ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ: ಸಚಿವ ರೇವಣ್ಣ

Update: 2017-10-19 14:38 GMT

ಬೆಂಗಳೂರು, ಅ.19: ಭದ್ರತೆ ದೃಷ್ಟಿಯಿಂದ ರಾಜ್ಯದ ಎಲ್ಲ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ’ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಟೀಕಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತೆ ದೃಷ್ಟಿಯಿಂದ ಎಲ್ಲ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಸುವ ಬಗ್ಗೆ ನಮ್ಮ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಹಿಂದಿನ ಸರಕಾರಗಳು ಈ ಬಗ್ಗೆ ತೀರ್ಮಾನ ಮಾಡಿದ್ದವು. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಯಾವುದೇ ಮಾಹಿತಿ ಇಲ್ಲದೆ ವಿನಾಕಾರಣ ಆಧಾರ ರಹಿತ ಆರೋಪ ಮಾಡಿದ್ದು, ಹೊಸ ನೋಂದಣಿ ಫಲಕ ಅಳವಡಿಸುವ ಬಗ್ಗೆ ಇನ್ನೂ ನಿರ್ಧಾರವೇ ಆಗಿಲ್ಲ. ಹೀಗಿರುವಾಗ ಈ ಬಗ್ಗೆ ಕಂಪೆನಿಗಳಿಗೆ ಗುತ್ತಿಗೆ ಕೊಡುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ತಿರುಗೇಟು ನೀಡಿದರು.

ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ‘ಸ್ಪೀಡ್ ಗೌರ್ನರ್’ ಆಳವಡಿಸುವ ಸಂಬಂಧ ಜಾಗತಿಕ ಟೆಂಡರ್ ಆಹ್ವಾನಿಸಿ ಆ ಪೈಕಿ ಎರಡು ಕಂಪೆನಿಗಳನ್ನು ಅಂತಿಮಗೊಳಿಸಿದ್ದು, ದರ ಹೆಚ್ಚಾಗಿದೆ ಎಂಬ ದೂರುಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕೆಎಸ್ಸಾರ್ಟಿಸಿಯೂ 9,500 ರೂ.ಗೆ ಸ್ಪೀಡ್ ಗೌರ್ನರ್ ಖರೀದಿಸಲಾಗುತ್ತದೆ. ಆದರೆ, ಹೊರ ರಾಜ್ಯಗಳಲ್ಲಿ ಈ ದರ ಬಹಳ ಕಡಿಮೆ ಇದ್ದು, ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದ ಅವರು, ‘ಸ್ಪೀಡ್ ಗೌರ್ನರ್’ ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಪೆಟ್ರೋಲ್-ಡಿಸೇಲ್ ಬಳಕೆ ಕಡಿಮೆ ಮಾಡಿ, ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕೆಂಬ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ಬ್ಯಾಟರಿ ಚಾಲಿತ ಇಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಚಿಂತನೆ ನಡೆಸಲಾಗುತ್ತಿದೆ. ಎಷ್ಟು ಬಸ್ ಖರೀದಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News