ಅಪಘಾತ ನಡೆಸಿದ್ದಕ್ಕಾಗಿ ಸ್ಥಳೀಯರು ಮಹಿಳೆಗೆ ಹಲ್ಲೆಗೈದಿದ್ದರು: ಪೊಲೀಸ್ ಆಯುಕ್ತ ಸುನೀಲ್ ಕುಮಾರ್

Update: 2017-10-18 14:30 GMT

ಬೆಂಗಳೂರು, ಅ. 18: ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದ ಪ್ರದೇಶಕ್ಕೆ ತೆರಳಿದ್ದ ಸಂದರ್ಭ ನಂದಿನಿ ಎಂಬವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎನ್ನುವುದು ಸತ್ಯಕ್ಕೆ ದೂರವಾದ ಘಟನೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ನಂದಿನಿ ಅಪಘಾತ ಮಾಡಿದ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಆವಲಹಳ್ಳಿಯಲ್ಲಿ ನಂದಿನಿ ಎಂಬವರು ತಮ್ಮ ಸ್ನೇಹಿತರೊಂದಿಗೆ ಅನಧಿಕೃತವಾಗಿ ದನಗಳನ್ನು ಕೂಡಿ ಹಾಕಿದ ಪ್ರದೇಶಕ್ಕೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಗುಂಪು ಅವರ ಮೇಲೆ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು. ಆದರೆ, ಸಾಫ್ಟ್‌ವೇರ್ ಎಂಜಿನಿಯರ್ ನಂದಿನಿ ತಮ್ಮ ಕಾರನ್ನು ಅಟೋ ರಿಕ್ಷಾ ಮತ್ತು ಮಟನ್ ಅಂಗಡಿಗೆ ಗುದ್ದಿ ಅಪಘಾತ ಮಾಡಿದ್ದರಿಂದ ಸ್ಥಳೀಯರು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಕಾರಿನ ಗಾಜನ್ನು ಒಡೆದು ಹಾಕಿದ್ದರು. ಈ ಪ್ರಕರಣ ಸಂಬಂಧ 13 ಮಂದಿಯನ್ನು ಬಂಧಿಸಲಾಗಿದೆ.

ನಂದಿನಿ ಇಲ್ಲಿನ ಆವಲಹಳ್ಳಿಯಲ್ಲಿ ಅನಧಿಕೃತವಾಗಿ ದನಗಳ ಕೂಡಿಹಾಕಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತಲಘಟ್ಟಪುರ ಠಾಣಾ ಪೊಲೀಸರು ಮೂರು ದನಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News