ಹಿರಿಯ ನಾಗರಿಕರ ಬಗೆಹರಿಯದ ಸಮಸ್ಯೆಗಳು

Update: 2017-10-17 18:26 GMT

ಭಾಗ 2

ಸುಪ್ರೀಂ ಕೋರ್ಟ್‌ನಲ್ಲಿ ಈಗ ಹೂಡಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸರಕಾರ ಕನಿಷ್ಠ 2,000 ರೂ. ಮಾಸಿಕ ವೃದ್ಧಾಪ್ಯವೇತನ ನೀಡಬೇಕೆಂದು ಆಗ್ರಹಿಸಿದೆ. ಅರ್ಜಿ ಸಲ್ಲಿಸಿರುವ ಮಾಜಿ ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವ ಅಶ್ವನಿ ಕುಮಾರ್ ‘‘200 ರೂ.ಮಾಸಿಕ ಪಿಂಚಣಿ ನಿರ್ಧಾರವಾದದ್ದು ಎಷ್ಟೋ ವರ್ಷಗಳ ಹಿಂದೆ, ಇವತ್ತಿನ ಜೀವನ ನಿರ್ವಹಣಾ ವೆಚ್ಚಕ್ಕೂ ಈ ಮೊತ್ತಕ್ಕೂ ಸಂಬಂಧವೇ ಇಲ್ಲ, ಇದು ತೀರ ಅಪ್ರಸ್ತುತ ಮೊತ್ತ’’ ಎಂದಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ ಪಿಂಚಣಿದಾರರು, ರೂ. 1,600ರಿಂದ 2,000ವರೆಗಿನ ಪಿಂಚಣಿ ತಕ್ಕ ಮಟ್ಟಿಗೆ ‘‘ಸಾಕು’’ ಎಂದಿದ್ದಾರೆ. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯ ವೆಬ್‌ಸೈಟ್‌ನ ಪ್ರಕಾರ ಭಾರತದಲ್ಲಿ ಮಿಲಿಯಗಟ್ಟಲೆ ವೃದ್ಧರು ವೃದ್ಧಾಪ್ಯ ಪಿಂಚಣಿ ಪಡೆಯುತ್ತಿದ್ದಾರೆ. ಇದು ಚುನಾವಣೆಯ ಸಮಯದಲ್ಲಿ ಅವರನ್ನು ತುಂಬ ಆಕರ್ಷಕವಾದ ಒಂದು ವೋಟ್ ಬ್ಯಾಂಕ್ ಆಗಿ ಮಾಡುತ್ತದೆ. ಆದರೂ ಕೂಡ, ಹಲವಾರು ಚುನಾವಣೆಗಳ ಬಳಿಕವೂ, ಹಿರಿಯರ ಮತಯಾಚನೆಯು ಭಾರತದ ಬಹುಪಾಲು ರಾಜ್ಯಗಳಲ್ಲಿ ಗೌರವಯುತವಾದ ಒಂದು ಪಿಂಚಣಿ ಮೊತ್ತವಾಗಿ ಇನ್ನೂ ಪರಿವರ್ತಿತವಾಗಿಲ್ಲ.

