ಸಾರಿಗೆ ನಿಗಮದಲ್ಲಿ ಅಂತರ್ ನಿಗಮ ವರ್ಗಾವಣೆ: ಸಚಿವ ಎಚ್.ಎಂ.ರೇವಣ್ಣ

Update: 2017-10-19 15:08 GMT

ಬೆಂಗಳೂರು, ಅ. 19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 3,959 ಸಿಬ್ಬಂದಿಯನ್ನು ಅಂತರ ನಿಗಮ ವರ್ಗಾವಣೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ ನಿಗಮ ವರ್ಗಾವಣೆಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಒಟ್ಟು 18,978 ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 14,418 ಅರ್ಜಿಗಳು ಊರ್ಜಿತಗೊಂಡಿದ್ದವು ಎಂದರು.

ಬಿಎಂಟಿಸಿ-2,348, ಕೆಎಸ್ಸಾರ್ಟಿಸಿ-1,053, ಈಶಾನ್ಯ-314, ವಾಯವ್ಯ-244 ಸೇರಿದಂತೆ ಒಟ್ಟು 3,959 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಬೇರೆ ನಿಗಮಗಳಿಂದ ಕೆಸ್ಸಾರ್ಟಿಸಿಗೆ 1,308, ಬಿಎಂಟಿಸಿಗೆ-267, ಈಶಾನ್ಯ-1,576 ಹಾಗೂ ವಾಯವ್ಯ-808 ಮಂದಿ ವರ್ಗಾವಣೆ ಪಡೆದು ಬಂದಿದ್ದಾರೆ ಎಂದು  ವಿವರಿಸಿದರು.

ಆದ್ಯತೆ: ರಸ್ತೆ ಸಾರಿಗೆ ನಿಗಮಗಳ ವರ್ಗಾವಣೆ ನಿಯಮದಂತೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ್ದು, ವಿಧವೆಯರು, ಪತಿ-ಪತ್ನಿ ಪ್ರಕರಣಗಳಿಗೆ ಆದ್ಯತೆ ನೀಡಿದ್ದು, ಸಾರಿಗೆ ನೌಕರರು ಸಂಘಟನೆಗಳು ಹಾಗೂ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಪಾರದರ್ಶಕವಾಗಿ ಈ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೊಸ ನೇಮಕಾತಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ನಿಗಮಗಳಿಂದ ಸಿಬ್ಬಂದಿ ಅಂತರ ನಿಗಮ ವರ್ಗಾವಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಿಎಂಟಿಸಿಯಿಂದ ಹೆಚ್ಚು ಸಿಬ್ಬಂದಿ ಅಂತರ ನಿಗಮ ವರ್ಗಾವಣೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತರ ನಿಗಮ ವರ್ಗಾವಣೆಯನ್ನು ಏಕಾಏಕಿ ಮಾಡಲು ಕಷ್ಟ ಸಾಧ್ಯ. ಹೀಗಾಗಿ ಹಂತ-ಹಂತವಾಗಿ ಸಿಬ್ಬಂದಿ ವರ್ಗಾವಣೆ ಮಾಡಲಾಗುವುದು ಎಂದ ಅವರು, ಅಂತರ ನಿಗಮ ವರ್ಗಾವಣೆ ಪಟ್ಟಿಯನ್ನು ನಿಗಮದ www.transfer.ksrtc.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವಿವರ ನೀಡಿದರು.

ಹೈ.ಕ.ಹಿಂದುಳಿದ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ಕಲಂ 371 ‘ಜೆ’ ಜಾರಿಯಾಗಿದೆ. ಆದರೆ, ನಿಗಮದ ನೇಮಕಾತಿ-ಅಂತರ ನಿಗಮ ವರ್ಗಾವಣೆಯಲ್ಲಿ ಆ ಭಾಗದವರಿಗೆ ಆದ್ಯತೆ ನೀಡಿರುವುದರಿಂದ ಈ ಭಾಗದವರಿಗೆ ಅನ್ಯಾಯ ಆಗುತ್ತದೆ. ನೇಮಕಾತಿಯಲ್ಲಿ ಹೈಕ ಮೀಸಲಾತಿ ಇರಬೇಕು. ಆದರೆ, ಅಂತರ ನಿಗಮ ವರ್ಗಾವಣೆ ಆ ನೀತಿಯನ್ನೇ ಅನುಸರಿಸಬೇಕೆ ಎಂಬ ಬಗ್ಗೆ ಪರಿಶೀಲಿಸಲಾಗುವುದು.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News