15 ಸಾವಿರ ಎಕರೆ ಸರಕಾರಿ ಭೂ ಒತ್ತುವರಿ ತೆರವು: ಜಿಲ್ಲಾಧಿಕಾರಿ ವಿ.ಶಂಕರ್

Update: 2017-10-19 17:52 GMT

ಬೆಂಗಳೂರು, ಅ.19: ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿಯ ವರದಿ ಸೂಚಿಸಿದ ಸರಕಾರಿ ಭೂ ಒತ್ತುವರಿ ಸೇರದಂತೆ ಸುಮಾರು 15ಸಾವಿರ ಎಕರೆ ಭೂ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನು 394 ಎಕರೆ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾಧಿಕಾರಿಯಲ್ಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 1, 22,918 ಎಕರೆ ಸರಕಾರಿ ಭೂಮಿಯಿದ್ದು, 34, 111ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ಸರಕಾರಕ್ಕೆ ವರದಿ ನೀಡಿತ್ತು ಎಂದು ಹೇಳಿದರು.

ಸರಕಾರಿ ಭೂ ಒತ್ತುವರಿಯಲ್ಲಿ ಸರಕಾರಿ ಶಾಲೆ, ಉದ್ಯಾನವನ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ 7,881ಸರಕಾರಿ ಭೂಮಿ ಒತ್ತುವರಿಯಾಗಿದೆ. ಈ ಭೂಮಿಯನ್ನು ತೆರವುಗೊಳಿಸಲು ಸಾಧ್ಯವಿಲ್ಲವೆಂದು ಎ.ಟಿ.ರಾಮಸ್ವಾಮಿ ವರದಿಯಲ್ಲಯೇ ಸೂಚಿಸಲಾಗಿತ್ತು. ಇದರ ಜೊತೆಗೆ 8ಸಾವಿರ ಭೂಮಿಗೆ ಅಕ್ರಮ-ಸಕ್ರಮ, ಬಗರ್ ಹುಕುಂಗೆ ಅರ್ಜಿಗಳು ಸಲ್ಲಿಸಲಾಗಿದೆ. ಇದನ್ನು ಹೊರತು ಪಡಿಸಿದಂತೆ ಎ.ಟಿ.ರಾಮಸ್ವಾಮಿ ವರದಿ ಅನ್ವಯ 11,368 ಸರಕಾರಿ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದರು.

ಸುಮಾರು 20 ಪ್ರಕರಣಗಳಲ್ಲಿ ಸರಕಾರದ ಷರತ್ತನ್ನು ಉಲ್ಲಂಘಿಸಿ ಅನ್ಯ ಕಾರ್ಯಗಳಿಗೆ ಬಳಸುತ್ತಿದ್ದ ನೂರಾರು ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯವಾಗಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ, ನವಜೀವನ ಟ್ರಸ್ಟ್, ಕೋಣನ ಕುಂಟೆ ಟ್ರಸ್ಟ್, ಡೆಕ್ಕನ್ ಎಜುಕೇಶನ್ ಸೊಸೈಟಿಗೆ ಕೊಡಲಾಗಿದ್ದ ಸರಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್ 10ಎಕರೆ ಸರಕಾರಿ ಭೂಮಿಯನ್ನು ಪಡೆದುಕೊಂಡು ಮೂಲ ಉದ್ದೇಶ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಸಿದ್ದರಿಂದ ಆ ಜಮೀನನ್ನು ವಶಕ್ಕೆ ಪಡೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೆ ಸರಕಾರಿ ಭೂಮಿಯನ್ನು ಸ್ವಾರ್ಥಕ್ಕೆ ಹಾಗೂ ಅನ್ಯ ಉದ್ದೇಶಗಳಿಗೆ ದುರುಪಯೋಗ ಪಡಿಸಕೊಳ್ಳಲು ಬಿಡುವುದಿಲ್ಲ ಎಂದು  ಸ್ಪಷ್ಟ ಪಡಿಸಿದರು.

ಒತ್ತುವರಿ ಭೂಮಿ ಸಂರಕ್ಷಣೆ: ಜಿಲ್ಲಾಡಳಿತ ವಶಪಡಿಸಿಕೊಂಡಿರುವ 15 ಸಾವಿರ ಎಕರೆ ಸರಕಾರಿ ಭೂಮಿಯಲ್ಲಿ ಸುಮಾರು 6 ಸಾವಿರ ಎಕರೆಯನ್ನು ಹಿಂದುಳಿದ , ಎಸ್ಸಿ, ಎಸ್ಟಿ ಹಾಸ್ಟೆಲ್, ಅಂಗನವಾಡಿ ಕಟ್ಟಡಗಳಿಗೆ ಹಾಗೂ ವಿವಿಧ ಸರಕಾರಿ ಇಲಾಖೆ ಯ ಸಿಬ್ಬಂದಿಗಳ ವಸತಿ ಸಮುಚ್ಚಯಗಳಿಗೆ ಒದಗಿಸಲಾಗಿದೆ. ಸುಮಾರು 10 ಎಕರೆಗೆ ಒಳಪಟ್ಟ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಮಂಜೂರು ಮಾಡಲು ಅಧಿಕಾರವಿದೆ. ಅದನ್ನು ಬಳಸಿಕೊಂಡು ಸಾರ್ವಜನಿಕ ಉದ್ದೇಶಗಳಿಗೆ ಕೆಲವು ಎಕರೆಗಳನ್ನು ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News