ಪಿಂಚಣಿ, ಸೇವೆಗಳನ್ನು ಪಡೆಯುವ ಕಷ್ಟಗಳ ಸರಮಾಲೆ

ಪಿಂಚಣಿ ಮೊತ್ತವಷ್ಟೇ ಅತ್ಯಲ್ಪ ಎಂದಲ್ಲ; ಆ ಅಲ್ಪ ಮೊತ್ತವನ್ನು ಪಡೆಯಲು ಕೂಡ ಪಿಂಚಣಿದಾರರು ಹತ್ತು ಹಲವು ಸರಕಾರಿ ಪ್ರಕ್ರಿಯೆಗಳನ್ನು ಹಾದುಹೋಗಬೇಕು; ನೆರವು ನೀಡಲು ಮುಂದೆ ಬರದ ಒರಟು ಅಧಿಕಾರಿಗಳ, ಸಿಬ್ಬಂದಿಯ ಮರ್ಜಿಗಾಗಿ ಕಾಯಬೇಕು. 71ರ ಹರೆಯದ ರೇಣುಕಾ ಬಿಹಾರದವರು. ಆಕೆ ಗಖಾಂಡಾಕ್ಕೆ ಹೋದ ಬಳಿಕ ದಿಲ್ಲಿ ಸರಕಾದ ಪಿಂಚಣಿಗೆ ನೋಂದಾಯಿಸಿ ಕೊಳ್ಳಬಯಸಿದರು. ಆಕೆಯ ಎಲ್ಲ ಮೂಲ ದಾಖಲೆಗಳು ಬಿಹಾರದಾದ್ದರಿಂದ ಆಕೆಯ ಬಳಿ ದಿಲ್ಲಿಯ ಸ್ಥಳೀಯ ವಾಸದ ದಾಖಲೆ ಇರಲಿಲ್ಲ. ಆಕೆ ಸ್ಥಳೀಯ ಗುರುತು ದಾಖಲೆಗಳಿಗಾಗಿ ಸರಕಾರಿ ಕಚೇರಿಯೊಂದಕ್ಕೆ ಹೋದಾಗ, ‘‘ಅವರ ಆ ವಯಸ್ಸಿನಲ್ಲಿ’’ ಅವರಿಗೆ ಗುರುತು ದಾಖಲೆ ಬೇಕಾಗಿಲ್ಲವೆಂದು ಹೇಳಿ ಅವರನ್ನು ಹಿಂದೆ ಕಳುಹಿಸಲಾಯಿತು.

 ಅನುಕಂಪ ಮತ್ತು ಬೆಂಬಲದ, ಸಹಾಯದ ಕೊರತೆ ಇತರ ರೀತಿಗಳಲ್ಲೂ ವ್ಯಕ್ತವಾಗುತ್ತದೆ. ದಿಲ್ಲಿಯ ತುಘಲಕಾಬಾದ್‌ನ ಖಾಸಗಿ ವೃದ್ಧಾಶ್ರಮ ‘ಪಂಚವಟಿ’ಯ ನೀಲಂ ಮೋಹನ್ ತಮ್ಮ ವೃದ್ಧಾಶ್ರಮಕ್ಕೆ ಹೋಗುವ ‘ರಸ್ತೆಯನ್ನು ಅಗಲಗೊಳಿಸಬೇಕು, (ಯಾಕೆಂದರೆ ಈಗ ಅಲ್ಲಿಗೆ ಆ್ಯಂಬುಲೆನ್ಸ್‌ಗಳ ಮತ್ತು ನೀರಿನ ಟ್ಯಾಂಕರ್‌ಗಳು ಬರಲು ಆಗುತ್ತಿಲ್ಲ) ಎಂದು ಪ್ರಯತ್ನಿಸಿ ಹರಸಾಹಸ ಪಡುತ್ತಿದ್ದಾರೆ. ಆದರೆ ಅವರ ಪ್ರಯತ್ನ, ಹೋರಾಟ ಇನ್ನೂ ವ್ಯರ್ಥವಾಗಿಯೇ ಉಳಿದಿದೆ.

ಏಕಾಂಗಿ ಬದುಕು

2017ರ ಸೆಪ್ಟಂಬರ್ ಮೊದಲ ಭಾಗದಲ್ಲಿ ದಿಲ್ಲಿಯ ಅಶೋಕ್ ವಿಹಾರದಲ್ಲಿ ಇಬ್ಬರೇ ವಾಸಿಸುತ್ತಿದ್ದ ಹಿರಿಯ ದಂಪತಿಯ ಕೊಲೆ ನಡೆಯಿತು. ಕೊಲೆಗಾರನೆಂದು ಅನುಮಾನಿಸಲ್ಪಟ್ಟ ವ್ಯಕ್ತಿಯು ಆ ಜೋಡಿ ತಮ್ಮ ಆರೈಕೆಗಾಗಿ ನೇಮಿಸಿಕೊಂಡಿದ್ದ ಓರ್ವ ಮೇಲ್ ನರ್ಸ್ ಆಗಿದ್ದ. ಪ್ರಕರಣ ಬೆಳಕಿಗೆ ಬಂದಾಗ ಆತ ಪಲಾಯನಮಾಡಿದ.

