‘ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಪ್ರಯತ್ನ’

Update: 2017-10-19 15:58 GMT

ಬೆಂಗಳೂರು, ಅ.19: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಬೇಕೆಂದು ಪಣತೊಟ್ಟಿರುವ ರಾಜ್ಯದ ಕಾರ್ಮಿಕ ಇಲಾಖೆಯು ಮತ್ತೊಂದು ಸುತ್ತಿನ ಪ್ರಯತ್ನವನ್ನು ಆರಂಭಗೊಳಿಸಿದೆ.

ನವೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಳ್ಳಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಈ ಸಂಬಂಧ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ರಾಜ್ಯ ಸರಕಾರದಿಂದ ನೆರವು ಪಡೆದಿರುವ ಕೈಗಾರಿಕೆಗಳಲ್ಲಿ, ಸಬ್ಸಿಡಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿರುವ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂಬ ಪ್ರಯತ್ನವನ್ನು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.

ಈ ಬಗ್ಗೆ ಅಡ್ವೊಕೇಟ್ ಜನರಲ್ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಅಲ್ಲದೆ, ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಹೊಸ ವಿಧೇಯಕವನ್ನು ಮಂಡಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ.
ಯಾವುದೇ ಕೈಗಾರಿಕೆಗಳಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಸರಕಾರದ ನೆರವನ್ನು ಪಡೆದಿರುವ ಕೈಗಾರಿಕೆಗಳಲ್ಲಾದರೂ ಮೀಸಲಾತಿ ಬೇಕು. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ರಾಜ್ಯದ ಜನರಿಗೆ ಮೀಸಲಾತಿ ಸಿಗುವಂತೆ ನಮ್ಮ ಇಲಾಖೆ ಹೋರಾಡಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ನಾವು ಮಂಡಿಸಲು ಉದ್ದೇಶಿಸಿರುವ ವಿಧೇಯಕಕ್ಕೆ ಮಹಾರಾಷ್ಟ್ರ ಸರಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ವಿಧೇಯಕದಲ್ಲಿ ಇರುವಂತಹ ವಿವರಗಳನ್ನು ನೀಡುವಂತೆಯೂ ಅಲ್ಲಿನ ಸರಕಾರ ಕೇಳಿದೆ. ಆದರೆ, ಖಾಸಗಿ ಉದ್ಯಮದಲ್ಲಿ ಮೀಸಲಾತಿ ಕೊಡಿಸುವುದು ಅಸಂವಿಧಾನಿಕ ಕ್ರಮ ಎಂದು ಕಾನೂನು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ, ಪರ್ಯಾಯ ಮಾರ್ಗಗಳ ಬಗ್ಗೆ ನಾವು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News