ಖಾಲಿ ಇರುವ ಕುಲಪತಿ ಹುದ್ದೆಗಳ ನೇಮಕಕ್ಕೆ ಆಗ್ರಹ

Update: 2017-10-17 16:25 GMT

ಬೆಂಗಳೂರು, ಅ. 17: ಮೈಸೂರು, ಬೆಂಗಳೂರು, ತುಮಕೂರು, ರಾಜೀವ ಗಾಂಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಹಾಗೂ ಕಾನೂನು ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿ ಹುದ್ದೆಗಳನ್ನು ನೇಮಕ ಮಾಡದೆ ಉನ್ನತ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಆಕ್ಷೇಪಿಸಿದ್ದು, ಕೂಡಲೇ ಕುಲಪತಿಗಳ ಹುದ್ದೆ ಭರ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಗೆ ಪತ್ರ ಬರೆದಿರುವ ಅವರು, ಕಳೆದ ಹತ್ತು ತಿಂಗಳಿಂದ ತೆರವಾಗಿರುವ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ವಿವಿಗಳಲ್ಲಿ ಏಕರೂಪ ವಿಧೇಯಕ ಜಾರಿಗೆ ಸಂಬಂಧ ವಿವಿ ಅಧ್ಯಾಪಕರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದಿರುವುದು ವಿಷಾದನೀಯ. ಕೂಡಲೇ ಈ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿ, ಎಲ್ಲರ ಸಲಹೆ-ಸೂಚನೆ ಪಡೆದು ವಿಧೇಯಕವನ್ನು ಸದನದಲ್ಲಿ ಮಂಡಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News