ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವಂತೆ ಅದಿಕಾರಿಗಳಿಗೆ ಮೇಯರ್ ಮನವಿ

Update: 2017-10-17 14:49 GMT

ಬೆಂಗಳೂರು, ಅ.17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ನಗರದ ಕಾಮಗಾರಿಗಳು ಹಾಗೂ ಅಭಿವೃದ್ಧಿ ಬಗ್ಗೆ ಗಮನ ನೀಡುವಂತೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಅದನ್ನು ನಾನು ಪಾಲಿಸಬೇಕಾಗಿರುವುದರಿಂದ ಅಧಿಕಾರಿಗಳು ಸಹಕರಿಸಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೇಯರ್ ಸಂಪತ್‌ರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆ ಕಾಮಗಾರಿ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ತಪಾಸಣೆ ನಡೆಸಿದ ಮೇಯರ್, ಇನ್ನೊಂದು ವಾರದಲ್ಲಿ ಈ ಕ್ಷೇತ್ರದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಲೇಬೇಕು ಎಂದು ಹೆಬ್ಬಾಳದ ವಿಧಾನಸಭಾ ಕ್ಷೇತ್ರದ 8 ವಾರ್ಡ್‌ಗಳ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಕಾಮಗಾರಿಗಳ ತಪಾಸಣೆಯ ಖರ್ಚಿನ ಪ್ರತಿಅಂಶವನ್ನು ಡೈರಿಯಲ್ಲಿ ಗುರುತು ಮಾಡಿಕೊಳ್ಳಬೇಕು. ಮನೆ ಮತ್ತು ಕಚೇರಿಯಿಂದ ಹೊರಡುವ ವೇಳೆ ಈ ಡೈರಿಯನ್ನು ತಪ್ಪದೆ ತಮ್ಮ ಬಳಿ ಇಟ್ಟುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ತಪಾಸಣೆ ಬಂದ ವೇಳೆ ಡೈರಿಯನ್ನು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

ಕಾಮಗಾರಿಗಳ ಪ್ರಗತಿ ಅನುದಾನ ಮತ್ತಿತರ ಅಂಶಗಳ ಬಗ್ಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕು. ಪ್ರತಿದಿನದ ಕಾಮಗಾರಿಗಳ ಪ್ರಗತಿಯ ಬಗ್ಗೆಯೂ ವಿವರ ಇಡಬೇಕು. ಒಂದು ವೇಳೆ ಅಂತಹ ವಿವರಗಳನ್ನು ಬರೆದಿಟ್ಟುಕೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ನಾನು ಸುಮ್ಮನಿರುವುದಿಲ್ಲ. ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡುವಂತೆ ನನ್ನ ಒಂದು ವರ್ಷದ ಅವಧಿಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ಹಾಗೂ ಪ್ರಗತಿಯ ಹಂತದಲ್ಲಿರುವ ಕಾಮಗಾರಿಗಳನ್ನು ನಿಗದಿತ ವೇಳೆಯಲ್ಲಿ ಮುಗಿಸಬೇಕಾಗಿದೆ. ಹೀಗಾಗಿ ವಾರ್ಡ್‌ಗಳ ಪ್ರತಿ ಎಂಜಿನಿಯರ್‌ಗಳು ನನ್ನ ವೇಗಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾನಗರ ವಾರ್ಡ್‌ನ ಎಸ್.ಬಿ.ಎಂ ಬಡಾವಣೆಯಲ್ಲಿರುವ ಪ್ರೆಸಿಡೆನ್ಸಿ ಶಾಲೆ ಹತ್ತಿರ ಮಕ್ಕಳ ಆಟದ ಮೈದಾನದಲ್ಲಿ ಕೆಲ ಸಂಘಟನೆಗಳು ವಾಕಿಂಗ್ ಟ್ರಾಕ್ ನಿರ್ಮಿಸುವಂತೆ ಒತ್ತಾಯಿಸುತ್ತಿದರು. ಅಲ್ಲದೆ, ಈ ಆಟದ ಮೈದಾನವು ಅಗತ್ಯವಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೆ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವಂತೆ ಕೋರಿದರು. ಅದಕ್ಕೆ ಸ್ಪಂದಿಸಿದ ಮೇಯರ್ ಡಿಪಿಆರ್ ಸಿದ್ಧಪಡಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು. ಹಾಗೂ ಕ್ರೀಡಾಂಗಣದ ಸುತ್ತ ಕಾಂಪೌಂಡ್ ಗೋಡೆ ಹಾಗೂ ಫೆನ್ಸಿಂಗ್ ರೈಸ್ ಮಾಡುವಂತೆ ಆದೇಶಿಸಿದರು.
 
ನಂತರ, ಬೃಹತ್ ನೀರುಗಾಲುವೆ ತಪಾಸಣೆಗೆ ನಡೆಸಿ ಮನೋರಾಯನ ಪಾಳ್ಯದ ದೊಡ್ಡಮ್ಮ ಯಲ್ಲಮ್ಮ ದೇವಸ್ಥಾನದ ಹತ್ತಿರ ಕಾಂಪೌಂಡ್ ಗೋಡೆ ಕುಸಿದು ಅನಾಹುತವಾಗಿರುವುದನ್ನು ಗಮನಿಸಿ ಈ ಕೂಡಲೇ ನೀರುಗಾಲುವೆಯಲ್ಲಿರುವ ಸಿಲ್ಟ್ ತೆಗೆದು ಪಕ್ಕದಲ್ಲಿರುವ ತಡೆಗೋಡೆಗಳನ್ನು ಎತ್ತರಿಸಿಸುವಂತೆ ಸೂಚಿಸಿದರು. ಸೀತಪ್ಪಬಡಾವಣೆ, ಚಾಮುಂಡಿನಗರ ಮುಖ್ಯರಸ್ತೆ, ಗಂಗಮ್ಮ ಲೇಔಟ್, ವಸಂತಪ್ಪಬ್ಲಾಕ್, ಎಸ್.ಬಿ.ಎಂ ಬಡಾವಣೆ, ಆನಂದನಗರ ಬಡಾವಣೆಗಳಲ್ಲಿರುವ ಬೃಹತ್ ನೀರುಗಾಲುವೆ ಕಾಮಗಾರಿಯನ್ನು ಪರಿಶೀಲಿಸಿ ಟಿಪ್ಪರ್‌ಗಳು ಹಾಗೂ ಜೆಸಿಬಿಗಳನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಲು ಸೂಚಿಸಿದರು.

ಈ ಎಲ್ಲಾ ಕಾಮಗಾರಿಗಳ ಮರುಪರಿಶೀಲನೆಯನ್ನು 4 ದಿನಗಳ ನಂತರ ಮತ್ತೆ ಕೈಗೊಳ್ಳುತ್ತೇನೆ ಎಂದು ಸೂಚನೆ ನೀಡಿದ ಅವರು, ಕುಂತಿ ಗ್ರಾಮ, ಚೋಳನಾಯಕನಹಳ್ಳಿ ಹತ್ತಿರ ಭೇಟಿ ನೀಡಿ ಪರಿಶೀಲಿಸಿದ್ದು ನಂತರ ಅನಂತ ಲಿಂಗೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News