ಗ್ರಾಮೀಣ ಭಾಗಕ್ಕೆ ಜಿಎಸ್ಟಿ ವಿಧಿಸುವ ಕ್ರಮ ಸಲ್ಲ: ಚಿತ್ರನಟ ಪ್ರಕಾಶ್ ರೈ

Update: 2017-10-18 12:18 GMT

ಬೆಂಗಳೂರು, ಅ. 18: ಬಡವರು, ಹಿಂದುಳಿದವರು, ಗ್ರಾಮೀಣ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವಿಧಿಸುವ ಕ್ರಮ ಸರಿಯಲ್ಲ ಎಂದು ಖ್ಯಾತ ಚಿತ್ರನಟ ಪ್ರಕಾಶ್ ರೈ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಬುಧವಾರ ಇಲ್ಲಿನ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಕೇಂದ್ರ ಸರಕಾರ ಜಿಎಸ್ಟಿ ವಿಧಿಸಿರುವ ಕ್ರಮ ಖಂಡಿಸಿ ರಂಗಕರ್ಮಿ ಪ್ರಸನ್ನ ಕೈಗೊಂಡಿರುವ ಉಪವಾಸ ಸತ್ಯಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಿಗೆ ಜಿಎಸ್ಟಿ ವಿಧಿಸುವುದರಿಂದ ಅಲ್ಲಿನ ಜನರಿಗೆ ತೀವ್ರ ಅನ್ಯಾಯ ಆಗುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಜನರ ಮೇಲೆ ತೆರಿಗೆ ಹೇರಿದ್ದರಿಂದ ಅವರ ಆದಾಯ ಒಂದೇ ರೀತಿ ಇರುವುದಿಲ್ಲ. ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಜಿಎಸ್ಟಿಯಿಂದ ವಿನಾಯಿತಿ ನೀಡುವ ಮೂಲಕ ಆ ಉದ್ಯಮವನ್ನು ಪ್ರೋತ್ಸಾಹಿಸುವುದು ಕೇಂದ್ರ ಸರಕಾರದ ಕರ್ತವ್ಯ ಎಂದರು.

ಹಿಂದುಳಿದವರು ಮತ್ತು ಬುಡಕಟ್ಟು ಜನರು ಇಂತಹ ಗುಡಿ ಕೈಗಾರಿಗಳನ್ನು ಅವಲಂಬಿಸಿಕೊಂಡು ಬದುಕುತ್ತಾರೆ. ಇದರ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ ಎಂದ ಅವರು, ಕಾಡಿಗೆ ಹೋಗಿ ಜೇನು ತರುತ್ತಾರೆ. ಬುಟ್ಟಿ ಹೆಣೆದು ಬದುಕುವವರಿರುತ್ತಾರೆ. ಮಡಿಕೆ-ಕುಡಿಕೆಗಳಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರೆಲ್ಲರ ಬದುಕಿನ ಮೇಲೆ ಜಿಎಸ್ಟಿ ವಿಧಿಸಿದರೆ ದುಷ್ಪರಿಣಾಮ ಬೀರುತ್ತದೆ ಎಂದರು.

ಏಕರೂಪದ ತೆರಿಗೆ ಪದ್ಧತಿ ಜಾರಿಗೊಳಿಸುವ ಉದ್ದೇಶದಿಂದ ಎಲ್ಲ ಪಕ್ಷಗಳ ಸರ್ವಾನುಮತದಿಂದ ಜಿಎಸ್ಟಿ ಜಾರಿಗೆ ನಿರ್ಣಯ ಕೈಗೊಂಡಿದ್ದರೂ ಅದನ್ನು ಮರು ಪರಿಶೀಲಿಸಬೇಕು. ಬಡ ಜನರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲು ಪ್ರಧಾನಿ ಆಲೋಚಿಸಬೇಕು ಎಂದು ಕೋರಿದರು.

ಆರನೆ ದಿನಕ್ಕೆ ಸತ್ಯಾಗ್ರಹ: ಸತ್ಯಾಗ್ರಹನಿರತ ರಂಗಕರ್ಮಿ ಪ್ರಸನ್ನ ಅವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಬೊಗಳೆ ಬಿಡುತ್ತವೆ. ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಗ್ರಾಹಕರೇ ಕರ ನಿರಾಕರಣೆ ಆಂದೋಲನ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

‘ತಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ‘ನಟ’ ಎಂದು ಟೀಕಿಸಿದ್ದೇನೆ. ಆದರೆ, ನಟ ಎಂಬ ಪದ ಅವಮಾನದ್ದೇನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಗೆ ಸರಿ ಕಾಣದನ್ನು ಟೀಕಿಸುವ ಹಕ್ಕೂ ಇದೆ’

-ಪ್ರಕಾಶ್ ರೈ, ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News