ಉಪವಾಸ ಧರಣಿ ಕೈ ಬಿಟ್ಟ ಪ್ರಸನ್ನ

Update: 2017-10-19 14:24 GMT

ಬೆಂಗಳೂರು, ಅ.19: ಕರಕುಶಲ ಉತ್ಪನ್ನಗಳಿಗೆ ಮಾನ್ಯತೆ ಕೊಟ್ಟು ತೆರಿಗೆ ವಿನಾಯಿತಿಗಾಗಿ ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನಗರದ ನಿಡುಮಾಮಿಡಿ ಮಠದಲ್ಲಿ ನಡೆಸುತ್ತಿದ್ದ ಕರನಿರಾಕರಣ ಉಪವಾಸ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕೈ ಉತ್ಪನ್ನಗಳನ್ನು ತೆರಿಗೆ ಮುಕ್ತಗೊಳಿಸಬೇಕೆಂಬ ಚಳವಳಿ ದೇಶಾದ್ಯಂತ ವ್ಯಾಪಕವಾಗಿದೆ. ಅದರ ಭಾಗವಾಗಿ ಹಿರಿಯ ರಂಗಕರ್ಮಿ ಕಳೆದ ಆರು ದಿನದಿಂದ ಕರನಿರಾಕರಣಾ ಉಪವಾಸ ಧರಣಿಯನ್ನು ನಡೆಸುತ್ತಿದ್ದರು. ಹೀಗಾಗಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಹಿರಿಯ ಸಾಹಿತಿಗಳು, ಪ್ರಗತಿಪರ ಚಿಂತಕರು ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟು ಹೋರಾಟ ಮುಂದುವರೆಸುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಉಪವಾಸ ಧರಣಿಯನ್ನು ಕೈ ಬಿಟ್ಟಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಸಾರ್ವಜನಿಕರ ಒತ್ತಾಸೆಗೆ ಮಣಿದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದೇನೆ. ಆದರೆ, ಮುಂದಿನ ಜಿಎಸ್‌ಟಿ ಸಭೆಯಲ್ಲಿ ಕೈ ಉತ್ಪನ್ನಗಳಿಗೆ ಕರಮುಕ್ತಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ನಮ್ಮಾಂದಿಗೆ ಗ್ರಾಮ ಸೇವಾ ಸಂಘದ ನೂರಾರು ಯುವಕರು, ಸಾರ್ವಜನಿಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮೋಜಿನ ಉತ್ಪನ್ನಗಳನ್ನು ಉತ್ಪಾದಿಸುವುದೆ ಜಿಡಿಪಿ ಬೆಳವಣಿಗೆ ಎಂದು ಸರಕಾರಗಳು ಭಾವಿಸಿಕೊಂಡಿವೆ. ಇಂತಹ ಮನಸ್ಥಿತಿಯಿಂದಾಗಿ ಗ್ರಾಮೀಣ ಬಡವರ ಉತ್ಪಾದಕತೆಯನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಭಿಕ್ಷುಕರನ್ನಾಗಿ ಮಾಡಲಾಗುತ್ತಿದೆ. ಸರಕಾರಗಳು ತಮ್ಮ ಜನವಿರೋಧಿ ನೀತಿಗಳನ್ನು ಕೈಬಿಟ್ಟು, ಕೈ ಉತ್ಪನ್ನಗಳಿಗಿರುವ ಬೇಡಿಕೆಯನ್ನು ಸದುಪಯೋಗ ಪಡಿಸಿಕೊಂಡು ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಒತ್ತಾಯಿಸಿದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಯಿಂದ ಬಡವರು ಹೆಚ್ಚಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಅಕ್ಕ-ಪಕ್ಕದ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೈ ಮಗ್ಗ ಉತ್ಪನ್ನಗಳಿಗೆ ಕರಮುಕ್ತಗೊಳಿಸಲು ಎಲ್ಲರೂ ಒಮ್ಮತದಿಂದ ಸಹಕಾರ ನೀಡಬೇಕು ಎಂದು ತಿಳಿಸಿದರು.

ಚಿತ್ರನಟ ಪ್ರಕಾಶ್ ರೈ ಮಾತನಾಡಿ, ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವ ಮೂಲಕ ಸಣ್ಣ ಉದ್ಯಮವನ್ನು ಪ್ರೋತ್ಸಾಹಿಸಬೇಕು. ಇದು ರಾಜ್ಯ ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಹಿಂದುಳಿದ ಮತ್ತು ಬುಡಕಟ್ಟು ವರ್ಗ ಕೈ ಉತ್ಪನ್ನಗಳ್ನೇ ಅವಲಂಬಿಸಿದ್ದಾರೆ ಎಂದರು.

ಜಿಎಸ್‌ಟಿಯನ್ನು ಮರು ಪರಿಶೀಲಿಸುವ ಅಧಿಕಾರ ಪ್ರಧಾನಿಗಿದೆ. ಹೀಗಾಗಿ ಕರ ಕುಶಲ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಸಮುದಾಯ ದೊಡ್ಡ ಮಟ್ಟದ ಚಳವಳಿ ಆರಂಭಿಸಬೇಕು ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News