ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಎನ್ನೆಸ್ಸೆಸ್ ಪ್ರಮುಖ ಪಾತ್ರ: ಪ್ರೊ.ಪ್ಯಾಟ್ರಿಕ್ ರಾಜ್‌ಕುಮಾರ್

Update: 2017-10-19 14:15 GMT

ಬೆಂಗಳೂರು, ಅ.19: ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ಏಕಾಗ್ರತೆ, ಶಿಸ್ತು, ನಾಯಕತ್ವ, ಸೇವಾ ಮನೋಭಾವದ ಅನಿವಾರ್ಯತೆಯನ್ನು ಕನಸಾಗಿ ಕಂಡ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತ ಎಂದು ಅಂತಾರಾಷ್ಟ್ರೀಯ ಅಂಧ ಮಕ್ಕಳ ಕ್ರಿಕೆಟ್ ತರಬೇತುದಾರ ಪ್ರೊ.ಪ್ಯಾಟ್ರಿಕ್ ರಾಜ್‌ಕುಮಾರ್ ತಿಳಿಸಿದ್ದಾರೆ.

ನಗರದ ಕೆ.ಆರ್.ಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ಪುನಶ್ಚೇತನ ಮತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಕುರಿತು ಗಾಂಧೀಜಿ ಹೊಂದಿದ್ದ ಚಿಂತನೆಗಳು, ವಿಚಾರಗಳು ಎನ್ನೆಸ್ಸೆಸ್ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಹೇಳಿದರು.

ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ವಿಜಯಕುಮಾರ್  ಮಾತನಾಡಿ, ದೇಶದಲ್ಲಿ ಸಂಭವಿಸುತ್ತಿರುವ ಅನೈತಿಕತೆ, ಅಸಹಕಾರ, ಅಸಮಾನತೆಗಳನ್ನು ಸವಾಲಾಗಿ ಸ್ವೀಕರಿಸಿ ಸದೃಢ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದರು.

ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಮಾತ್ರ ಪೂರ್ಣಪ್ರಮಾಣದ ವ್ಯಕ್ತಿತ್ವ ನಿರ್ಮಾಣವಾಗಲು ಎನ್ನೆಸ್ಸೆಸ್ ಒಂದು ವೇದಿಕೆಯಾಗಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಾಮಣ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸುವ ಗೀತಗಾಯನ ಕಾರ್ಯಕ್ರಮ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಎನ್ನೆಸ್ಸೆಸ್ ಘಟಕದ ಅಧಿಕಾರಿ ಪ್ರೊ.ಅಂಬುಜಾಕ್ಷಿ ಸಂಘಟಿಸಿದ್ದರು. ಕಾಲೇಜಿನ ಡಾ.ಮುನಿಕೃಷ್ಣ, ಡಾ.ನಾರಾಯಣ್, ಪ್ರೊ.ಡಿ.ರಾಜಣ್ಣ, ಪ್ರೊ.ರಾಜೇಂದ್ರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News