ಜಿಎಸ್ಟಿ ಅನಾಹುತಗಳ ಬಗ್ಗೆಯೂ ಕೇಂದ್ರ ಸರಕಾರ ಆಲೋಚಿಸಬೇಕು: ಮಾಜಿ ಪ್ರಧಾನಿ ದೇವೇಗೌಡ

Update: 2017-10-18 12:38 GMT

ಬೆಂಗಳೂರು, ಅ. 18: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ತಂದ ಬಗ್ಗೆ ಹೆಮ್ಮೆ ಪಡುವ ಕೇಂದ್ರ ಸರಕಾರ, ಜಿಎಸ್ಟಿಯಿಂದ ಆಗಿರುವ ಅನಾಹುತಗಳ ಬಗ್ಗೆಯೂ ಗಂಭೀರವಾಗಿ ಆಲೋಚಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇಂದಿಲ್ಲಿ ಆಗ್ರಹಿಸಿದ್ದಾರೆ.

ಬುಧವಾರ ಇಲ್ಲಿನ ಬಸವನಗುಡಿಯಲ್ಲಿನ ನಿಡುಮಾಮಿಡಿ ಮಠದಲ್ಲಿ ಕೈಮಗ್ಗಗಳ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಿಂಪಡೆಯಲು ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ, ಕೂಡಲೇ ಉಪವಾಸ ಸತ್ಯಾಗ್ರಹ ಕೈಬಿಡಲು ಮನವಿ ಮಾಡಿದರು.

ಕೈಮಗ್ಗದಿಂದ ತಯಾರಿಸಿದ, ಗುಡಿ ಕೈಗಾರಿಕೆಗಳಲ್ಲಿ ತಯಾರಾದ ವಸ್ತುಗಳನ್ನು ಹಳ್ಳಿ ಜನ ಮಾತ್ರವಲ್ಲ, ನಗರ ಪ್ರದೇಶದ ಜನರೂ ಬಳಸುತ್ತಾರೆ. ಇಂತಹ ಕೈ ಮಗ್ಗದಿಂದ ಉತ್ಪಾದಿಸಿದ ಉತ್ಪನ್ನಗಳ ಮೇಲೆ ಜಿಎಸ್ಟಿ ತೆರಿಗೆ ವಿಧಿಸುವುದರಿಂದ ಕೈ ಮಗ್ಗದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿರುವುದರಲ್ಲಿ ಸಂಸದರಾದ ನಮ್ಮ ಕರ್ತವ್ಯವೂ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇನೆ. ಈ ಹೋರಾಟದಲ್ಲಿ ನಾನೂ ಪ್ರಸನ್ನ ಅವರ ಜೊತೆ ಕೈ ಜೋಡಿಸುತ್ತೇನೆ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಕೇಂದ್ರ ಸರಕಾರ ಕೂಡಲೇ ಕರದಿಂದ ಉತ್ಪಾದಿಸುವ ಎಲ್ಲ ವಸ್ತುಗಳ ಮೇಲಿನ ತೆರಿಗೆಯನ್ನು ಕೈಬಿಡಬೇಕು. ಆ ಮೂಲಕ ಕೈಮಗ್ಗದ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು ಎಂದ ಅವರು, ಪ್ರಸನ್ನ ಅವರಿಗೂ ಅವರು ಕೈಗೊಂಡಿರುವ ಉಪವಾಸ ಸತ್ಯಾಹ ಕೂಡಲೇ ಕೈಬಿಡಬೇಕೆಂದು ಮನವಿ ಮಾಡಿದ್ದು, ನಾಳೆ ಸಂಜೆ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದ್ದಾರೆ ಎಂದರು.

ಆ ಬಳಿಕ ದೇವೇಗೌಡ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್, ರಮೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News