ಕೆಲವು ತಿಂಗಳುಗಳ ಮೊದಲು, 22ರ ಹರೆಯದ ವ್ಯಕ್ತಿಯೊಬ್ಬ 81 ವರ್ಷದ ವೃದ್ಧೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದದ್ದಕ್ಕಾಗಿ ಸ್ಥಳೀಯ ನ್ಯಾಯಾಲಯವೊಂದು ಶಿಕ್ಷೆ ವಿಧಿಸಿತು. ಏಕಾಂಗಿಯಾಗಿ ಬದುಕುತ್ತಿದ್ದ ಆ ವೃದ್ಧೆ ತನ್ನ ಪೂರ್ಣಕಾಲಿಕ ಆರೈಕೆಗಾಗಿ ಆತನನ್ನು ನೇಮಿಸಿಕೊಂಡಿದ್ದರು.

ಹಿರಿಯ ನಾಗರಿಕರ ವಿರುದ್ಧ ನಡೆಯುವ ಅಪರಾಧಗಳಿಗೆ ವಿಶೇಷ ಗಮನಕೊಡುವ ಆವಶ್ಯಕತೆ ಇದೆ. ಅಂಕಿಸಂಖ್ಯೆಗಳು ಲಭ್ಯವಿರುವ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅಪರಾಧಗಳ ಸಂಖ್ಯೆ 97ರಷ್ಟು ಏರಿಕೆಯಾಗಿದೆ. 2014ರಲ್ಲಿ 18,714 ಪ್ರಕರಣಗಳು ವರದಿಯಾಗಿದ್ದರೆ, 2015ರಲ್ಲಿ ಈ ಸಂಖ್ಯೆ 20,532ಕ್ಕೆ ಏರಿತು.

ಹಿರಿಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಅತ್ಯಧಿಕ ಸಂಖ್ಯೆಯ ಅಪರಾಧಗಳು ಮಹಾರಾಷ್ಟ್ರದಲ್ಲಿ ನಡೆದಿದ್ದರೆ, ನಂತರದ ಸ್ಥಾನಗಳು ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸಲ್ಲುತ್ತದೆ. ದೇಶದ ದಕ್ಷಿಣಭಾರತದಲ್ಲಿ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.

ಹಿರಿಯ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಬದುಕುತ್ತಿದ್ದರೆ, ಆತ/ಆಕೆ ಸುಲಭವಾಗಿ ಅಪರಾಧ ಕೃತ್ಯಕ್ಕೆ ಗುರಿಯಾಗುತ್ತಾನೆ/ಳೆ. 2011ರ ಜನಗಣತಿಯ ಪ್ರಕಾರ, ಭಾರತದ 240 ಮಿಲಿಯ ಮನೆಗಳ/ಕುಟುಂಬಗಳ ಶೇ. 40 ಮನೆಗಳಲ್ಲಿ ಏಕಾಂಗಿಯಾಗಿ ಬದುಕುವ ವ್ಯಕ್ತಿಯೇ ಆ ಕುಟುಂಬದ ಒಟ್ಟು ಸದಸ್ಯ. ಇವುಗಳ ಪೈಕಿ ಅರ್ಧದಷ್ಟು (ಶೇ.48) ಮನೆಗಳಲ್ಲಿರುವ ವ್ಯಕ್ತಿಯು 60 ಅಥವಾ 60ಕ್ಕಿಂತ ಹೆಚ್ಚು ವಯಸ್ಸಾದವರು. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಈ ಸಂಖ್ಯೆ, ಅನುಕ್ರಮವಾಗಿ, ಶೇ.63 ಮತ್ತು ಶೇ. 62.

