ಕನ್ನಡದ ಬೆಳಕು ಎಲ್ಲೆಡೆ ಪ್ರವಹಿಸಲಿ: ಸಿಎಂ ಸಿದ್ದರಾಮಯ್ಯ

Update: 2017-10-17 15:57 GMT

ಬೆಂಗಳೂರು, ಅ.17: ಬೆಳಕಿನ ಹಬ್ಬ ದೀಪಾವಳಿ ಅಜ್ಞಾನದಿಂದ ಬೆಳಕಿನೆಡೆಗೆ ಪಯಣಿಸುವುದರ ದ್ಯೋತಕ ಎನಿಸಿದ್ದು, ನಮ್ಮೆಲ್ಲರನ್ನೂ ಮೌಢ್ಯದ ಅಂಧಕಾರದಿಂದ ದೂರಮಾಡಿ ವೈಚಾರಿಕತೆ ಹಾಗೂ ವೈಜ್ಞಾನಿಕತೆಗೆ ಮತ್ತಷ್ಟು ಹತ್ತಿರವಾಗಿಸಲಿ. ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ. ಕನ್ನಡದ ಬೆಳಕು ಎಲ್ಲೆಡೆ ಪ್ರವಹಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ.

ನೀರು ತುಂಬುವ ಹಬ್ಬದಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬವು ನರಕ ಚತುರ್ದಶಿಯ ದಿನದಂದು ನರಕಾಸುರ ವಧೆಯ ಸ್ಮರಣೆ, ಅಮಾವಾಸ್ಯೆ ದಿನದಂದು ಲಕ್ಷ್ಮಿಪೂಜೆ ಹಾಗೂ ಬಲಿ ಪಾಢ್ಯಮಿಯ ದಿನದಂದು ಬಲಿ ಚಕ್ರವರ್ತಿಗೆ ದೀಪಗಳ ಮೂಲಕ ಸ್ವಾಗತ ಹೀಗೆ ಮೂರು ದಿನಗಳ ಸಡಗರ ಮಾತ್ರವಲ್ಲ. ಹನ್ನೆರಡನೆ ದಿನ ಉತ್ವಾನ ದ್ವಾದಶಿಯಂದು ತುಳಸಿ ಗಿಡದ ಜೊತೆಗೆ ನಲ್ಲಿಯ ಗಿಡ ನೆಟ್ಟು ಪೂಜೆ ಸಲ್ಲಿಸುವ ವಿಶೇಷ ಧಾರ್ಮಿಕ ಚಟುವಟಿಕೆ ಕೂಡಾ! ಅಂತೆಯೇ, ಕಾರ್ತೀಕ ಮಾಸವಿಡೀ ಮನೆ-ಮನೆಯಲ್ಲೂ ಮಣ್ಣಿನ ಹಣತೆಯಲ್ಲಿ ಎಣ್ಣೆಯ ದೀಪ ಬೆಳಗುವ ಸಂಭ್ರಮ ಎಂದು ಹೇಳಿದ್ದಾರೆ.

ಸ್ವಯಂ-ಪ್ರೇರಿತವಾಗಿ ಪಟಾಕಿಗಳ ಹಾವಳಿಗೆ ಕಡಿವಾಣ ಹಾಕಿ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ವರ ಸಹಕಾರ ದೊರೆಯಲಿ. ಪಟಾಕಿಗಳ ಬದಲಿಗೆ ಮಕ್ಕಳಿಗೆ ಶಿಕ್ಷಣಕ್ಕೆ ಉಪಯುಕ್ತ ಪುಸ್ತಕಗಳನ್ನು ಬಳುವಳಿಯಾಗಿ ಕೊಟ್ಟು ಸಂಭ್ರಮಿಸುವ ಹೊಸ ಸಂಪ್ರದಾಯಕ್ಕೆ ಚಾಲನೆ ದೊರೆತು ಈ ದೀಪಾವಳಿಯು ಪರಿಸರ ದೀಪಾವಳಿಯಾಗಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News