'ವಿದ್ಯಾರ್ಥಿಗಳ ರಾಷ್ಟ್ರೀಯ ಸಮ್ಮೇಳನ ಕಾಗದ-2017'ಗೆ ಚಾಲನೆ

Update: 2017-10-17 14:36 GMT

ಬೆಂಗಳೂರು, ಅ.17: ಶತಮಾನೋತ್ಸವದ ವರ್ಷದ ಭಾಗವಾಗಿ ಹದಿನಾಲ್ಕನೆಯ ರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮೇಳನ ‘ಕಾಗದ-2017’ವನ್ನು ಯುನಿರ್ವಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಮ್ಮೇಳನವನ್ನು ಉದ್ಘಾಟಿಸಿದ ನಗರದ ಐಎಸ್‌ಐ ಗಣಕಯಂತ್ರ ವಿಭಾಗದ ಪ್ರೊ.ಬಿ.ಎಸ್.ದಯಾಸಾಗರ್, ವಿದ್ಯಾರ್ಥಿಗಳು ಉತ್ತಮ ವಾಕ್ಚಾತುರ್ಯ ರೂಢಿಸಿಕೊಂಡು ಸಂಶೋಧನಾ ಲೇಖನಗಳು ಹಾಗೂ ಗ್ರಂಥಗಳನ್ನು ರಚಿಸಿ ತಮ್ಮ ಜ್ಞಾನ ಮಟ್ಟದಲ್ಲಿ ಸ್ಪರ್ಧಿಸುವಂತಾಗಬೇಕು ಎಂದರು.

ಪ್ರತಿಯೊಬ್ಬರು ಗಣಿತ ಶಾಸ್ತ್ರಜ್ಞನಂತೆ ಯೋಚಿಸುತ್ತಾ, ಭೌತಶಾಸ್ತ್ರಜ್ಞನಂತೆ ತರ್ಕಿಸುತ್ತಾ ಹಾಗೂ ಅಭಿಯಂತರನಂತೆ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಕಾಣುತ್ತೀರಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿ-ಡಾಟ್ ಸಂಸ್ಥೆಯ ನಿರ್ವಾಹಕಿ ಡಾ.ವೈ.ಎಸ್.ಲಕ್ಷ್ಮಿ ಮಾತನಾಡಿ, ಸಾಫ್ಟವೇರ್ ಉತ್ಪಾದನೆ ಹಾಗೂ ಅದರ ಉತ್ಪನ್ನಗಳಲ್ಲಿ ಐಪಿಆರ್‌ನ ಪ್ರಾಮುಖ್ಯತೆಯನ್ನು ವಿವರಿಸುತ್ತಾ ನಮ್ಮ ದೇಶ ಈ ನಿಟ್ಟಿನಲ್ಲಿ ತುಂಬಾ ಹಿಂದುಳಿದಿದೆ ಎಂದು ವಿಷಾದಿಸಿದರು.

ಯುಸಿಇ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್, ಒಬ್ಬ ವ್ಯಕ್ತಿಯ ಯಶಸ್ಸಿಗೆ ಕೇವಲ ಪದವಿ ಹಾಗೂ ಆತನ ಉತ್ತಮ ಅಂಕಗಳಷ್ಟೇ ಸಹಕಾರಿಯಾಗಲಾರದು. ಪ್ರತಿಯೊಬ್ಬರಲ್ಲಿನ ಅದರಲ್ಲೂ ಯುವ ಪೀಳಿಗೆಯಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರಲು, ಹೊಸ ಕೌಶಲ್ಯಗಳ ಹಾಗೂ ಜ್ಞಾನ ಸಂಪಾದನೆಯ ಅವಶ್ಯಕತೆಯನ್ನು ವಿವರಿಸುತ್ತಾ ತಮ್ಮಲ್ಲಿನ ನಿಪುಣತೆಯನ್ನು ತಂತ್ರಜ್ಞಾನದೊಂದಿಗೆ ಜೋಡಿಸಿ ಅದರಿಂದ ಉಪಯೋಗ ಪಡೆಯುವಲ್ಲಿ ಶ್ರಮಿಸಬೇಕೆಂದರು.

ಸಮಸ್ಯೆಗಳು ಹಾಗೂ ಅವಕಾಶಗಳೆರಡು ಸಾಕಷ್ಟಿದ್ದರೂ ಪ್ರತಿಯೊಂದು ಸಮಸ್ಯೆಯನ್ನು ಅವಕಾಶವನ್ನಾಗಿ ಪರಿವರ್ತಿಸುತ್ತಾ ಯಶಸ್ಸು ಕಾಣಬೇಕು ಎಂದು ವೇಣುಗೋಪಾಲ್ ಹೇಳಿದರು.

ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಲೇಖನ, ಪ್ರಾಜೆಕ್ಟ್ ಹಾಗೂ ಪೋಸ್ಟರ್‌ಗಳನ್ನು ಪ್ರಸ್ತುತಿಪಡಿಸಿದರು.

ಈ ಸಂಧರ್ಭದಲ್ಲಿ ಐಇಇಇ, ಯುಸಿಇಯ ಅಂಗವಾದ ಡಬ್ಲ್ಯುಐಇ, ನೋಕಿಯಾ ಸಂಸ್ಧೆಯ ಸಹಯೋಗದೊಂದಿಗೆ, ಅಲಸೂರಿನ ಸರಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಕೆರಿಯರ್ ಕೌನ್ಸಿಲಿಂಗ್, ಟೀಂ ಬಿಲ್ಡಿಂಗ್, ಕಸ ವಿಂಗಡನೆ ಹಾಗೂ ಗಣಕಯಂತ್ರ ವಿದ್ಯಾಭ್ಯಾಸದ ತರಗತಿಗಳನ್ನು ಏರ್ಪಡಿಸಲಾಗಿತ್ತು.
ಜೀನಿಯಸ್ ಪ್ಲಸ್ ಟೆಕ್ನಾಲಜಿ ಕಂಪೆನಿಯ ಡಾ.ಜಯಕುಮಾರ ಸಿಂಗರನ್, ನೋಕಿಯಾ ಸಂಸ್ಧೆಯ ಮಾಲಾ ಶಿವಪ್ರಸಾದ್ ಹಾಗೂ ಐಇಇಇ ಯುಸಿಇಯ ಬ್ರಾಂಚ್ ಕೌನ್ಸಿಲರ್ ಡಾ.ಪಿ.ದೀಪಾಶೆಣೈ ಉಪಸ್ಧಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News