ಬೆಂಗಳೂರು ನಗರದಲ್ಲಿ ಪಟಾಕಿಗಳ ಭರ್ಜರಿ ಮಾರಾಟ

Update: 2017-10-17 14:52 GMT

ಬೆಂಗಳೂರು, ಅ. 17: ಬೆಂಗಳೂರು ನಗರದಲ್ಲಿ ಮಳೆಯು ಕಡಿಮೆಯಾಗುತ್ತಿದ್ದಂತೆ ನಗರದ ಹಲವೆಡೆ ಪಟಾಕಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಹೌದು, ಹಲವು ದಿನಗಳಿಂದ ನಗರದಲ್ಲಿ ಸತತ ಮಳೆಯಿಂದಾಗಿ ಪಟಾಕಿ ಮಾರಾಟಗಾರರಿಗೆ ತಣ್ಣೀರೆರಚಿತ್ತು. ಅಲ್ಲದೆ, ಕಳೆದ ಹತ್ತಾರು ದಿನಗಳಿಂದ ಮಳೆರಾಯನ ಆರ್ಭಟಕ್ಕೆ ರಾಜ್ಯದ ರಾಜಧಾನಿಯಲ್ಲಿ ಜನರು ದೀಪಾವಳಿ ಹಬ್ಬವನ್ನು ಆಚರಿಸುವುದನ್ನೇ ಮರೆತು ಬಿಟ್ಟಿದ್ದರು. ಆದರೆ, ಕಳೆದ ಎರಡುದಿನಗಳಿಂದ ಆಕಾಶದಲ್ಲಿ ಸೂರ್ಯನ ದರ್ಶನವಾದ ಹಿನ್ನೆಲೆಯಲ್ಲಿ ನಾಗರಿಕರ ಮೊಗದಲ್ಲಿ ಸಂತಸ ಮೂಡಿದೆ.

ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ದೀಪಾವಳಿ ವೇಳೆ ಪಟಾಕಿ ಸದ್ದು ಕಡಿಮೆಯಾಗಿದೆ. ಆದರೆ, ಈ ಬಾರಿ ಭಾರಿ ಪ್ರಮಾಣದ ಮಳೆಯಿಂದಾಗಿ ಒಟ್ಟು ವಹಿವಾಟಿನಲ್ಲಿ ಶೇ.50 ರಷ್ಟು ಕ್ಷೀಣಿಸಿದೆ. ಜನರಲ್ಲಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳು ಕುರಿತು ಜಾಗೃತಿ ಹೆಚ್ಚಾಗಿದೆ. ಪಟಾಕಿ ಸುಡುವುದರಿಂದ ವಾಯು, ಶಬ್ದ ಮಾಲಿನ್ಯವಾಗುತ್ತಿದ್ದು, ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿರುವುದೇ ಪಟಾಕಿ ವಹಿವಾಟು ಕುಸಿತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.

ಇತ್ತೀಚಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪಟಾಕಿಗಳ ಮೇಲೆ ಜಿಎಸ್‌ಟಿ ಪರಿಣಾಮ ಬೀರಿದ್ದು, ಈ ಬಾರಿ ಶೇ.28 ರಷ್ಟು ತೆರಿಗೆ ಹೆಚ್ಚಾಗಿದೆ. ಹೀಗಾಗಿ, ಜನರು ಪಟಾಕಿಗಳನ್ನು ಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಹಬ್ಬಕ್ಕಾಗಿ ಇನ್ನೆರಡು ದಿನಗಳು ಬಾಕಿಯಿದ್ದರೂ, ನಗರದಲ್ಲಿ ಪಟಾಕಿ ಸದ್ದು ಮಾತ್ರ ಕಡಿಮೆ ಪ್ರಮಾಣದಲ್ಲಿ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News