ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ದಿಗ್ವಿಜಯ್ ಸಿಂಗ್ ಅಳಿಯನಿಂದ ವಂಚನೆ: ಆರೋಪ

Update: 2017-10-17 14:57 GMT

ಬೆಂಗಳೂರು, ಅ.17: ರಾಜ್ಯ ಸರಕಾರದಿಂದ ಇಲೆಕ್ಟ್ರಿಕಲ್ ಗುತ್ತಿಗೆ ಕೊಡಿಸುವುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್‌ಸಿಂಗ್ ತಮ್ಮ ಅಳಿಯನ ಮೂಲಕ ನಗರದ ಜೆ.ಪಿ.ನಗರದ ಬಾಲಾಜಿ ಇಲೆಕ್ಟ್ರಿಕಲ್ ಕಂಪೆನಿಯಿಂದ 1.15 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿ ಬಾಬುರಾವ್ ಚೌಹಾಣ್ ಆರೋಪಿಸಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಗ್ವಿಜಯ್‌ಸಿಂಗ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಗ ರಾಜಸ್ತಾನ ಮೂಲದ ಅವರ ಅಳಿಯ ಭವಾನಿಸಿಂಗ್, ಬಾಲಾಜಿ ಇಲೆಕ್ಟ್ರಿಕಲ್‌ಗೆ ಟೆಂಡರ್ ಮೂಲಕ ರಾಜ್ಯ ಸರಕಾರದಿಂದ ಇಲೆಕ್ಟ್ರಿಕಲ್ ಗುತ್ತಿಗೆ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಗುತ್ತಿಗೆ ಕೊಡಿಸಲು ಒಪ್ಪಿದ ದಿಗ್ವಿಜಯ್‌ಸಿಂಗ್ ಹಣಕ್ಕೆ ಬೇಡಿಕೆ ಇರಿಸಿದ್ದರು. ಅದರಂತೆ ಬಾಲಾಜಿ ಇಲೆಕ್ಟ್ರಿಕಲ್ ಕಂಪೆನಿ ಭವಾನಿಸಿಂಗ್‌ಗೆ ಮೊದಲಿಗೆ 1.15 ಕೋಟಿಗೆ ಮುಂಗಡ ಚೆಕ್ ನೀಡಿದ್ದು, ಬಳಿಕ ನಗದು ರೂ.ಯಲ್ಲಿ ವಿವಿಧ ಕಂತುಗಳಲ್ಲಿ 1.15 ಕೋಟಿ ರೂ. ನೀಡಿದೆ. ಅಷ್ಟರಲ್ಲಿ ದಿಗ್ವಿಜಯ್‌ಸಿಂಗ್‌ಗೆ ರಾಜ್ಯ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ, ಅವರು ಗುತ್ತಿಗೆಯನ್ನೂ ಕೊಡಿಸದೆ, ಹಣವನ್ನೂ ಹಿಂದಿರುಗಿಸದ ದಿಗ್ವಿಜಯ್ ಮತ್ತು ಅವರ ಅಳಿಯ ಮುಂಗಡವಾಗಿ ಪಡೆದಿದ್ದ ಚೆಕ್ ಡ್ರಾ ಮಾಡಲು ಮುಂದಾದಾಗ ಬೌನ್ಸ್ ಆಗಿದೆ ಎಂದು ತಿಳಿದು ಬಂದಿದೆ ಎಂದು ವಿವರಿಸಿದರು.

ಮತ್ತೊಂದು ಕಡೆ, ಗುತ್ತಿಗೆ ಸಿಗದೆ ಹಣ ಕಳೆದುಕೊಂಡು ಬಾಲಾಜಿ ಇಲೆಕ್ಟ್ರಿಕಲ್ ಕಂಪೆನಿಯು ದಿಗ್ವಿಜಯ್ ಅಳಿಯ ಭವಾನಿ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು. ಹಾಗೂ ಈ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News