ಅಲ್ಲದೆ, ಹೀಗೆ ಏಕಾಂಗಿಯಾಗಿ ಬದುಕುತ್ತಿರುವ ಹಿರಿಯರಲ್ಲಿ ಶೇ. 73 ಮಹಿಳೆಯರು. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಏಕವ್ಯಕ್ತಿ ವಾಸಿಸುವ ಮನೆಗಳಲ್ಲಿ ಸುಮಾರು ಶೇ. 81 ಮನೆಗಳು ಏಕಾಂಗಿ ಮಹಿಳೆ ವಾಸಿಸುವ ಮನೆಗಳು.

 ಕುಟುಂಬದ ಜೊತೆ ಬದುಕುವುದು ಕೂಡ ಸಮಸ್ಯೆಗೆ ಖಚಿತವಾದ ಪರಿಹಾರ ಎನ್ನುವಂತಿಲ್ಲ. ‘ಹೆಲ್ಪ್ ಏಜ್ ಇಂಡಿಯಾ’ 2014ರಲ್ಲಿ ತನ್ನ ‘ಎಲ್ಡರ್ಲಿ ಅಬ್ಯೂಸ್’ ವರದಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅರ್ಧದಷ್ಟು(ಶೇ. 50) ವೃದ್ಧರು ತಾವು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ, ಸಂಕಷ್ಟಕ್ಕೆ ಗುರಿಯಾಗಿರುವುದಾಗಿ ಹೇಳಿದರು. ಕೆಟ್ಟ ಅನುಭವಕ್ಕೆ ಗುರಿಯಾದವರಲ್ಲಿ ಹೆಚ್ಚಿನವರು ತಮ್ಮ ಕುಟುಂಬದ ಜತೆಗೇ ವಾಸಿಸುತ್ತಿದ್ದರು ಮತ್ತು ಸೊಸೆ ಹಾಗೂ ಮಗ ಹೀಗೆ ಹಿರಿಯರನ್ನು ಪೀಡಿಸುವವರಲ್ಲಿ ಅತೀ ಪ್ರಮುಖರೆಂದು ಸಮೀಕ್ಷೆಯಿಂದ ತಿಳಿದುಬಂತು.

ರೆಸಿಡೆನ್ಶಿಯಲ್ ಹೋಮ್ಸ್

ವೃದ್ಧರ ಸಮಸ್ಯೆಗಳಿಗೆ ಒಂದು ಪರಿಹಾರವೆಂದರೆ ರೆಸಿಡೆನ್ಶಿಯಲ್ ಹೋಮ್ಸ್. ಆದರೆ ‘ಇಂಡಿಯಾ ಸ್ಪೆಂಡ್’ನ ಒಂದು ವಿಶ್ಲೇಷಣೆಯ ಪ್ರಕಾರ, ಸುಮಾರು 500ಕ್ಕೂ ಹೆಚ್ಚು ಸರಕಾರದ ಯೋಜನೆಗಳು(ಓಲ್ಡ್‌ಏಜ್ ಹೋಮ್ಸ್/ದೇ ಕೇರ್ ಸೆಂಟರ್ಸ್‌/ರೆಸ್ಪೈಟ್ ಕೇರ್ ಹೋಮ್ಸ್) ದೇಶದ 700 ಜಿಲ್ಲೆಗಳ ಪೈಕಿ 215 ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. 2012-13ರಿಂದ 2015-16ರ ವರೆಗಿನ ನಾಲ್ಕು ವಿತ್ತ ವರ್ಷಗಳಲ್ಲಿ ಕೇಂದ್ರ ಸರಕಾರ ಓಲ್ಡ್‌ಏಜ್ ಹೋಮ್ಸ್‌ಗಳ ನೆರವಿಗಾಗಿ ಬಿಡುಗಡೆ ಮಾಡಿದ ಮೊತ್ತ ಸುಮಾರು 47 ಕೋಟಿ ರೂ. ಈ ಮೊತ್ತದ ಅರ್ಧಭಾಗ ಕೇವಲ ನಾಲ್ಕು ರಾಜ್ಯಗಳಿಗೆ (ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ) ಹೋಯಿತು. ಆದರೆ, ಬೇಸರದ ಸಂಗತಿ ಏನೆಂದರೆ, ಈ ಮೊತ್ತವನ್ನು ಕೂಡ ಪೂರ್ಣವಾಗಿ ಬಳಸಿಕೊಳ್ಳಲಾಗಲಿಲ್ಲ. ವಿತ್ತವರ್ಷದ ಕೊನೆಯಲ್ಲಿ ರಾಜ್ಯಸರಕಾರಗಳಿಂದ ಹಣ ಮಂಜೂರಾತಿಗೆ ವಿನಂತಿಗಳು ಬರುತ್ತವೆ. ಆಗ ಆ ಮನವಿಗಳನ್ನು ಪ್ರೊಸೆಸ್ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಕೇಂದ್ರ ಸರಕಾರ ನೀಡಿದ ಧನಸಹಾಯ ನಿರುಪಯೋಗವಾಗುತ್ತದೆ ಎಂದು ಇದಕ್ಕೆ ಸಬೂಬು ನೀಡಲಾಗುತ್ತದೆ.

