ನಗರದ ನಾಗರಿಕರ ಸ್ವಯಂಕೃತ ಅಪರಾಧದಿಂದ ಕಸದ ರಾಶಿ

Update: 2017-10-20 13:40 GMT

ಬೆಂಗಳೂರು, ಅ.20: ನಗರದಲ್ಲಿ ಕಳೆದ 15 ದಿನದಿಂದ ಸುರಿದ ಭಾರೀ ಮಳೆಯಿಂದಾದ ಅನಾಹುತಗಳಿಗೆ ಸರಕಾರವನ್ನು ದೂಷಿಸಲಾಗುತ್ತಿದೆ. ಆದರೆ, ಕಳೆದ ಎರಡು ದಿನದಿಂದ ಪಟಾಕಿ ಸಿಡಿತದಿಂದಾಗಿರುವ ಕಸದ ರಾಶಿಗೆ ಬೆಂಗಳೂರು ಜನತೆಯೇ ಕಾರಣರೆಂದು ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಿದ್ದಾರೆ.

ಮಳೆಯಿಂದಾದ ಅನಾಹುತಗಳಿಂದ ಬೆಂಗಳೂರು ಇನ್ನೂ ಚೇತರಿಸಿಕೊಂಡಿಲ್ಲ. ಚರಂಡಿ ಹಾಗೂ ರಾಜಕಾಲುವೆಯಲ್ಲಿದ್ದ ಕಸದ ರಾಶಿಯಿಂದಾಗಿ ಮಳೆಯ ನೀರು ರಸ್ತೆಯ ಮೇಲೆ ಹೊಳೆಯಂತೆ ಹರಿಯುವ ಮೂಲಕ ಹಲವು ಸಮಸ್ಯೆಗೆ ಕಾರಣವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಬೆಂಗಳೂರಿನ ಜನತೆ ಪದೇ ಪದೇ ಸ್ವಯಂಕೃತ ಅಪರಾಧ ಎಸಗುವ ಮೂಲಕ ಸಮಸ್ಯೆಗೆ ಈಡಾಗುತ್ತಿದ್ದಾರೆ.

ಎಲ್ಲೆಲ್ಲೂ ಪಟಾಕಿ ರಾಶಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಘ-ಸಂಸ್ಥೆಗಳು ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದು ಪಟಾಕಿಗೆ ಹೆಚ್ಚಿನ ಆದ್ಯತೆ ಕೊಡದೆ ದೀಪ ಹಚ್ಚುವ ಮೂಲಕ ಬೆಳಕಿನ ಹಬ್ಬವನ್ನು ಆಚರಿಸಬೇಕೆಂದು ಮನವಿ ಮಾಡಿದ್ದರು. ಆದರೆ, ಇದ್ಯಾವುದರ ಬಗೆಯೂ ಚಿಂತಿಸದ ಬೆಂಗಳೂರು ಜನತೆ ತಮ್ಮ ಮನೆ ಮುಂದಿನ ರಸ್ತೆಗಳಲ್ಲಿ ಪಟಾಕಿಯನ್ನು ಸಿಡಿಸುವುದರ ಮೂಲಕ ಕಸದ ರಾಶಿಯನ್ನೇ ಸೃಷ್ಟಿಸಿದರು.

ಪೌರಕಾರ್ಮಿಕರ ಪಾಡು ಹೇಳತೀರದು: ನಗರದ ಪ್ರತಿಷ್ಠಿತ ಬಡಾವಣೆಗಳ ಜನತೆ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ, ಸಿಹಿ ತಿಂಡಿಗಳನ್ನು ಸವಿದು ಹಬ್ಬದ ಸಂಭ್ರಮದಲ್ಲಿ ಮೈ ಮರೆತ್ತಿದ್ದರು. ಆದರೆ, ಇವರು ಮಾಡಿರುವ ಕಸವನ್ನು ಶುಚಿ ಮಾಡುವಲ್ಲಿ ತಮ್ಮ ಇಡೀ ದಿನವನ್ನು ವ್ಯಯಿಸಿದ ಪೌರ ಕಾರ್ಮಿಕರ ಪಾಡನ್ನು ಕೇಳುವವರೇ ಇಲ್ಲವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಪಟಾಕಿಯ ಕಸದ ರಾಶಿಯನ್ನು ತೆಗೆಯುವುದರಲ್ಲಿಯೇ ದಿನ ಕಳೆದರು.

ಪಟಾಕಿಯ ಬಿಡಿ ಭಾಗಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದವು. ಪೌರ ಕಾರ್ಮಿಕರು ಪಟಾಕಿ ಸಿಡಿತದಿಂದಾದ ಕಸವನ್ನು ಶುಚಿ ಮಾಡುವಲ್ಲಿ ಹರಸಾಹಸ ಪಟ್ಟರು. ಪಟಾಕಿಯ ಮದ್ದುಪುಡಿ, ಸೀಸಾ, ಸುರ್‌ಸುರ್ ಬತ್ತಿಯ ಕಡ್ಡಿಗಳನ್ನು ಪ್ರತ್ಯೇಕ ಕಸವಾಗಿ ಬೇರ್ಪಡಿಸಿದರು.

ಈ ಬಗ್ಗೆ ವಿಜಯನಗರ ವಾರ್ಡ್‌ವೊಂದರಲ್ಲಿ ಕಸ ಗುಡಿಸುತ್ತಿದ್ದ ಪೌರ ಕಾರ್ಮಿಕ ಮಹಿಳೆ ಮಾತನಾಡಿ, ಪ್ರತಿದಿನ ಕಸ ಗುಡಿಸುವುದಕ್ಕೆ ಸಾಕು ಸಾಕಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಕಸವನ್ನು ಗುಡಿಸಿ, ಗುಡಿಸಿಯೇ ಬೆನ್ನು ಮೂಳೆ ಸವೆಯುತ್ತದೆ. ಕಸವನ್ನು ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಯಾರು ಚಿಂತಿಸುವುದಿಲ್ಲ. ಕಸ ಶುಚಿ ಮಾಡಲು ಪ್ರತಿದಿನ ಪೌರ ಕಾರ್ಮಿಕರು ಬರುತ್ತಾರೆ ಎಂಬ ಧೈರ್ಯದ ಮೇರೆಗೆ ಕಸವನ್ನು ಹೆಚ್ಚು ಮಾಡುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News