ದೌರ್ಜನ್ಯಕ್ಕೀಡಾದ ಮಹಿಳೆಗೆ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ: ನಾಗಲಕ್ಷ್ಮೀ ಬಾಯಿ

Update: 2017-10-17 14:38 GMT

ಬೆಂಗಳೂರು, ಅ.17: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದು ಹಾಗೂ ದೌರ್ಜನ್ಯಕ್ಕೀಡಾದವರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಹಿಳಾ ಆಯೋಗದ ವತಿಯಿಂದ ಮಾಡಲಾಗುವುದು ಎಂದು ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

ಮಂಗಳವಾರ ಕರ್ನಾಟಕ ಮಹಿಳಾ ಆಯೋಗದ ವತಿಯಿಂದ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿವಾರಣೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶತಮಾನಗಳಿಂದ ನಡೆಯುತ್ತಿರುವ ಮಹಿಳಾ ಸಮುದಾಯದ ಮೇಲಿನ ದೌರ್ಜನ್ಯ ಇಂದಿಗೂ ಮುಂದಿರುವುದು ಆಘಾತಕಾರಿ ವಿಚಾರ ಎಂದು ವಿಷಾದಿಸಿದರು.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ದೌರ್ಜನ್ಯಗಳನ್ನು ತಡೆಯುವುದು ಸವಾಲಿನ ಕೆಲಸವಾಗಿದೆ. ದೌರ್ಜನ್ಯ ಎಸಗುವವರಿಗೆ ಕಠಿಣವಾದ ಶಿಕ್ಷೆ ವಿಧಿಸುವ ಕಾನೂನುಗಳಿದ್ದರೂ ದೌರ್ಜನ್ಯಗಳು ತಹಬದಿಗೆ ಬರುತ್ತಿಲ್ಲ. ಯಾರಿಗೂ ಕಾನೂನಿನ ಕುರಿತು ಭಯವೂ ಇಲ್ಲ ಗೌರವವೂ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಮಿಕ ಕಲ್ಯಾಣ ಆಯುಕ್ತ ಮಂಜುನಾಥ್ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಪುರುಷ ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಲಾಗುತ್ತಿದೆ. ಹಾಗೂ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ. ಆದರೂ ಮಹಿಳಾ ಸಮುದಾಯದ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಮಹಿಳೆಯರಿಗೆ ಕಾನೂನಿನ ಕುರಿತು ಅರಿವು ಹಾಗೂ ಧೈರ್ಯ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಎಸ್ ಮನ್ನಿಕೇರಿ ಸೇರಿದಂತೆ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News