ನಾಗರಿಕರು ಪಟಾಕಿ ಸಿಡಿಸದೆ, ಪರಿಸರ ರಕ್ಷಣೆಗೆ ಮುಂದಾಗಿ: ಮೇಯರ್ ಸಂಪತ್‌ ರಾಜ್

Update: 2017-10-17 14:42 GMT

ಬೆಂಗಳೂರು, ಅ. 17: ಬೆಂಗಳೂರಿನ ಎಲ್ಲ ನಾಗರಿಕರು ದೀಪಾವಳಿ ಹಬ್ಬದಲ್ಲಿ ಆದಷ್ಟು ಪಟಾಕಿಗಳನ್ನು ಸಿಡಿಸದೇ, ಪರಿಸರ ರಕ್ಷಣೆಗಾಗಿ ಮುಂದಾಗಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆರ್.ಸಂಪತ್ ರಾಜ್ ಮನವಿ ಮಾಡಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ತ್ಯಾಜ್ಯದಿಂದ ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಹಾಗೂ ಪಟಾಕಿ ಸಿಡಿಸುವುದರಿಂದ ಉಂಟಾಗುವ ಆಕಸ್ಮಿಕ ಘಟನೆಗಳಿಗೆ ಸಂಬಂಧಿಸಿದಂತೆ ಪಾಲಿಕೆ ಮುಂಜಾಗ್ರತಾ ಕ್ರಮಕೈಗೊಂಡಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಆಚರಿಸುವುದರೊಂದಿಗೆ ಪರಿಸರ ಮಾಲಿನ್ಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿಗಳನ್ನು ಸಿಡಿಸಿದಾಗ ಅದರಿಂದ ಅಪಾಯಕಾರಿ ಅನಿಲ ಉತ್ಪತ್ತಿಯಾಗಿ ಮಕ್ಕಳ ಆರೋಗ್ಯದ ಮೇಲೆ ಮತ್ತು ವಾತಾವರಣದಲ್ಲಿ ಸೇರಿಕೊಂಡು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಪುಟ್ಟ ಮಕ್ಕಳು ಆದಷ್ಟು ಪಟಾಕಿಗಳನ್ನು ಸಿಡಿಸಬೇಕಾದರೆ ಪೋಷಕರು ಮುಂಜಾಗ್ರತೆ ವಹಿಸಬೇಕು. ಅಪಾಯಕಾರಿ ಪಟಾಕಿಗಳನ್ನು ಸಿಡಿಸುವುದರಿಂದ ಮಕ್ಕಳ ಕಣ್ಣಿಗೆ ಬೀಳುವ ಲಕ್ಷಣಗಳು ಹೆಚ್ಚಿದ್ದು, ಸಾರ್ವಜನಿಕರು ಆದಷ್ಟು ಪಟಾಕಿಗಳನ್ನು ಸಿಡಿಸದೇ, ಪರಿಸರ ರಕ್ಷಣೆಗಾಗಿ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರು ಪಟಾಕಿಗಳನ್ನು ಸಿಡಿಸುವ ವೇಳೆ ಆಕಸ್ಮಿಕ ಅವಘಡಕ್ಕೆ ಒಳಗಾದಲ್ಲಿ ಅಂತಹವರಿಗೆ ಪಾಲಿಕೆ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಮಾತ್ರ ಹಾಗೂ ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಲು ವೈದ್ಯರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ನಗರ ಸ್ವಚ್ಛತೆ ಮತ್ತು ನೈರ್ಮಲ್ಯ ಕಡೆಗೆ ವಿಶೇಷ ಗಮನ ಹರಿಸಿ, ಮನೆ ಮುಂದೆ ಮತ್ತು ರಸ್ತೆ ಮೇಲೆ ಹರಡಿರುವ ಕಸವನ್ನು ಸಂಗ್ರಹಿಸಿ, ಪಾಲಿಕೆ ಆಟೊ /ತಳ್ಳುವ ಗಾಡಿಗಳಿಗೆ ನೀಡಲು ಪಾಲಿಕೆ ಕೋರಿದೆ. ಪಟಾಕಿ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ, ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯುಂಟಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಮತ್ತು ಹಲವು ಆಪತ್ತುಗಳಿಗೆ ಕಾರಣವಾಗುತ್ತದೆ. ಸಾರ್ವಜನಿಕರು ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ನಗರ ನೈರ್ಮಲ್ಯ ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಕೋರಿರುವ ಮೇಯರ್ ಸಂಪತ್ ರಾಜ್, ಜನತೆಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News