ಬೆಂಗಳೂರು: ನಗರದಲ್ಲಿ ದೀಪಾವಳಿಗೆ ಬಿಡುವು ನೀಡಿದ ಮಳೆ

Update: 2017-10-19 13:18 GMT

ಬೆಂಗಳೂರು, ಅ.19: ನಗರದಲ್ಲಿ ಕಳೆದ ಒಂದು ತಿಂಗಳಿಂದ ಸುರಿದ ಭಾರಿ ಮಳೆಯು, ದೀಪಾವಳಿ ವೇಳೆಗೆ ಮಂಕಾಗಿದ್ದು, ಹಬ್ಬದ ಆಚರಣೆಗೆ ಅಡ್ಡಿಯಾಗಿಲ್ಲ. ನಗರದಲ್ಲಿ ಸುರಿದಿದ್ದ ಮಳೆ ಜನಜೀವನ ಅಸ್ತವ್ಯಸ್ತ ಮಾಡಿತ್ತು. ಅಲ್ಲದೆ, ಹಲವರ ಸಾವಿಗೆ ಕಾರಣವಾಗಿ, ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು.
ಆದರೆ, ಕಳೆದ ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದಲ್ಲಿ ಅ.25 ರವರೆಗೂ ಮಳೆಯಾಗುವ ಮುಸ್ಸೂಚನೆಗಳಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ್‌ರೆಡ್ಡಿ ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಚಂಡಮಾರುತ ಒರಿಸ್ಸಾ, ಪಶ್ಚಿಮ ಬಂಗಾಳದ ಕೊಲ್ಲಿಗೆ ಚಲಿಸುವುದರಿಂದ ರಾಜ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಆಗುವುದಿಲ್ಲ. ಹೀಗಾಗಿ, ಮಳೆ ಪ್ರಮಾಣ ಇಳಿಕೆಯಾಗುತ್ತದೆ. ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಬಹುದು. ರಾಜ್ಯದ ಬೀದರ್ ಹಾಗೂ ಗುಲ್ಬರ್ಗ ಭಾಗದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಎಂದಿದ್ದಾರೆ.

ನೈರುತ್ಯ ಮುಂಗಾರು ಇನ್ನೆರಡು ದಿನಗಳಲ್ಲಿ ಮರಳಲಿದೆ. ಅನಂತರ ಈಶಾನ್ಯ ಹಿಂಗಾರು ಮಳೆ ಆರಂಭವಾಗಲಿದೆ. ಆದರೂ, ಸದ್ಯಕ್ಕೆ ರಾಜ್ಯದಲ್ಲಿನ ದೊಡ್ಡ ಹಾಗೂ ಸಣ್ಣ ಪ್ರಮಾಣದ ಜಲಾಶಯಗಳು, ಕೆರೆಗಳು ಭರ್ತಿಯಾಗುವಷ್ಟು ಮಟ್ಟದಲ್ಲಿ ಮಳೆಯಾಗುವುದು ಕಷ್ಟ ಸಾಧ್ಯ ಎಂದು ಅಭಿಪ್ರಾಯಿಸಿರುವ ಅವರು, ಒಂದು ವೇಳೆ ತೀವ್ರ ಸ್ವರೂಪದ ವಾಯುಭಾರ ಕುಸಿತ ಇಲ್ಲವೇ ಚಂಡಮಾರುತ ಉಂಟಾಗಿ ಹೆಚ್ಚಿನ ಮಳೆಯಾದರೆ ಮಾತ್ರ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರಲಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗಿ, ದಾಖಲೆ ನಿರ್ಮಾಣ ಮಾಡಿದ್ದರೂ ಹಲವು ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ನೀರು ಭರ್ತಿಯಾಗಿಲ್ಲ. ಅಲ್ಲದೆ, ಹಲವು ಜಲಾಶಯಗಳು ಶೇ.40 ರಷ್ಟು ನೀರಿನ ಕೊರತೆ ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News