ಕೈಯಿಂದ ಉತ್ಪಾದಿಸುವ ವಸ್ತುಗಳನ್ನು ತೆರಿಗೆ ಮುಕ್ತಗೊಳಿಸಲು ಕೇಂದ್ರ ಹಣಕಾಸು ಸಚಿವರಿಗೆ ಸಿಎಂ ಪತ್ರ
ಬೆಂಗಳೂರು, ಅ.19: ಸಹಕಾರ ಸಂಘಗಳು, ಒಕ್ಕೂಟಗಳು ಉತ್ಪಾದನೆ ಹಾಗೂ ಮಾರಾಟ ಮಾಡುವ ಕೈಯಿಂದ ಉತ್ಪಾದಿಸುವ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆಯನ್ನು ಹಿಂಪಡೆಯುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ದೇಶದಲ್ಲಿ ಲಕ್ಷಾಂತರ ಮಂದಿ ಕಲಾವಿದರು ಹಾಗೂ ಗ್ರಾಮೀಣ ಪ್ರದೇಶದ ಬಡ ಜನರು ಕೈಯಿಂದ ಹಲವಾರು ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ. ಕೈಯಿಂದ ಉತ್ಪಾದಿಸುವ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕೈ ಬಿಡುವಂತೆ ಆಗ್ರಹಿಸಿ ಕಲಾವಿದ ಪ್ರಸನ್ನ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕೈಯಿಂದ ಉತ್ಪಾದಿಸುವ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ಹೇರಿಕೆ ಮಾಡುವುದರಿಂದ ಕಲಾವಿದರ ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ವಿಚಾರದ ಕುರಿತು ಗಂಭೀರ ಹಾಗೂ ತುರ್ತು ಗಮನ ಹರಿಸಿ, ಧನಾತ್ಮಕವಾದ ಫಲಿತಾಂಶ ಹೊರಬೀಳಲಿ ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.
ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ತೀರ್ಮಾನವು ಗ್ರಾಮೀಣ ಭಾಗದಲ್ಲಿರುವ ಅತೀ ಹೆಚ್ಚಿನ ಜನಸಂಖ್ಯೆ ಮೇಲೆ ಅಷ್ಟೇ ಪರಿಣಾಮ ಬೀರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಹಾಗೂ ಸ್ಥಿರತೆಯನ್ನು ಕಾಪಾಡುವಲ್ಲಿಯೂ ಉತ್ತೇಜನಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಮುಂದಿನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ಗ್ರಾಮೀಣ ಭಾಗದ ಕಲಾವಿದರ ಪರವಾದ ತೀರ್ಮಾನ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.