ಅಕ್ರಮ ಕಟ್ಟಡ ತೆರವುಗೊಳಿಸಲು ಸ್ಥಳೀಯರ ಆಗ್ರಹ

Update: 2017-10-20 12:30 GMT

ಬೆಂಗಳೂರು, ಅ.20: ನಗರದ ಹಲಸೂರಿನ ಜೋಗುಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಐದು ಅಂತಸ್ತಿನ ಕಟ್ಟಡ ಅಕ್ರಮವಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜಸ್ತಾನ ಮೂಲದ ಹರಿರಾಂ ಎಂಬವರಿಗೆ ಸೇರಿದ ಸೈಟ್‌ನಲ್ಲಿ ಕೇವಲ10 ಅಡಿ ಜಾಗದಲ್ಲಿ ಬಿಬಿಎಂಪಿ ಅನುಮತಿ ಪಡೆಯದೇ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿಕ್ಕ ಜಾಗದಲ್ಲಿ ದೊಡ್ಡ ಕಟ್ಟಡ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಕಟ್ಟಡದ ತಳಪಾಯದ ಮೂರು ಪಿಲ್ಲರ್‌ಗಳಲ್ಲಿ ಬಿರುಕು ಬಿಟ್ಟಿದ್ದು, ಕಟ್ಟಡವೂ ಸಂಪೂರ್ಣವಾಗಿ ಎಡ ಭಾಗಕ್ಕೆ ವಾಲಿದೆ. ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಟ್ಟಡ ಮಾಲಕ ಕಟ್ಟಡದಲ್ಲಿ ಬಿರುಕು ಬಿಟ್ಟಿರುವುದರ ಕುರಿತು ತಲೆ ಕೆಡಿಸಿಕೊಳ್ಳದೆ, ಕಟ್ಟಡದ ಕಾಮಗಾರಿ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ನಗರದಲ್ಲಿ ಯವುದೇ ಬಹು ಮಹಡಿ ಕಟ್ಟಡ ನಿರ್ಮಾಣ ಮಾಡಬೇಕಾದರೆ, ಮೊದಲು ಪಾಲಿಕೆಯ ಅನುಮತಿ ಪಡೆಯಬೇಕು. ಹಾಗೂ ಒಂದು ನೀಲನಕ್ಷೆ ತಯಾರಿಸಿ ಇಂಜಿನಿಯರ್ ಸೂಚನೆಯ ವೆುೀರೆಗೆ ಕಟ್ಟಡ ನಿರ್ಮಿಸಬೇಕು ಎಂದಿದೆ. ಕಟ್ಟಡದ ಸುತ್ತ ಮುತ್ತ ಮೂರು ಅಡಿ ಜಾಗ ಬಿಡಬೇಕು ಸೇರಿದಂತೆ ಹಲವು ನಿಯಮಗಳಿವೆ. ಆದರೆ, ಈ ಕಟ್ಟಡ ನಿರ್ಮಾಣದ ವೇಳೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಐದು ಅಂತಸ್ತಿನ ಮಹಡಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ಕಟ್ಟಡ ಮಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಸ್ಥಳೀಯರು, ಈ ಕಟ್ಟಡ ಯಾವ ಸಮಯದಲ್ಲಾದರೂ ಉರುಳಿ ಬಿದ್ದು, ಮತ್ತೊಂದು ಈಜಿಪುರ ಕಟ್ಟಡ ದುರಂತಕ್ಕೆ ಸಾಕ್ಷಿಯಾಗಬಾರದು. ಹೀಗಾಗಿ, ಕೂಡಲೇ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News