ಅದೇ ವೇಳೆ, ಖಾಸಗಿ ಮನೆಗಳು ಹೆಚ್ಚಿನವರ ಕೈಗೆ ಎಟಕುವುದಿಲ್ಲ. ಲೋಕಸಭೆಯಲ್ಲಿ ವೃದ್ಧರ ಸಮಸ್ಯೆ ಪ್ರಸ್ತಾಪವಾದ ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಸಮಸ್ಯೆಯ ಬಗ್ಗೆ ಗಂಭೀರ ಚರ್ಚೆಯೂ ನಡೆದಿಲ್ಲ.

ವೃದ್ಧರ ಸಮಸ್ಯೆಗಳ ಪರಿಹಾರವಾಗಬೇಕಾದರೆ, ಯಾವುದೇ ಬದಲಾವಣೆ ಸಾಧ್ಯವಾಗಬೇಕಾದರೆ, ಮೊದಲು ಸಮಸ್ಯೆಯ ಗಂಭೀರತೆಯನ್ನು ಗುರುತಿಸಬೇಕು; ಮತ್ತು ಬಳಿಕ ಸರಕಾರವು ತನ್ನ ನೀತಿಯಲ್ಲಿ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.

ವೃದ್ಧರು ಸ್ವತಂತ್ರವಾಗಿ, ತಮ್ಮ ಪಾಡಿಗೆ ಬದುಕುವಂತಾಗಬೇಕಾದರೆ ಅವರಿಗೆ ಗೌರವಯುತವಾಗಿ ಬದುಕಲು ಸಾಕಾಗುವಷ್ಟು ವೃದ್ಧಾಪ್ಯ ಪಿಂಚಣಿ ದೊರಕಬೇಕು. ಹಾಗೆಯೇ, ಹಿರಿಯ ನಾಗರಿಕರ ಸುರಕ್ಷತೆಗಾಗಿ ಸಾರ್ವಜನಿಕ ಸಮುದಾಯ ಹಾಗೂ ಕಾನೂನನ್ನು ಅನುಷ್ಠಾನಗೊಳಿಸುವ ಸರಕಾರದ ಏಜೆನ್ಸಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ವಯಸ್ಸಾದ ವ್ಯಕ್ತಿಗಳನ್ನು ನೋಡಿಕೊಳ್ಳುವ ಕುಟುಂಬದ ಸದಸ್ಯರಿಗೆ ಹೆರಿಗೆ ರಜೆ, ಮನೆಯಿಂದಲೇ ಕೆಲಸಮಾಡಿಸುವುದು ಇತ್ಯಾದಿ ಸವಲತ್ತುಗಳನ್ನು ದೊರಕಿಸಬೇಕು.

ಕೃಪೆ: hindustantimes

Writer - ಅಕ್ಷಿ ಚಾವ್ಲಾ

contributor

Editor - ಅಕ್ಷಿ ಚಾವ್ಲಾ

contributor

Similar News