ಅ.21ರಂದು ವಿಷನ್-2025ರ ನೀಲಿ ನಕ್ಷೆ ಪೂರ್ವಭಾವಿ ಸಭೆ: ವಿ.ಶಂಕರ್

Update: 2017-10-19 13:25 GMT

ಬೆಂಗಳೂರು, ಅ.19: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ‘ವಿಷನ್-2025’ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆ ಕುರಿತು ನೀಲಿ ನಕ್ಷೆ ರೂಪಿಸುವ ಪೂರ್ವಭಾವಿಯಾಗಿ ಅ.21ರಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂದಿನ ಏಳು ವರ್ಷಗಳಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳನ್ನೂ ಸಮಗ್ರ ಅಭಿವೃದ್ಧಿಗೊಳಿಸಲು ಮಿಷನ್-2025 ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಸಮೀಕ್ಷೆ ನಡೆಸಲು ಅ.21ರಂದು ಪೂರ್ವಭಾವಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾ ಚಿದಂಬರಂ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ನಡೆಯಲಿದೆ. ಕಾರ್ಯಾಗಾರದಲ್ಲಿ ಪ್ರಮುಖ 13 ಇಲಾಖೆಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ವಿಷಯ ತಜ್ಞರು ಭಾಗವಹಿಸಲಿದ್ದು, ಮುಂದಿನ ಎರಡು ತಿಂಗಳು ವಿವಿಧ ಇಲಾಖೆಗಳ ಕುರಿತು ನಡೆಯುವ ಸಮೀಕ್ಷೆಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಗ್ರ ಅಧ್ಯಯನಕ್ಕೆ 5 ಸಮಿತಿ: ರಾಜ್ಯದ ಪ್ರಮುಖ 15 ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಲು 5 ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಇಲಾಖೆಗಳ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಜ್ಞರು, ಮಾಧ್ಯಮದವರಿದ್ದು, ರಾಜ್ಯದ ಪ್ರತಿ ಜಿಲ್ಲೆಗು ತೆರಳಿ ಇಲಾಖೆಗಳ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ವರದಿ ತಯಾರಿಸಲಿದ್ದಾರೆ ಎಂದರು.

ಡಿ.21ಕ್ಕೆ ವರದಿ ಸಲ್ಲಿಕೆ: ಮಿಷನ್ -2025ರ ಯೋಜನೆಯ ಯಶಸ್ವಿಗಾಗಿ ಸಮಿತಿಗಳು ನಡೆಸುವ ಸಮೀಕ್ಷಾ ವರದಿಗಳನ್ನು ಡಿ.21ರೊಳಗೆ ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು. ನಂತರ ಸಚಿವ ಸಂಪುಟದಲ್ಲಿ ಈ ವರದಿಗಳನ್ನು ಆಮೂಲಾಗ್ರವಾಗಿ ಚರ್ಚಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ನೀಲಿ ನಕ್ಷೆಯನ್ನು ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಸಮಿತಿಗಳು:
1.ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಿತಿ.
2.ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಮಿತಿ.
3.ಮೂಲಭೂತ ಸೌಕರ್ಯಗಳ ಸಮಿತಿ.
4.ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಇಲಾಖೆಗೆ ಸಂಬಂಧಿಸಿದ ಸಮಿತಿ.
5.ಗ್ರಾಮೀಣಾಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸಂಬಂಧಿಸಿದ ಸಮಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News