ನಲು ಕೊಡಲಾಗುತ್ತಿತ್ತು. ಇದರಿಂದ ರಾಜ್ಯಾದ್ಯಂತ ಉತ್ತಮ ಫಲಿತಾಂಶ ಬಂದಿದೆ. ಇದೇ ಮಾದರಿಯಲ್ಲಿ ಆಯುರ್ವೇದದ ಪ್ರಾಮುಖ್ಯತೆಯನ್ನು ಜನತೆಗೆ ತಿಳಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತ ಮನೋಜ್ ಕುಮಾರ್ ಮೀನಾ, ಪಾಲಿಕೆ ಸದಸ್ಯೆ ಲತಾಕುಮಾರ್ ರಾಠೋಡ್, ಇಲಾಖೆಯ ಜಂಟಿ ನಿರ್ದೇಶಕಿ ಅಹಲ್ಯಾಶರ್ಮ, ಉಪ ನಿರ್ದೇಶಕಿ ಸರಸ್ವತಿ, ಆಡಳಿತಗಾರ ರಮೇಶ್, ಪ್ರಾಂಶುಪಾಲ ಶ್ರೀಧರ್ ಮತ್ತಿತರರಿದ್ದರು.

'ಆಯುರ್ವೇದಿಕ್ ವಿದ್ಯಾರ್ಥಿಗಳಿಗೆ ವಿಶೇಷ ಭತ್ಯೆ'
ಯಾವುದೇ ಅಡ್ಡಪರಿಣಾಮವಿಲ್ಲದೆ ಕಡಿಮೆ ದರದ ಆಯುರ್ವೇದಿಕ್ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಆದರೆ, ನಮ್ಮ ಪ್ರಸ್ತುತ ಸಮಾಜದಲ್ಲಿ ಆಯುರ್ವೇದಿಕ್‌ಗೆ ಹೆಚ್ಚಿನ ಮಹತ್ವವಿಲ್ಲದಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದಿಕ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಸರಕಾರದ ಕರ್ತವ್ಯವಾಗಿದ್ದು, ಆಯುರ್ವೇದಿಕ್ ವಿಷಯವನ್ನು ಆಯ್ಕೆ ಮಾಡಿಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ವಿಶೇಷ ಭತ್ತೆ ನೀಡಲಾಗುವುದು.
-ರಮೇಶ್‌ಕುಮಾರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News