ಟಿಪ್ಪು ರಾಕೆಟ್ ಪುನರ್ ಸೃಷ್ಟಿಗೆ ಎನ್‌ಐಎಎಸ್ ವಿಜ್ಞಾನಿಗಳ ಯತ್ನ

Update: 2017-10-19 15:14 GMT

ಬೆಂಗಳೂರು,ಅ.19: ಎರಡು ಶತಮಾನಗಳ ಹಿಂದೆ ಬ್ರಿಟಿಶರಿಗೆ ನಡುಕ ಹುಟ್ಟಿಸಿದ್ದ ಟಿಪ್ಪುಸುಲ್ತಾನ್‌ನ ಸೇನೆಯ ಯುದ್ಧದ ರಾಕೆಟ್‌ಗಳ ಬಗ್ಗೆ ಇದೀಗ ವಿಜ್ಞಾನಿಗಳ ಗಮನಹರಿದಿದೆ. ‘ಬೆಂಕಿಬಾಣ’ (ಫೈರ್ ಆ್ಯರೋ) ಎಂದು ಕರೆಯಲಾಗುತ್ತಿದ್ದ ಈ ರಾಕೆಟ್‌ಗಳನ್ನು ಪುನರ್‌ಸೃಷ್ಟಿಸುವುದಕ್ಕಾಗಿ ಇಲ್ಲಿನ ರಾಷ್ಟ್ರೀಯ ಸುಧಾರಿತ ಅಧ್ಯಯನಗಳ ಸಂಸ್ಥೆ (ಎನ್‌ಐಎಎಸ್)ಯು ಮಹತ್ವದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

   ಟಿಪ್ಪುಸುಲ್ತಾನ್ ಸೇನೆಯ ರಾಕೆಟ್‌ನ್ನು ಪುನರ್ ನಿರ್ಮಿಸುವುದಕ್ಕಾಗಿ ಮಧ್ಯಕಾಲೀನ ಯುಗದ ಉನ್ನತ ದರ್ಜೆಯ ಕಾರ್ಬನ್ ಸ್ಟೀಲ್‌ನ ಒಂದು ವಿಧವಾದ‘ವೂಟ್ಜ್ ಸ್ಟೀಲ್’ನ್ನು ಪುನರುತ್ಪಾದಿಸಲು ಎನ್‌ಐಎಎಸ್ ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಅಧುನಿಕ ವಿಜ್ಞಾನಿಗಳಿಗೂ ಕುತೂಹಲ ಮೂಡಿಸಿರುವ ಈ ರಾಕೆಟ್ ಒಂದರಿಂದ ಎರಡು ಅಡಿ ಎತ್ತರವಿದ್ದು, 2.5ರಿಂದ 3.5 ಇಂಚು ವರ್ತುಲವನ್ನು ಹೊಂದಿದೆ.

 ರಾಕೆಟ್ ನಿರ್ಮಾಣ ಪೂರ್ತಿಯಾದ ಬಳಿಕ ಅದನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವೈಮಾನಿಕ ಪರೀಕ್ಷಾ ವಲಯದಲ್ಲಿ ಈ ರಾಕೆಟನ್ನು ಪರೀಕ್ಷಿಸಲಾಗುವುದು. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಮಹತ್ವಾಕಾಂಕ್ಷಿ ಯೋಜನೆಗೆ ಸಹಕಾರ ನೀಡಲಿದೆ.

ರಾಕೆಟ್ ನಿರ್ಮಾಣದ ಸಂಶೋಧನಾ ತಂಡದ ನೇತೃತ್ವ ವಹಿಸಿರುವ ವೈಮಾನಿಕ ವಿಜ್ಞಾನಿ ಪ್ರೊ.ರೊಡ್ಡಂ ನರಸಿಂಹ,ಈ ಮಾದರಿಯ ರಾಕೆಟ್‌ನ್ನು ನಿರ್ಮಿಸಲು ಯತ್ನಿಸಿರುವುದು ಇದು ಮೂರನೇ ಸಲವಾಗಿದೆ. ಟಿಪ್ಪುಕಾಲದ ರಾಕೆಟ್‌ನ್ನು ಪುನರ್‌ಸೃಷ್ಟಿಸುವ ಯೋಜನೆ ಮೂರು ದಶಕಗಳ ಹಿಂದೆಯೇ ಮೊಳಕೆಯೊಡೆದಿತ್ತಾದರೂ, ಈತನಕವೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

