ಪತ್ನಿಯ ಕತ್ತು ಕೊಯ್ದು ಕೊಲೆಗೈದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

Update: 2017-10-17 16:28 GMT

ಬೆಂಗಳೂರು, ಅ.17: ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಕಾರಣಕ್ಕೆ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಮೂಲದ ನಂಜಪ್ಪ ಎಂಬಾತನನ್ನು ದೋಷಿ ಎಂದು ತೀರ್ಮಾನಿಸಿದ ರಾಜ್ಯ ಹೈಕೋರ್ಟ್, ಅಪರಾಧಿಗೆ ಮಧುಗಿರಿ 4ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಮಾರ್ಪಡಿಸಿ ಕ್ಷಮಾದಾನ ರಹಿತ 25 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಪ್ರಕರಣದಲ್ಲಿ ಅಧೀನ ನ್ಯಾಯಾಲಯ ತನಗೆ ವಿಧಿಸಿದ ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಕೋರಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮದ್ದಲಚೆರುವು ಗ್ರಾಮದ ನಿವಾಸಿ ನಂಜಪ್ಪ ಸಲ್ಲಿಸಿದ್ದ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಮಂಗಳವಾರ ಈ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ನಂಜಪ್ಪನನ್ನು ದೋಷಿ ಎಂದು ಪರಿಗಣಿಸಿತು. ಆದರೆ, ಇದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿರುವುದರಿಂದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಅಧೀನ ನ್ಯಾಯಾಲಯ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ನ್ಯಾಯಪೀಠ ಸಮ್ಮತಿಸಲಿಲ್ಲ. ಬಚ್ಚನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ಪರಿಗಣಿಸುವುದಾದರೆ ನಂಜಪ್ಪನ ಪ್ರಕರಣ ಅಪರೂಪದಲ್ಲಿ ಅಪರೂಪದ ಪ್ರಕರಣದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಹೀಗಾಗಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಸರಿಯಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಆದರೆ, ನಂಜಪ್ಪ ಅಮಾನವೀಯವಾಗಿ ಪತ್ನಿಯ ಕತ್ತು ಕುಯ್ದು ಕೊಲೆ ಮಾಡಿದ್ದು, ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿವೆ. ಹೀಗಾಗಿ, ಆತನಿಗೆ ಗಲ್ಲು ಶಿಕ್ಷೆ ಬದಲಾಗಿ ಕ್ಷಮಾದಾನ ರಹಿತವಾದ 25 ವರ್ಷ ಜೈಲು ಶಿಕ್ಷೆ ವಿಧಿಸಿದರೆ ಸೂಕ್ತ ಹಾಗೂ ನ್ಯಾಯಸಮ್ಮತವಾಗಲಿದೆ ಎಂದು ತಿಳಿಸಿದ ಹೈಕೋರ್ಟ್, ಈ ಮೇಲಿನಂತೆ ಆದೇಶಿಸಿತು. ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಅಭಿಯೋಜಕ ವಿಜಯ ಕುಮಾರ ಮಜಗೆ ವಾದ ಮಂಡಿಸಿದ್ದರು.

ಪ್ರಕರಣವೇನು: ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಕಾರಣಕ್ಕಾಗಿ ನಂಜಪ್ಪ, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಠಾಣಾ ವ್ಯಾಪ್ತಿಯ ಅಂಡೇಪಲ್ಲಿ ಗ್ರಾಮದಲ್ಲಿನ ತನ್ನ ಅಕ್ಕ ನಂಜಮ್ಮ ಎಂಬವರ ಮನೆಯಲ್ಲಿ 2015ರ ಸೆ.15ರಂದು ಪತ್ನಿ ಲಕ್ಷ್ಮೀ ದೇವಿಯ ಕತ್ತು ಕುಯ್ದು ಕೊಲೆ ಮಾಡಿದ. ಕತ್ತು ಕುಯುತ್ತಿದ್ದನ್ನು ದೂರುದಾರೆ ನಂಜಮ್ಮ ಹಾಗೂ ನಂಜಪ್ಪನ ಮೂವರು ಮಕ್ಕಳು ಪ್ರತ್ಯಕ್ಷವಾಗಿ ಕಂಡಿದ್ದರು. ಆ ಕುರಿತು ತಿರುಂನಿ ಠಾಣಾಧಿಕಾರಿಗೆ ಮತ್ತು ಮಧುಗಿರಿ ನ್ಯಾಯಾಲಯಕ್ಕೆ ಸಾಕ್ಷ್ಯ ನೀಡಿದ್ದರು. ಸಾಕ್ಷ್ಯಾಧಾರಗಳ ಸಮೇತ ಕೊಲೆ ಸಾಬೀತಾದ ಕಾರಣ ಮಧುಗಿರಿ ನ್ಯಾಯಾಲಯ ನಂಜಪ್ಪಗೆ 2017ರ ಮೇ. 30ರಂದು ಗಲ್ಲು ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News