 ಈ ರಾಕೆಟ್ ತಯಾರಿಗೆ ಆರು ತಿಂಗಳುಗಳಿಂದ ಒಂದು ವರ್ಷ ಸಮಯ ತಗಲಬಹುದೆಂದು ಪ್ರೊ. ನರಸಿಂಹ ಹೇಳುತ್ತಾರೆ. ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿ ಮೈಸೂರಿನಲ್ಲಿ ನಿರ್ಮಿತವಾದ ರಾಕೆಟ್‌ಗಳ ಮಹತ್ವವನ್ನು ಹಾಗೂ ಆ ಕಾಲದಲ್ಲಿ ಲೋಹಶಾಸ್ತ್ರದಲ್ಲಿ ಭಾರತ ಸಾಧಿಸಿದ್ದ ಪ್ರಗತಿ ಮತ್ತು ಈ ತಂತ್ರಜ್ಞಾನವನ್ನು ಬ್ರಿಟಿಶರು ಹೇಗೆ ಕದ್ದುಕೊಂಡರು ಮತ್ತು ಯುರೋಪ್‌ನಲ್ಲಿ ನವೀನ ರಾಕೆಟ್‌ಗಳ ತಯಾರಿಗೆ ಇದು ಹೇಗೆ ಪ್ರೇರಣೆಯಾಯಿತೆಂಬುದನ್ನು ಈ ರಾಕೆಟ್‌ನ ಪುನರ್ ನಿರ್ಮಾಣದಿಂದ ತಿಳಿದುಬರಲಿದೆಯೆಂದು ಅವರು ತಿಳಿಸಿದ್ದಾರೆ.

 ಟಿಪ್ಪುಸುಲ್ತಾನ್ ಕಾಲದ ರಾಕೆಟ್‌ಗಳ ಪ್ರತಿಕೃತಿಯು ಲಂಡನ್‌ನ ವಸ್ತುಸಂಗ್ರಹಾಲಯಗಳಲ್ಲಿ ಇವೆಯಾದರೂ, ಭಾರತದಲ್ಲಿರದಿರುವುದು ತೀರಾ ವಿಷಾದಕರ ಎಂದು ನರಸಿಂಹರಾವ್ ಹೇಳುತ್ತಾರೆ.

  ಎನ್‌ಐಎಎಸ್‌ನ ರಾಕೆಟ್ ನಿರ್ಮಾಣ ಹಾಗೂ ಪ್ರಾಯೋಗಿಕ ಪರೀಕ್ಷೆಯ ಸಮಗ್ರ ಪ್ರಕ್ರಿಯೆಯ ಕುರಿತಾದ ಕಿರುಸಾಕ್ಷ ಚಿತ್ರವೊಂದನ್ನು ಈ ವಿಷಯವಾಗಿ ಚಾರ್ಲ್ಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ ರಿಸರ್ಚ್ ಸ್ಕಾಲರ್‌ಶಿಪ್ ಯೋಜನೆಯಡಿ ವಿಸ್ತೃತವಾದ ಅಧ್ಯಯನ ನಡೆಸಿರುವ ವಿಜ್ಞಾನಿಗಳಾದ ಪ್ರಸಾದ್ ಹಾಗೂ ಕುಮಾತಂ ತಿಳಿಸಿದ್ದಾರೆ.

    ಈ ಮಧ್ಯೆ ಟಿಪ್ಪು ರಾಕೆಟ್‌ಗಳ ಬಗ್ಗೆ ಸಾರ್ವಜನಿಕರ ಗಮನಸೆಳೆಯಲು ಎನ್‌ಐಎಎಸ್ ಸಹಕಾರದೊಂದಿಗೆ ಬೆಂಗಳೂರಿನ ರಂಗಭೂಮಿ ತಂತ್ರಜ್ಞರಾದ ಮಲ್ಲಿಕಾ ಪ್ರಸಾದ್ ಹಾಗೂ ನಾಟಕರಚನೆಗಾರ ರಾಮ್ ಗಣೇಶ್ ಅವರು ‘ವ್ಯಾನ್‌ಗಾರ್ಡ್- ದಿ ಸ್ಟೋರಿ ಆಫ್ ಮೈಸೂರು ರಾಕೆಟ್ಸ್’ ಎಂಬ ಆಂಗ್ಲ ನಾಟಕವೊಂದನ್ನು ಅಕ್ಟೋಬರ್ 23ರಂದು ಪ್ರದರ್ಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News